ತಪ್ಪುಗಳು ಮುಂದುವರಿದಲ್ಲಿ ಅಮಾನತು ಶಿಕ್ಷೆ, ತಂಗಡಗಿ ಎಚ್ಚರಿಕೆ

SHIVARAJ-TANGADIGI
Published on

ಕೊಪ್ಪಳ: ಕಲುಷಿತ ನೀರು ಸೇವನೆಯಿಂದ ಜಿಲ್ಲೆಯಲ್ಲಿ ಮೂವರು ಮೃತಪಟ್ಟಿದ್ದಾರೆ. ಇದು ಮುಂದುವರಿಯಬಾರದು. ಅಧಿಕಾರಿಗಳು ಸಮಸ್ಯೆ ಕಂಡುಬಂದಲ್ಲಿ ಖುದ್ದಾಗಿ ತೆರಳಿ ಪರಿಹರಿಸಿ. ತಪ್ಪುಗಳು ಮುಂದುವರಿದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳನ್ನು ಮುಲಾಜಿಲ್ಲದೆ ಅಮಾನತು ಮಾಡಲಾಗುವುದೆಂದು ಕನ್ನಡ ಮತ್ತು ಸಂಸ್ಕೃತಿ, ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಎಚ್ಚರಿಸಿದರು.


ನಗರದ ಜಿಪಂ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಸೋಮವಾರ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದರು.
ಜಿಲ್ಲೆಯಲ್ಲಿ ಜೆಜೆಎಂ ಕಾಮಗಾರಿ ಸರಿಯಾಗಿ ಅನುಷ್ಠಾನವಾಗಿಲ್ಲ. 600 ಕೋಟಿ ರೂ. ಮೊತ್ತದ ದೊಡ್ಡ ಕಾಮಗಾರಿ ಇದಾಗಿದ್ದು, ಅಧಿಕಾರಿಗಳು, ಗುತ್ತಿಗೆದಾರರ ನಿರ್ಲಕ್ಷೃದಿಂದ ಹಳ್ಳ ಹಿಡಿದಿದೆ. ನಿಯಮನುಸಾರ ಕಾಮಗಾರಿ ನಡೆದಿಲ್ಲ.

ಜನರಿಗೆ ಯೋಜನೆಯಡಿ ನೀರು ಪೂರೈಕೆಯಾಗುತ್ತಿಲ್ಲ. ಕೆಲವೆಡೆ ಕಲುಷಿತ ನೀರು ಕುಡಿವ ನೀರಿಗೆ ಬೆರೆತು ಜನ ಸಂಕಷ್ಟ ಅನುಭವಿಸುತ್ತಿದ್ದಾರೆ. ನೀವೆಲ್ಲ ಏನು ಮಾಡುತ್ತಿದ್ದೀರಿ ಎಂದು ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು.

ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ವಿಭಾಗದ ಅಧಿಕಾರಿ ಮಾತನಾಡಿ, ಯೋಜನೆಯಂತೆ ಕಾಮಗಾರಿ ನಡೆಸಲಾಗಿದೆ. ಕಾಮಗಾರಿಗೂ ಕ್ರಿಯಾ ಯೋಜನೆಗೆ ವ್ಯತ್ಯಾಸವಾಗಿದೆ. ಬಿಜಕಲ್‌ನಲ್ಲಿ ಕಲುಷಿತ ನೀರು ಪೂರೈಕೆ ಸಂಬಂಧ ಪ್ರಕರಣ ದಾಖಲಿಸಲಾಗಿದೆ. ವ್ಯತ್ಯಾಸ ಮೊತ್ತ ಪಾವತಿಗೆ ಸರ್ಕಾರಕ್ಕೆ ಪತ್ರ ಬರೆದಿರುವುದಾಗಿ ತಿಳಿಸಿದರು.

ಇದಕ್ಕೆ ಪ್ರತಿಕ್ರಯಿಸಿದ ಶಾಸಕರು, ಯೋಜನೆಗಿಂತ ಹೆಚ್ಚುವರಿ ಕಾಮಗಾರಿ ಮಾಡಿಸಿದ್ದೀರಿ. ಗುತ್ತಿಗೆದಾರರಿಗೆ ಬಿಲ್ ಮಾಡಿಲ್ಲ. ಹೀಗಾದಲ್ಲಿ ಕಾಮಗಾರಿ ಮುಂದುವರಿಯಲು ಸಮಸ್ಯೆಯಾಗುತ್ತದೆ. ಕೆಲಸಕ್ಕೆ ತಕ್ಕಂತೆ ಬಿಲ್ ಮಾಡಿ ಎಂದು ತಾಕೀತು ಮಾಡಿದರು.

ಜೆಜೆಎಂ ಕಳಪೆ ಕಾಮಗಾರಿ ಸಂಬಂಧ ನಿರ್ಲಕ್ಷೃವಹಿಸಿದವರ ವಿರುದ್ಧ ಪ್ರಕರಣ ದಾಖಲಿಸಿ. ಹಣಕಾಸು ಕೊರತೆ ಇದ್ದಲ್ಲಿ ತಿಳಿಸಿ. ನಿಮ್ಮ ನಿರ್ಲಕ್ಷೃಕ್ಕೆ ಜನರು ಸಾಯಬೇಕಾ? ಅವರು ಕಟ್ಟಿದ ತೆರಿಗೆಯಿಂದ ನಾವೆಲ್ಲ ಜೀವನ ಮಾಡುತ್ತಿದ್ದೇವೆ. ತಾಪಂ ಇಒ, ತಹಸೀಲ್ದಾರ್, ಜೆಇಗಳು ಜಂಟಿಯಾಗಿ ಪರಿಶೀಲನೆ ನಡೆಸಿ. ಪ್ರತಿ ತಾಲೂಕಿಗೆ ಜಿಲ್ಲಾಮಟ್ಟದ ನೋಡಲ್ ಅಧಿಕಾರಿಗಳನ್ನು ನೇಮಿಸಿ.

ನಿರಂತರ ಸಭೆ ನಡೆಸಿ ಪ್ರಗತಿ ಪರಿಶೀಲನೆ ನಡೆಸಿ. ಮುಂದಿನ ಕೆಡಿಪಿ ಸಭೆಯೊಳಗೆ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಿರಬೇಕು. ಸತ್ತವರ ಕುಟುಂಬಕ್ಕೆ ನಾವು ಪರಿಹಾರ ನೀಡಬಹುದು. ಇದರಿಂದ ಅವರ ಕಷ್ಟ ತೀರುವುದಿಲ್ಲ. ಬದಲಿಗೆ ಸಾವು ಸಂಭವಿಸದಂತೆ ಎಚ್ಚರಿಕೆ ವಹಿಸಿ. ಆರೋಗ್ಯಾಧಿಕಾರಿಗಳು ಸಮಸ್ಯಾತ್ಮಕ ಗ್ರಾಮದಲ್ಲಿ ಜನರು ಚೇತರಿಸಿಕೊಂಡ 15 ದಿನಗಳವರೆಗೆ ನಿಗಾವಹಿಸಿ ಎಂದು ಸಚಿವರು ಸೂಚಿಸಿದರು.

ತೋಟಗಾರಿಕೆ ಉಪನಿರ್ದೇಶಕ ಕೃಷ್ಣ ಉಕ್ಕುಂದ ಗಾಳಿ-ಮಳೆಗೆ ಹಾನಿಯಾದವರಿಗೆ ಪರಿಹಾರ ನೀಡಲಾಗುತ್ತಿದೆ ಎಂದರು. ಸಿಡಿಲು ಬಡಿದು ರೈತರೊಬ್ಬರ ಬಾಳೆ ತೋಟ ಸುಟ್ಟಿದೆ. ಅಲ್ಲಿಗೆ ನೀವು ತೆರಳಿಲ್ಲ. ಜಿಲ್ಲಾಮಟ್ಟದ ಅಧಿಕಾರಿಗಳು ಸಮಸ್ಯೆ ಕಂಡುಬಂದಲ್ಲಿ ತಕ್ಷಣ ಸ್ಥಳಕ್ಕೆ ತೆರಳಿ. ಕೆಳ ಹಂತದ ಅಧಿಕಾರಿಗಳ ಮೇಲೆ ಬಿಡಬೇಡಿ. ಸಮಸ್ಯೆ ಇದ್ದಲ್ಲಿ ಶಾಸಕರು, ನಮ್ಮ ಗಮನಕ್ಕೆ ತನ್ನಿ. ತಾಪಂ ಇಒಗಳು ಪಿಡಿಒಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಿ.

ಜನರು ಕರೆ ಮಾಡಿದಾಗ ಸೌಜನ್ಯದಿಂದ ಮಾತನಾಡಿ. ಅವರ ಸಮಸ್ಯೆಗೆ ಸ್ಪಂದಿಸಿ. ಎಲ್ಲದಕ್ಕೂ ನಾವೇ ಸೂಚಿಸುವವರೆಗೆ ಕಾಯಬೇಡಿ ಎಂದು ಸಚಿವ ತಂಗಡಗಿ ನಿರ್ದೇಶನ ನೀಡಿದರು. ಡಿಸಿ ಎಂ.ಸುಂದರೇಶ ಬಾಬು, ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ, ಉಪ ಅರಣ್ಯ ಸಂರಕ್ಷಣಾಧಿಕಾರಿ ಕಾವ್ಯಾ ಚತುರ್ವೇದಿ ಇದ್ದರು.

ಅಕ್ರಮ ಚಟುವಟಿಕೆ ಸಹಿಸಲ್ಲ

ಜಿಲ್ಲೆಯಲ್ಲಿ ಎಗ್ಗಿಲ್ಲದೆ ಇಸ್ಪೀಟ್ ಜೂಜಾಟ ನಡೆಯುತ್ತಿದೆ. ಆದರೂ ಪೊಲೀಸರು ನಿಯಂತ್ರಿಸುತ್ತಿಲ್ಲ. ಗುಡ್ಡದಲ್ಲಿ ಆಡುತ್ತಿದ್ದಾರೆ. ಕೆಲವರು ಅದನ್ನೇ ಉದ್ಯೋಗ ಮಾಡಿಕೊಂಡಿದ್ದಾರೆ. ನಿಯಂತ್ರಣ ಕ್ರಮವಾಗುತ್ತಿಲ್ಲ. ಇನ್ನು ಮುಂದೆ ಇದೆಲ್ಲ ನಡೆಯಬಾರದು. ಹಿಂದಿನದು ನಾನು ಕೇಳುವುದಿಲ್ಲ. ನೀವು ಎಲ್ಲ ನಿಯಂತ್ರಣದಲ್ಲಿದೆ ಎಂದು ಸುಳ್ಳು ಹೇಳಬೇಡಿ.

ಬೇಕಿದ್ದರೆ ಜೂಜಾಟ ನಡೆವ ಸ್ಥಳದ ಲೊಕೇಷನ್ ನಿಮ್ಮ ವಾಟ್ಸಾಪ್‌ಗೆ ಕಳಿಸುವೆ. ಇದು ಮುಂದುವರಿದಲ್ಲಿ ಆಯಾ ಠಾಣಾಧಿಕಾರಿಗಳನ್ನೇ ಹೊಣೆಯಾಗಿಸಿ ತಲೆದಂಡ ಪಡೆಯಲಾಗುವುದೆಂದು ಸಚಿವ ಶಿವರಾಜ ತಂಗಡಗಿ ಪೊಲೀಸರನ್ನು ಎಚ್ಚರಿಸಿದರು.

ಜನರಿಗೆ ಜಾಗೃತಿ ಮೂಡಿಸಿ

ನಮ್ಮ ಸರ್ಕಾರ ಐದು ಗ್ಯಾರಂಟಿಗಳ ಪೈಕಿ ಶಕ್ತಿ ಯೋಜನೆಗೆ ಚಾಲನೆ ನೀಡಿದೆ. ಜುಲೈನಿಂದ ಗೃಹ ಜ್ಯೋತಿ, ಪಡಿತರ ವಿತರಣೆ ಆಗಲಿದೆ. ಜನರಿಗೆ ವಿದ್ಯುತ್ ದರ ಏರಿಕೆ ಬಗ್ಗೆ ಗೊಂದಲಗಳಿವೆ. ಇಲಾಖೆ ಅಧಿಕಾರಿಗಳು ಪರಿಹರಿಸುವ ಕೆಲಸ ಮಾಡಿ. ಯಾಕೆ ಬಿಲ್ ಹೆಚ್ಚಾಗಿದೆ, ಯಾವಾಗಿನಿಂದ ಆಗಿದೆ, ಅದಕ್ಕೆ ಕಾರಣಗಳೇನು, ಗೃಹ ಜ್ಯೋತಿ ಯೋಜನೆ ಯಾರಿಗೆ ಅನ್ವಯ ಆಗಲಿದೆ? ಎಂಬಿತ್ಯಾದಿ ಅನುಮಾನಗಳನ್ನು ಪರಿಹರಿಸಿ.

ಪಡಿತರ ವಿತರಣೆಯಲ್ಲಿ ಲೋಪವಾಗದಂತೆ ನೋಡಿಕೊಳ್ಳಿ. ಸರಿಯಾಗಿ ಜನರಿಗೆ ವಿತರಣೆ ಮಾಡುವಂತವರಿಗೆ ಪರವಾನಗಿ ನೀಡಿ. ಯಾರೋ ಶಿಫಾರಸು ಮಾಡುತ್ತಾರೆಂದು ಪರವಾನಗಿ ನೀಡಬೇಡಿ ಎಂದು ಅಧಿಕಾರಿಗಳಿಗೆ ತಂಗಡಗಿ ಪಾಠ ಮಾಡಿದರು.

ಹುಲಿಗಿಗೆ ಭೇಟಿ

ಸಭೆಗೆ ಆಗಮಿಸುವ ಮುನ್ನ ಸಚಿವ ಶಿವರಾಜ ತಂಗಡಗಿ ಕೊಪ್ಪಳ ತಾಲೂಕಿನ ಹುಲಿಗಿಯ ಹುಲಿಗೆಮ್ಮ ದೇವಿ ಸನ್ನಿಧಾನಕ್ಕೆ ಭೇಟಿ ನೀಡಿದರು. ವಿಶೇಷ ಪೂಜೆ ಸಲ್ಲಿಸಿ ದೇವಿ ಆಶೀರ್ವಾದ ಪಡೆದರು. ಬಳಿಕ ಕೊಪ್ಪಳ ಜಿಲ್ಲಾಡಳಿತ ಭವನದಲ್ಲಿ ನೂತನ ಸಚಿವರ ಕಚೇರಿ ಕೊಠಡಿ ಉದ್ಘಾಟಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net