ಶುಶ್ರೂಷಕರ ನೇಮಕಾತಿಯಲ್ಲಿ ಅಕ್ರಮ

DR.RAVINDRANATH M.H.
Published on

ಕೊಪ್ಪಳ: ಎನ್‌ಎಚ್‌ಎಂ, ಎಂಸಿಎಚ್ ಹಾಗೂ ನಮ್ಮ ಕ್ಲಿನಿಕ್ ಯೋಜನೆಯಡಿ 28 ಶುಶ್ರೂಷಕರ ನೇಮಕಾತಿಯಲ್ಲಿ ಅಕ್ರಮ ನಡೆದಿದ್ದು, ಈ ಬಗ್ಗೆ ಆರೋಗ್ಯ ಇಲಾಖೆಯ ಸಹ ನಿರ್ದೇಶಕರು ನಡೆಸಿದ ವಿಚಾರಣೆಯಲ್ಲಿ ಸಾಬೀತಾಗಿದ್ದರೂ ಮೇಲಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲವೆಂದು ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ರವೀಂದ್ರನಾಥ ಎಂ.ಎಚ್. ಆರೋಪಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ನೇಮಕಾತಿ ವೇಳೆ ನಿಯಮಗಳನ್ನು ಕೈ ಬಿಡಲಾಗಿದೆ. ಡಿಸಿ ಹಾಗೂ ಜಿಪಂ ಸಿಇಒ ಅವರು ಸಹಿ ಮಾಡಿದ ಕಡತದಲ್ಲಿ ಐವರು ಅರ್ಹರೆಂದು ದಾಖಲಿಸಿದ್ದಾರೆ. ಆದರೆ ಆರು ಜನರನ್ನು ಆಯ್ಕೆ ಮಾಡಿ ಪಟ್ಟಿ ಪ್ರಕಟಿಸಿದ್ದಾರೆ. ಕೌಶಲಾಧಾರಿತ ಪರೀಕ್ಷೆಗೆ ಕೇವಲ 16 ಅಭ್ಯರ್ಥಿಗಳನ್ನು ಕರೆಸಲಾಗಿದೆ. ಮೆರಿಟ್, ರೋಸ್ಟರ್ ಪಾಲಿಸಿಲ್ಲ. ಈ ಬಗ್ಗೆ ಇಲಾಖೆ ಅಧಿಕಾರಿಗಳೇ ನಡೆಸಿದ ವಿಚಾರಣೆಯಲ್ಲಿ ಸಾಬೀತಾಗಿದೆ. ಹೀಗಾಗಿ ನೇಮಕಾತಿ ರದ್ದುಗೊಳಿಸಿ, ಹೊಸದಾಗಿ ನೇಮಿಸಿಕೊಳ್ಳುವಂತೆ ವರದಿ ನೀಡಿದ್ದರೂ ಪ್ರಯೋಜನವಾಗಿಲ್ಲ ಎಂದರು.

ಡಿಎಚ್‌ಒ 2017-18ರಲ್ಲಿ ಆರ್‌ಸಿಎಚ್ ಅಧಿಕಾರಿಯಾಗಿದ್ದಾಗ ಕೆಲವರನ್ನು ಅಕ್ರಮವಾಗಿ ನೇಮಿಸಿಕೊಂಡು ವೇತನ ಪಾವತಿಸಿದ್ದಾರೆ. ಇಲಾಖೆ ವಿಚಾರಣೆಯಲ್ಲಿ ಆರೋಪ ಸಾಬೀತಾಗಿದ್ದು, 36.47 ಲಕ್ಷ ರೂ. ಮರು ಪಾವತಿಸುವಂತೆ ಸೂಚಿಸಲಾಗಿದೆ. ಆದರೆ, ಮರು ವಿಚಾರಣೆಗೆ ಮನವಿ ಸಲ್ಲಿಸಿದ್ದು, ಮರು ವಿಚಾರಣೆಗೆ ತಡೆ ತಂದಿದ್ದಾರೆ. 20 ತಿಂಗಳು ಅನಧಿಕೃತ ಗೈರಾಗಿದ್ದರೂ, ಅವರನ್ನೇ ಡಿಎಚ್‌ಒ ಮಾಡಿದ್ದಾರೆ. ಜಿಲ್ಲೆಯ ಜನಪ್ರತಿನಿಧಿಗಳು ಅವರ ಬದಲಾವಣೆಗೆ ಸೂಚಿಸಿದರೂ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ನೆರವಿನಿಂದ ಮುಂದುವರೆದಿದ್ದಾರೆಂದು ಆರೋಪಿಸಿದರು. ಶರಣಪ್ಪ ಗೊಡಚಳ್ಳಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net