ಖರೀದಿ ಕೇಂದ್ರ ಆರಂಭಕ್ಕೆ ಪ್ರಸ್ತಾವನೆ: ಡಿಸಿ ಸುಂದರೇಶ ಬಾಬು ಸೂಚನೆ

070822 Koppal DC Meeting
ಹೆಸರು ಖರೀದಿ ಕೇಂದ್ರ ಆರಂಭ ಸಂಬಂಧ ಶನಿವಾರ ಕೊಪ್ಪಳದಲ್ಲಿ ಡಿಸಿ ಎಂ.ಸುಂದರೇಶ ಬಾಬು ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಸಭೆ ನಡೆಯಿತು.
Published on

ಕೊಪ್ಪಳ: ಜಿಲ್ಲೆಯಲ್ಲಿ ಹೆಸರು ಕಾಳು ಖರೀದಿ ಕೇಂದ್ರ ತೆರೆಯಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದೆಂದು ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ತಿಳಿಸಿದರು.
ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಟಾಸ್ಕ್‌ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.

ಹೆಸರು ಬೆಳೆ ಕಟಾವು ಹಂತದಲ್ಲಿದ್ದು, ಬೆಂಬಲ ಬೆಲೆ ಯೋಜನೆಯಡಿ ಖರೀದಿ ಕೇಂದ್ರ ಆರಂಭಿಸಬೇಕಿದೆ. ಬಿತ್ತನೆ ಕ್ಷೇತ್ರ, ಇಳುವರಿ ಪ್ರಮಾಣದ ಅಂದಾಜು ಆಧರಿಸಿ ಕೇಂದ್ರ ಆರಂಭಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಬಗ್ಗೆ ರೈತರಿಗೆ ಮಾಹಿತಿ ಮುಟ್ಟಿಸಿ. ಸರ್ಕಾರದಿಂದ ಸೂಚನೆ ಬಂದ ತಕ್ಷಣ ಗುರುತಿಸಿರುವ ಸ್ಥಳಗಳಲ್ಲಿ ತ್ವರಿತವಾಗಿ ಕೇಂದ್ರ ಆರಂಭಿಸಿ. ಉತ್ಪನ್ನ ದಾಸ್ತಾನಿಗೆ ಗೋದಾಮುಗಳ ಸ್ಥಳ ಲಭ್ಯತೆ ಸೇರಿ ಅಗತ್ಯ ಸಿದ್ಧತೆ ಮಾಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಎಪಿಎಂಸಿ ಸಹಾಯಕ ನಿರ್ದೇಶಕ ಎಸ್.ಶ್ಯಾಮ್ ಮಾತನಾಡಿ, ಜಿಲ್ಲೆಯಲ್ಲಿ 21,307 ಹೆಕ್ಟೇರ್ ಪ್ರದೇಶದಲ್ಲಿ ಹೆಸರುಕಾಳು ಬಿತ್ತನೆಯಾಗಿದೆ. ಒಂದು ಹೆಕ್ಟರ್‌ಗೆ ಅಂದಾಜು 8 ಕ್ವೀಂಟಾಲ್‌ನಂತೆ ಸುಮಾರು 1 ಲಕ್ಷ 80 ಸಾವಿರ ಕ್ವೀಂಟಾಲ್ ಇಳುವರಿ ಬರುವ ಸಾಧ್ಯತೆ ಇದೆ. ಮಾರುಕಟ್ಟೆಯಲ್ಲಿ ಕ್ವಿಂಟಾಲ್‌ಗೆ 6400ರೂ.ನಿಂದ 7400ರೂ.ಬೆಲೆ ಇದೆ. ಪ್ರತಿ ವರ್ಷದಂತೆ ಕೊಪ್ಪಳ ಎಪಿಎಂಸಿ ಹಾಗೂ ಹಿರೇಸಿಂಧೋಗಿ, ತಾವರಗೇರಾ, ಹನುಮಸಾಗರ, ಕುಕನೂರು ಹಾಗೂ ಯಲಬುರ್ಗಾ ಟಿಎಪಿಎಂಸಿಗಳಲ್ಲಿ ಖರೀದಿ ಕೇಂದ್ರ ಆರಂಭಿಸಲಾಗುವುದೆಂದು ಮಾಹಿತಿ ನೀಡಿದರು. ಉಪ ವಿಭಾಗಾಧಿಕಾರಿ ಬಸವಣ್ಣಪ್ಪ ಕಲಶೆಟ್ಟಿ, ಜಂಟಿ ಕೃಷಿ ನಿರ್ದೇಶಕ ಸದಾಶಿವ, ಆಹಾರ ಇಲಾಖೆ ಡಿಡಿ ಮಲ್ಲಿಕಾರ್ಜುನ ಇತರ ಅಧಿಕಾರಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net