

ಕುಷ್ಟಗಿ: ಓದುವ ಅಭಿರುಚಿ ಹೆಚ್ಚಿಸುವ ಹಾಗೂ ಸಮಾಜದಲ್ಲಿ ಪರಿವರ್ತನೆ ತರುವ ಸಾಹಿತ್ಯ ರಚನೆಯಾಗಬೇಕಿದೆ ಎಂದು ಕಂದಕೂರಿನ ಸರ್ಕಾರಿ ಹಿಪ್ರಾ ಶಾಲೆಯ ಶಿಕ್ಷಕ ಕುಮಾರಸ್ವಾಮಿ ಹಿರೇಮಠ ಹೇಳಿದರು.
ಇಲ್ಲಿನ ಬಸವನಗರದಲ್ಲಿ ಗುರುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ತಾಲೂಕಿನ ನವಲಹಳ್ಳಿಯ ಶಿವನಗೌಡ ಪೊಲೀಸ್ ಪಾಟೀಲರ ‘ಆಂತರ್ಯದ ಬೆಳಗು’ ಕವನ ಸಂಕಲನ ಬಿಡುಗಡೆಗೊಳಿಸಿ ಮಾತನಾಡಿದರು. ಕವಿ ಪೂರ್ವಗ್ರಹ ಪೀಡಿತರಾಗದೆ ಸಾಮಾಜಿಕ ಕಾಳಜಿ ಹೊಂದಿ ಸಾಹಿತ್ಯ ರಚಿಸಬೇಕು. ಸಾಮಾಜಿಕ, ರಾಜಕೀಯ ಬದಲಾವಣೆ ಜತೆಗೆ ಜನಸಾಮಾನ್ಯನ ಮೇಲೆ ಪ್ರಭಾವ ಬೀರುವ ಸಾಹಿತ್ಯ ಹೊರಹೊಮ್ಮಬೇಕಿದೆ. ಉದಯೋನ್ಮುಖ ಸಾಹಿತಿಗಳ ಕೃತಿಗಳ ಪ್ರಕಾಶನ ಹಾಗೂ ಬಿಡುಗಡೆಗೆ ಪ್ರೋತ್ಸಾಹ ನೀಡಬೇಕಿದೆ ಎಂದರು.
ಮದ್ದಾನೇಶ್ವರ ಮಠದ ಕರಿಬಸವ ಶಿವಾಚಾರ್ಯರು, ಎಂ.ಗುಡದೂರಿನ ನೀಲಕಂಠ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ನವಲಹಳ್ಳಿಯ ರಾಚಪ್ಪ ಕಡೇಕೊಪ್ಪ ಅಧ್ಯಕ್ಷತೆ ವಹಿಸಿದ್ದರು. ಕೊಪ್ಪಳದ ಕಾಳಿದಾಸ ಪ್ರೌಢಶಾಲೆ ಮುಖ್ಯಶಿಕ್ಷಕ ಡಿ.ರಾಮಣ್ಣ ಅಲ್ಮರ್ಸಿಕೇರಿ, ಪುಸ್ತಕ ಕುರಿತು ಮಾತನಾಡಿದರು. ಪ್ರಗತಿಪರ ರೈತ ದೇವೇಂದ್ರಪ್ಪ ಬಳೂಟಗಿ, ಜಿಪಂ ಮಾಜಿ ಸದಸ್ಯ ಕೆ.ಮಹೇಶ, ಕಸಾಪ ತಾಲೂಕು ಅಧ್ಯಕ್ಷ ವೀರೇಶ ಬಂಗಾರಶೆಟ್ಟರ್, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ನಟರಾಜ ಸೋನಾರ, ಸಾಹಿತಿಗಳಾದ ಡಾ.ಕೆ.ಶರಣಪ್ಪ ನಿಡಶೇಸಿ, ಬಸವರಾಜ ಕೊಂಡಗುರಿ, ರವೀಂದ್ರ ಬಾಕಳೆ, ಶಿವನಗೌಡ ಪೊಲೀಸ್ ಪಾಟೀಲ್, ಮೌನೇಶ ನವಲಹಳ್ಳಿ, ದೊಡ್ಡಬಸವ ಸಿ.ಪಾಟೀಲ್ ಇದ್ದರು.