

ಕುಷ್ಟಗಿ: ಮಠ-ಮಾನ್ಯಗಳಿಂದ ಶೈಕ್ಷಣಿಕ ಕ್ರಾಂತಿಯಾಗುತ್ತಿದೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು. ಪಟ್ಟಣದ ಬುತ್ತಿಬಸವೇಶ್ವರ ದೇವಸ್ಥಾನ ಆವರಣದಲ್ಲಿ ಬುಧವಾರ ಏರ್ಪಡಿಸಿದ್ದ ಅನ್ನದಾನೇಶ್ವರ ಪದವಿ ಪೂರ್ವ ಕಾಲೇಜಿನ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು. ಶಿಕ್ಷಣಕ್ಕೆ ಸವಾಲು ಎದುರಿಸುವ ಶಕ್ತಿ ಇದೆ. ಅದು ಬದುಕು ಕಟ್ಟಿಕೊಡುತ್ತದೆ. ಮಠಾಧೀಶರು ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿ ಧಾರ್ಮಿಕ ಜಾಗೃತಿಯ ಜತೆಗೆ ಬಡ ಮಕ್ಕಳಿಗೆ ಶಿಕ್ಷಣ ನೀಡಿ ಬೆಳಕಾಗುತ್ತಿದ್ದಾರೆ. ಅವರ ಕಾರ್ಯಕ್ಕೆ ಸಾರ್ವಜನಿಕರು ಕೈಜೋಡಿಸಬೇಕು ಎಂದು ಸಲಹೆ ನೀಡಿದರು.
ಶಾಸಕ ಅಮರೇಗೌಡ ಪಾಟೀಲ್ ಬಯ್ಯಪುರ ಮಾತನಾಡಿ, ದೇವಸ್ಥಾನ ನಿರ್ಮಾಣಕ್ಕೆ ದೇಣಿಗೆ ಸಂಗ್ರಹಿಸಿದಂತೆ ಶಿಕ್ಷಣ ಸಂಸ್ಥೆಗಳಿಗಾಗಿ ಅದರಲ್ಲಿಯೂ ಸರ್ಕಾರಿ ಶಾಲೆಗಳ ಉನ್ನತಿಗೆ ನೆರವು ನೀಡಬೇಕಿದೆ. ಶೈಕ್ಷಣಿಕವಾಗಿ ಹಿಂದುಳಿದಿರುವ ತಾಲೂಕಿನಲ್ಲಿ ವಿಜ್ಞಾನ, ವಾಣಿಜ್ಯ ವಿಷಯಕ್ಕೆ ಸಂಬಂಧಿಸಿದ ಕಾಲೇಜು ಆರಂಭಿಸಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅನುಕೂಲ ಕಲ್ಪಿಸಿರುವ ಅನ್ನದಾನ ಮಹಾಶಿವಯೋಗಿಗಳು ಶೈಕ್ಷಣಿಕ ಕ್ರಾಂತಿ ಮಾಡಿದ್ದಾರೆ ಎಂದರು.
ಹಾಲಕೇರಿಯ ಅನ್ನದಾನೇಶ್ವರ ಸಂಸ್ಥಾನ ಮಠದ ಮುಪ್ಪಿನ ಬಸವಲಿಂಗ ಸ್ವಾಮೀಜಿ, ಮದ್ದಾನೇಶ್ವರ ಮಠದ ಕರಿಬಸವ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಾಜಿ ಶಾಸಕರಾದ ಕೆ.ಶರಣಪ್ಪ, ಹಸನಸಾಬ್ ದೋಟಿಹಾಳ, ಪ್ರಮುಖರಾದ ದೇವೇಂದ್ರಪ್ಪ ಬಳೂಟಗಿ, ಎಂ.ಜಿ.ಸೋಮನಕಟ್ಟಿ, ವೀರಣ್ಣ ಹಳ್ಳಿ, ಎಂ.ಎಸ್.ದಢೇಸುಗೂರುಮಠ, ಸಿ.ಎಂ.ಹಿರೇಮಠ, ಮಹಾಂತಯ್ಯ ಹಿರೇಮಠ, ನಾಗಪ್ಪ ಸೂಡಿ, ಸಂಗಯ್ಯ ವಸ್ತ್ರದ್, ಅಮರೇಶ್ವರ ಶೆಟ್ಟರ್, ವಿಶ್ವನಾಥ ಕಣ್ಣೂರು, ಮಹಾಂತೇಶ ಅಗಸಿಮುಂದಿನ, ಮಹಾಂತಯ್ಯ ಅರಳೆಲೆಮಠ, ಶರಣಪ್ಪ ಕುಡತಿನಿ, ಅಪ್ಪಣ್ಣ ನವಲೆ, ಅಂದಪ್ಪ ಬೀಳಗಿ, ಭೀಮನಗೌಡ ಆಲಿಹಾಲ, ರಾಜೇಶ ಪತ್ತಾರ, ಕಾಲೇಜು ಪ್ರಾಚಾರ್ಯ ಶ್ರೀಕಾಂತಗೌಡ ಪಾಟೀಲ್ ಇದ್ದರು.