

ಕೊಪ್ಪಳ: ನಾಡಿನ ಶಕ್ತಿ ದೇವತೆ ಹುಲಿಗಿಯ ಹುಲಿಗೆಮ್ಮ ದೇವಿ ದರ್ಶನಕ್ಕೆ ಆಗಮಿಸುವ ಭಕ್ತರಿಗಾಗಿ ಅಮ್ಮ ನಿಲಯ ನಿರ್ಮಿಸಿದ್ದು, ಇನ್ನಷ್ಟು ಸೌಲಭ್ಯ ಹೆಚ್ಚಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್ ಭರವಸೆ ನೀಡಿದರು.
ತಾಲೂಕಿನ ಹುಲಿಗಿ ಗ್ರಾಮದಲ್ಲಿ ಸೋಮವಾರ ಅಮ್ಮ ನಿಲಯ ಕಟ್ಟಡ ಉದ್ಘಾಟಿಸಿ ಮಾತನಾಡಿದರು. 10.27 ಕೋಟಿ ರೂ. ವೆಚ್ಚದಲ್ಲಿ ನಿಲಯ ನಿರ್ಮಿಸಲಾಗಿದೆ. ನೆಲ ಮಹಡಿಯಲ್ಲಿ ಭಕ್ತರಿಗಾಗಿ 15 ಕೊಠಡಿಗಳು, ಶುಭಕಾರ್ಯಗಳಿಗೆ ಹಾಲ್ ಮತ್ತು ಅಡುಗೆ ಕೋಣೆ ಇದೆ. ಮೊದಲನೇ ಮಹಡಿಯಲ್ಲಿ 30 ಕೊಠಡಿಗಳಿವೆ ಎಂದರು.
ದೇವಾಲಯದಲ್ಲಿ ಉತ್ಪತ್ತಿಯಾಗುವ ಘನ, ದ್ರವ ತ್ಯಾಜ್ಯ ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಅಂದಾಜುಪಟ್ಟಿ ರಚಿಸಿದ್ದು, ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಲಾಗುವುದು. ವಾಹನಗಳ ಪಾರ್ಕಿಂಗ್‌ಗಾಗಿ ದಾಸೋಹ ಮಂಟಪದಿಂದ ವಾಣಿಜ್ಯ ಮಳಿಗೆವರೆಗೆ ಖಾಲಿ ಜಾಗದಲ್ಲಿ ಸಿಸಿ ಹಾಕಿಸಿ ಪ್ರತ್ಯೇಕ ಸೌಲಭ್ಯ ಕಲ್ಪಿಸಲಾಗುವುದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಸಿಂಟಗಾಲೂರು ಏತ ನೀರಾವರಿ ಯೋಜನೆ ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು. ಗಣಿ ಮತ್ತು ಭೂ ವಿಜ್ಞಾನ ಸಚಿವ ಹಾಲಪ್ಪ ಆಚಾರ್, ಸಂಸದ ಸಂಗಣ್ಣ ಕರಡಿ, ಶಾಸಕ ರಾಘವೇಂದ್ರ ಹಿಟ್ನಾಳ್, ವಿಪ ಸದಸ್ಯೆ ಹೇಮಲತಾ ನಾಯಕ, ಜಿಪಂ ಮಾಜಿ ಅಧ್ಯಕ್ಷ ಟಿ.ಜನಾರ್ದನ ಇತರರಿದ್ದರು.
ಉಸ್ತುವಾರಿ ಮಂತ್ರಿಗೆ ೇರಾವ್: ಕಾರ್ಯಕ್ರಮ ಮುಗಿಸಿ ತೆರಳುತ್ತಿದ್ದ ಸಚಿವ ಆನಂದ ಸಿಂಗ್‌ಗೆ ಹುಲಿಗಿ ಗ್ರಾಮಸ್ಥರು ೇರಾವ್ ಹಾಕಿದರು. ಗ್ರಾಮದ ಮಧ್ಯದಲ್ಲಿ ರೈಲ್ವೆ ಹಳಿ ಹಾದು ಹೋಗಿದೆ. ಆದರೆ ಮೇಲ್ಸೇತುವೆ ನಿರ್ಮಿಸುತ್ತಿಲ್ಲ. ರೈಲ್ವೆ ಇಲಾಖೆ ಸೇತುವೆ ಮಂಜೂರು ಮಾಡಿದರೂ ಕಾಮಗಾರಿ ಆರಂಭವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರ ಅನುದಾನ ಬಿಡುಗಡೆ ಮಾಡಿ ಭೂ ಸ್ವಾಧೀನ ಪಡಿಸಿಕೊಳ್ಳಬೇಕಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಬಳಿಕ ಸಂಸದ, ಶಾಸಕ ಜನರನ್ನು ಸಮಾಧಾನಿಸಿದರು.
ರಜತ ಉತ್ಸವದ ದಿನಾಂಕ ಗೊತ್ತಿಲ್ಲ: ಕಾರ್ಯಕ್ರಮ ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದ ಸಚಿವ ಆನಂದ ಸಿಂಗ್, ಜಿಲ್ಲಾ ರಜತ ಮಹೋತ್ಸವದ ಬಗ್ಗೆ ಅರಿವಿಲ್ಲದೆ ಮಾ.14, 15ರಂದು ಮಾಡಲಾಗುವುದೆಂದರು. ಆನೆಗೊಂದಿ, ಕನಕಗಿರಿ ಉತ್ಸವಗಳ ಬಗ್ಗೆಯೂ ಗೊತ್ತಿಲ್ಲವೆಂದರು. ತಕ್ಷಣ ಡಿಸಿ ಸುಂದರೇಶ ಬಾಬು ಜಿಲ್ಲಾ ಉತ್ಸವ ಮಾ.10, 11ರಂದು ಎಂದು ಹೇಳಿದರು. ಜಿಲ್ಲಾ ಉಸ್ತುವಾರಿ ವಹಿಸಿಕೊಂಡಿದ್ದರೂ ಸಿಂಗ್ ಜಿಲ್ಲೆಯ ಅಭಿವೃದ್ಧಿ ಹಾಗೂ ಕಾಮಗಾರಿಗಳ ಬಗ್ಗೆ ಆಸಕ್ತಿ ತೋರುತ್ತಿಲ್ಲ. ರಜತ ಮಹೋತ್ಸವಕ್ಕೆ ತಮ್ಮ ಇಲಾಖೆಯಿಂದ 50 ಲಕ್ಷ ರೂ. ಅನುದಾನ ಕೊಟ್ಟಿದ್ದು ಬಿಟ್ಟರೆ, ಈವರೆಗೂ ಒಂದು ಸಭೆ ನಡೆಸಿಲ್ಲ. ಜಿಲ್ಲಾಡಳಿತವೇ ಏಕಾಂಗಿಯಾಗಿ ಕಾರ್ಯಕ್ರಮ ಆಯೋಜಿಸುತ್ತಿದೆ.