ಕೊಪ್ಪಳದಲ್ಲಿ ಅ.10ರಂದು ಕಾಂಗ್ರೆಸ್ ಪದಾಧಿಕಾರಿಗಳ ಸಭೆ: ಡಿಸಿಸಿ ಅಧ್ಯಕ್ಷ ಶಿವರಾಜ ತಂಗಡಗಿ ಮಾಹಿತಿ

Shivaraj Tangadagi
SL
Published on

ಕೊಪ್ಪಳ: ಬಳ್ಳಾರಿಗೆ ಅ.15ರಂದು ಭಾರತ್ ಜೋಡೋ ಯಾತ್ರೆ ತಲುಪಲಿದ್ದು, ಪೂರ್ವಭಾವಿಯಾಗಿ ಜಿಲ್ಲೆಯಲ್ಲಿ ಅ.10ಕ್ಕೆ ಪದಾಧಿಕಾರಿಗಳ ಸಭೆ ನಡೆಸಲಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ ಆಗಮಿಸಲಿದ್ದಾರೆಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವರಾಜ ತಂಗಡಗಿ ತಿಳಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಬಳ್ಳಾರಿಯಲ್ಲಿ ಬೃಹತ್ ಸಮಾವೇಶ ನಡೆಯಲಿದ್ದು ಐದು ಲಕ್ಷಕ್ಕೂ ಅಧಿಕ ಜನರು ಭಾಗಿಯಾಗಲಿದ್ದಾರೆ. ಜಿಲ್ಲೆಯಿಂದ 35ಸಾವಿರ ಜನರನ್ನು ಕರೆದೊಯ್ಯಲಾಗುವುದು. ಇದಕ್ಕೆ ಪೂರ್ವಭಾವಿಯಾಗಿ ಜಿಲ್ಲೆಯಲ್ಲಿ ಕ್ಷೇತ್ರವಾರು ಸಭೆಗಳನ್ನು ನಡೆಸಲಾಗಿದೆ. ಮತ್ತೊಮ್ಮೆ ಅ.10ರಂದು ಸಿದ್ದರಾಮಯ್ಯ ನೇತೃತ್ವದಲ್ಲಿ ಪಕ್ಷದ ಶಾಸಕರು, ಮಾಜಿ ಶಾಸಕರು, ಸಂಸದರು ಹಾಗೂ ವಿವಿಧ ಪದಾಧಿಕಾರಿಗಳ ಸಭೆ ಹಮ್ಮಿಕೊಳ್ಳಲಾಗಿದೆ. ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್, ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಸೇರಿ ಇತರ ನಾಯಕರು ಭಾಗಿಯಾಗಲಿದ್ದಾರೆ. ಕೊಪ್ಪಳದ ಶಿವಶಾಂತವೀರ ಮಂಗಲ ಭವನದಲ್ಲಿ ಮಧ್ಯಾಹ್ನ 3ಗಂಟೆಗೆ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.

ದೇಶ, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಸಮಾಜ ಜಾತಿ, ಧರ್ಮದ ಆಧಾರದಲ್ಲಿ ತುಂಡು ತುಂಡಾಗಿದೆ. ಅದನ್ನು ಜೋಡಿಸಲು ಯಾತ್ರೆ ಆರಂಭಿಸಿದ್ದೇವೆ. ಜನರಿಂದ ನಿರೀಕ್ಷೆಗೂ ಮೀರಿ ಬೆಂಬಲ ವ್ಯಕ್ತವಾಗಿದೆ. ಇದರಿಂದ ಬಿಜೆಪಿಯವರಿಗೆ ನಡುಕ ಶುರುವಾಗಿದೆ. ವಿಚಲಿತರಾಗಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಸಿ.ಟಿ.ರವಿಯವರು ಸಿದ್ದರಾಮಯ್ಯ ಬಗ್ಗೆ ಹಗುರವಾಗಿ ಮಾತನಾಡುತ್ತಾರೆ. ಇವರಿಂದ ಹೇಳಿಸಿಕೊಳ್ಳುವಷ್ಟು ಸಣ್ಣ ರಾಜಕಾರಣಿ ಅವರಲ್ಲ. ಮಾತನಾಡುವಾಗ ನಾಲಿಗೆ ಬಿಗಿ ಹಿಡಿದುಕೊಳ್ಳಬೇಕು ಎಂದು ಗುಡುಗಿದರು. ಶಾಸಕ ರಾಘವೇಂದ್ರ ಹಿಟ್ನಾಳ್, ಮುಖಂಡರಾದ ಕೃಷ್ಣಾ ಇಟ್ಟಂಗಿ, ತೋಟಪ್ಪ ಕಾಮನೂರು, ವಕ್ತಾರ ರವಿ ಕುರುಗೋಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net