ಮನೆ ಕುಸಿದು ವೃದ್ಧೆ ಸಾವು

051022 Matturu Village Home Collapsed
Published on

ಕೊಪ್ಪಳ: ತಾಲೂಕಿನ ಮತ್ತೂರು ಗ್ರಾಮದಲ್ಲಿ ಮಣ್ಣಿನ ಚಾವಣಿ ಕುಸಿದು ಅಂಧ ವೃದ್ಧೆಯೊಬ್ಬಳು ಬುಧವಾರ ಮೃತಪಟ್ಟಿದ್ದಾಳೆ. ಮನೆಯಲ್ಲಿದ್ದ ಇನ್ನಿಬ್ಬರು ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಸಮ್ಮ (65) ಮೃತ ವೃದ್ಧೆ. ಶಿವನಗೌಡ ಹಾಗೂ ಶಂಕ್ರಮ್ಮ ಎಂಬುವವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸಿಂದೋಗಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಶಿವನಗೌಡರಿಗೆ ಇಬ್ಬರು ಪತ್ನಿಯರಿದ್ದು, ಇಬ್ಬರೂ ಅಂಧರು. ಇತ್ತೀಚೆಗೆ ಮಳೆ ಸುರಿದಿದ್ದು, ಮಣ್ಣಿನ ಮನೆಯಾಗಿದ್ದರಿಂದ ನೆನೆದಿದೆ. ಮೂವರೂ ಮನೆಯಲ್ಲಿದ್ದಾಗ ಏಕಾಏಕಿ ಕುಸಿದಿದ್ದು, ಮಣ್ಣಿನಡಿ ಸಿಲುಕಿದ್ದಾರೆ. ತಕ್ಷಣ ಗಮನಿಸಿದ ಅಕ್ಕಪಕ್ಕದವರು ರಕ್ಷಣೆ ಮಾಡಿದ್ದಾರೆ. ಮಣ್ಣಿನಡಿ ಸಿಲುಕಿದ ಬಸಮ್ಮ ಸ್ಥಳದಲ್ಲೇ ಮೃತಪಟ್ಟರೆ, ಉಳಿದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಳವಂಡಿ ಪೊಲೀಸ್‌ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net