ಸಿದ್ದರಾಮಯ್ಯ ಹಿಂದೆ ಮಾತ್ರ ಕುರುಬರಿಲ್ಲ: ವಿಪ ಸದಸ್ಯ ಎಚ್.ವಿಶ್ವನಾಥ ಟಾಂಗ್

09082022 h vishwanath
Published on

ಕೊಪ್ಪಳ: ಮಾಜಿ ಸಿಎಂ ಸಿದ್ದರಾಮಯ್ಯ ಹಿಂದೆ ಮಾತ್ರ ಕುರುಬ ಸಮುದಾಯ ಜನರಿಲ್ಲ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್‌ನಲ್ಲೂ ಕುರುಬ ನಾಯಕರಿದ್ದು, ಅವರ ಹಿಂದೆಯೂ ಇದ್ದಾರೆಂದು ವಿಪ ಸದಸ್ಯ ಎಚ್.ವಿಶ್ವನಾಥ ಹೇಳಿದರು.

ಕುಕನೂರು ತಾಲೂಕಿನ ಕುದರಿಮೋತಿ ಗ್ರಾಮದಲ್ಲಿ ಸುದ್ದಿಗಾರರ ಜತೆ ಮಾತನಾಡಿದರು. ಎಲ್ಲ ಸಮುದಾಯದ ನಾಯಕರ ಹಿಂದೆ ಅವರವರ ಸಮುದಾಯದ ಜನರಿರುತ್ತಾರೆ. ಸಿದ್ದರಾಮಯ್ಯ ಮೊದಲು ಎಲ್ಲಿದ್ದರು ? ಅವರನ್ನು ಕಾಂಗ್ರೆಸ್‌ಗೆ ಕರೆತಂದಿದ್ದು ಯಾರು ? ಅದನ್ನು ಮರೆಯಬಾರದೆಂದು ಸಿದ್ದುಗೆ ಟಾಂಗ್ ನೀಡಿದರು. ತಮ್ಮ ಮಗ ಕಾಂಗ್ರೆಸ್ ಸೇರುವ ಬಗ್ಗೆ ಪ್ರತಿಕ್ರಿಯಿಸಿ, ಆತನಿಗೆ 38 ವರ್ಷ. ನಿರ್ಧಾರ ತೆಗೆದುಕೊಳ್ಳುವ ಸ್ವಾತಂತ್ರೃ ಬೇಡವೆ? ಆತನಿಗೆ ಇಷ್ಟ ಬಂದ ಪಕ್ಷ ಸೇರಲಿ. ಅದಕ್ಕೆ ನಾನೇನು ಮಾಡಲಾಗದು ಎಂದರು.

ಬುಡ್ಗ ಜಂಗಮರು ಮೀಸಲಾತಿಗೆ ಅರ್ಹರು. ಆದರೆ, ವೀರಶೈವ ಜಂಗಮರು ತಾವೇ ಬೇಡ ಜಂಗಮರೆಂದು ಹೋರಾಟ ಮಾಡುತ್ತಿದ್ದಾರೆ. ವಕೀಲ ಬಿ.ಡಿ.ಹಿರೇಮಠಗೆ ಹುಚ್ಚು ಹಿಡಿದಂತಿದೆ. ಕಾನೂನು ಮೀರಿ ತಮಗೆ ಮೀಸಲು ಬೇಕೆಂಬುದು ನ್ಯಾಯವಲ್ಲ. ಇದನ್ನು ಬಸವಣ್ಣ ಸಹ ಒಪ್ಪುವುದಿಲ್ಲ. 12ನೇ ಶತಮಾನದಲ್ಲಿ ಅಸ್ಪಶ್ಯರ ಮೆಟ್ಟನ್ನು ತಲೆ ಮೇಲೆ ಹೊತ್ತು ಮೆರೆಸಿದವರು ಬಸವಣ್ಣ. ಅವರ ಅನುಯಾಯಿಗಳೆಂದು ಹೇಳಿಕೊಳ್ಳುವವರು ಬೇಡ ಜಂಗಮರ ಮೀಸಲು ಕಿತ್ತುಕೊಳ್ಳುತ್ತಿದ್ದಾರೆ. ಬೇಡ ಜಂಗಮರು ಇಲಿ, ಬೆಕ್ಕು, ಮೀನು ತಿನ್ನುತ್ತಾರೆ. ಅದನ್ನು ಫ್ರೀಡಂ ಪಾರ್ಕ್‌ನಲ್ಲಿ ಹೋರಾಟ ಮಾಡುತ್ತಿರುವ ಬಿ.ಡಿ.ಹಿರೇಮಠ ತಿನ್ನುತ್ತಾರಾ ಎಂದು ಸವಾಲೆಸೆದರು.

ಸಂವಿಧಾನ ಎಲ್ಲ ಅರ್ಹರಿಗೆ ಮೀಸಲು ನೀಡಿದೆ. ಆದರೆ, ಅರ್ಹರನ್ನು ಪಕ್ಕಕ್ಕೆ ಸರಿಸಿ ಅನರ್ಹರು ಮೀಸಲಾತಿ ಪಡೆಯಲು ಹೋರಾಡುತ್ತಿದ್ದಾರೆ. 2ಎ ಮೀಸಲಿಗಾಗಿ ಪಂಚಮಸಾಲಿಗಳು, ಎಸ್ಟಿ ಮೀಸಲಿಗಾಗಿ ಕುರುಬರು ಹೋರಾಡುತ್ತಿದ್ದಾರೆ. ಕಾಡು ಕುರುಬ, ಜೇನು ಕುರುಬ ಸಮುದಾಯಗಳು ಮೀಸಲಿಗೆ ಅರ್ಹರು. ಆದರೆ, ಊರೊಳಗಿನ ಕುರುಬರಿಗೆ ಯಾಕೆ ಮೀಸಲಾತಿ ನೀಡಬೇಕೆಂದು ಪ್ರಶ್ನಿಸಿದರು .

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net