ಕೂಡಲಸಂಗಮ ಶ್ರೀ ನಡೆ ಖಂಡನೀಯ : ಪಂಚಸೈನ್ಯ ಜಿಲ್ಲಾಧ್ಯಕ್ಷ ಸಂಗಮೇಶ ಬಾದವಾಡಗಿ ಹೇಳಿಕೆ

20092022 Koppal SANGAMESH BADAVADAGI
Published on

ಕೊಪ್ಪಳ: ಪ್ರವರ್ಗ 2ಎ ಮೀಸಲಾತಿಗಾಗಿ ಸಮುದಾಯದ ಎಲ್ಲರೂ ಶ್ರಮಿಸುತ್ತಿದ್ದಾರೆ. ಆದರೆ, ಕೂಡಲಸಂಗಮ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಏಕಪಕ್ಷೀಯ ನಿರ್ಣಯ ಕೈಗೊಂಡು ಸಿಎಂ ಬಸವರಾಜ ಬೊಮ್ಮಾಯಿ ನಿವಾಸದ ಎದುರು ಪ್ರತಿಭಟನೆ ನಡೆಸುತ್ತಿರುವುದು ಖಂಡನೀಯ ಎಂದು ಜಿಲ್ಲಾ ಲಿಂಗಾಯತ ಪಂಚಮಸಾಲಿ ಪಂಚಸೈನ್ಯ ಅಧ್ಯಕ್ಷ ಸಂಗಮೇಶ ಬಾದವಾಡಗಿ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸಮುದಾಯದ ಮುಖ್ಯಬೇಡಿಕೆಯಾದ ಮೀಸಲಾತಿಗಾಗಿ ಶ್ರೀಗಳು ಹೋರಾಟ ಮಾಡುತ್ತಿರುವುದು ಸ್ವಾಗತಾರ್ಹ. ಆದರೆ, ಹೋರಾಟದ ಹಾದಿ ಇತ್ತೀಚೆಗೆ ದಾರಿ ತಪ್ಪುತ್ತಿದೆ ಎಂಬ ಭಾವನೆ ಸಮುದಾಯದಲ್ಲಿ ಮೂಡಿದೆ. ಕೇವಲ ವಿಜಯಾನಂದ ಕಾಶಪ್ಪನವರ್, ಶಾಸಕ ಬಸನಗೌಡ ಯತ್ನಾಳ್ ಇತರರ ಮಾತಿಗೆ ಬೆಲೆ ನೀಡುತ್ತಿದ್ದಾರೆ. ಉಳಿದಂತೆ ಯಾವ ಜಿಲ್ಲೆಯ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಪಂಚಮಸಾಲಿ ಸಂಘಟನೆ ಮೊದಲು ಹುಟ್ಟಿಕೊಂಡಿದ್ದು ಯಲಬುರ್ಗಾದಲ್ಲಿ. ಹೀಗಿದ್ದರೂ ಹೋರಾಟ ಬಗ್ಗೆ ಜಿಲ್ಲೆಯ ಸಮುದಾಯದ ಮುಖಂಡರಿಗೆ ಮಾಹಿತಿ ನೀಡುತ್ತಿಲ್ಲ. ಬೆರಳೆಣಿಕೆ ನಾಯಕರೊಂದಿಗೆ ಸ್ಟಾರ್ ಹೋಟೆಲ್‌ನಲ್ಲಿ ಕುಳಿತು ಶ್ರೀಗಳು ನಿರ್ಧಾರ ಕೈಗೊಳ್ಳುತ್ತಿರುವುದು ಸರಿಯಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.

ಸಚಿವ ಸಿ.ಸಿ.ಪಾಟೀಲ್ ಶ್ರೀಗಳ ನಡೆ ಸರಿಯಲ್ಲವೆಂದಿದ್ದಾರೆ. ಅವರ ಅಭಿಪ್ರಾಯವನ್ನೂ ಗೌರವಿಸಬೇಕು. ಸಚಿವ ಮುರುಗೇಶ ನಿರಾಣಿ, ಮಾಜಿ ಸಿಎಂ ಯಡಿಯೂರಪ್ಪ ಸೇರಿ ಸಮುದಾಯದ ಎಲ್ಲ ಜನಪ್ರತಿನಿಧಿಗಳು, ಮುಖಂಡರು, ಶ್ರೀಗಳನ್ನು ಒಳಗೊಂಡು ಹೋರಾಟ ರೂಪಿಸಬೇಕು. ರಾಜಕೀಯೇತರ ವ್ಯಕ್ತಿಯೊಬ್ಬರನ್ನು ಅಧ್ಯಕ್ಷರನ್ನಾಗಿ ನೇಮಿಸಬೇಕು. ಎಲ್ಲರನ್ನೂ ಒಟ್ಟಾಗಿ ಕರೆದುಕೊಂಡು ಹೋರಾಟ ರೂಪಿಸಬೇಕು. ಗೌಡ ಲಿಂಗಾಯತ, ದೀಕ್ಷಾ ಲಿಂಗಾಯತ, ಮಲೇಗೌಡ ಸಮುದಾಯಗಳು ಪಂಚಮಸಾಲಿಗಳಲ್ಲ. ಅವರನ್ನು ಸೇರಿಸುವುದು ಸರಿಯಲ್ಲ. ಶ್ರೀಗಳು ತಕ್ಷಣ ತಮ್ಮ ನಡೆ ಬದಲಿಸಿ ಎಲ್ಲರನ್ನೂ ಒಟ್ಟುಗೂಡಿಸಬೇಕು. ಇಲ್ಲದಿದ್ದರೆ ಸಮುದಾಯದ ಮೇಲೆ ಪರಿಣಾಮ ಬೀರಲಿದೆ ಎಂದರು. ಜಿಲ್ಲಾ ಕಾರ್ಯದರ್ಶಿ ಪ್ರಭುರಾಜ ಕರ್ಲಿ, ಯುವ ಮುಖಂಡರಾದ ಪ್ರವೀಣಗೌಡ ತೊಂಡಿಹಾಳ, ವಿರೇಶ ಹಾಲಸಮುದ್ರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net