

ಕೊಪ್ಪಳ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ವಿರುದ್ಧ ಅ.31ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಬಣಜಿಗ ಸಮುದಾಯ ಮುಖಂಡ ಗವಿಸಿದ್ದಪ್ಪ ಕೊಪ್ಪಳ ತಿಳಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿ ಮಾತನಾಡಿದರು. ಅ.21ರಂದು ಹುಕ್ಕೇರಿಯಲ್ಲಿ ಪಂಚಮಸಾಲಿ ಸಮಾವೇಶದಲ್ಲಿ ‘ಬಣಜಿಗ ಸಮುದಾಯದವರು ಮೋಸಗಾರರು’ ಎಂದು ಶಾಸಕ ಬಸನಗೌಡ ಯತ್ನಾಳ್ ಹಾಗೂ ವಿಜಯಾನಂದ ಕಾಶಪ್ಪನವರ್ ಹೇಳುವ ಮೂಲಕ ಸಮುದಾಯದ ಜನರಿಗೆ ನೋವುಂಟು ಮಾಡಿದ್ದಾರೆ. ಈ ಹಿಂದೆಯೂ ಮಾತನಾಡಿದ್ದರು. ಅವರ ಮೀಸಲು ಹೋರಾಟಕ್ಕೆ ನಮ್ಮ ತಕರಾರಿಲ್ಲ. ವಿನಾ ಕಾರಣ ನಮ್ಮ ಸಮುದಾಯದ ಬಗ್ಗೆ ಮಾತಾಡುವುದು ಸರಿಯಲ್ಲ. ಇದನ್ನು ಖಂಡಿಸಿ ಅ.31ರಂದು ಸಂಘದ ತಾಲೂಕು ಸಮಿತಿ ನೇತೃತ್ವದಲ್ಲಿ ಸಾವಿರಾರು ಜನರು ಶಾಂತಿಯುತ ಪ್ರತಿಭಟನೆ ನಡೆಸಲಿದ್ದಾರೆ ಎಂದರು. ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ವಿಶ್ವನಾಥ ಬಳ್ಳೊಳ್ಳಿ, ಪ್ರಧಾನ ಕಾರ್ಯದರ್ಶಿ ಬಸವರಾಜ ಕಮಲಾಪುರ, ತಾಲೂಕು ಅಧ್ಯಕ್ಷ ವೀರಣ್ಣ ಬುಳ್ಳಾ, ಮಹಿಳಾ ಘಟಕ ತಾಲೂಕು ಅಧ್ಯಕ್ಷೆ ಅಪರ್ಣಾ ಬಳ್ಳೊಳ್ಳಿ, ನಗರ ಘಟಕ ಅಧ್ಯಕ್ಷ ಅರವಿಂದ ಅಗಡಿ, ಮಂಜುನಾಥ ಅಂಗಡಿ ಇದ್ದರು.