ಕನಕಗಿರಿ, ಕುಷ್ಟಗಿಗೆ ಅಭ್ಯರ್ಥಿ ಘೋಷಣೆ: ಮೂರು ಕ್ಷೇತ್ರದಲ್ಲಿ ಜೆಡಿಎಸ್ ಕಾದು ನೋಡುವ ತಂತ್ರ

Ashok Umaluti, Tukaram Surve, Veeresh mahantayyamatha
ಅಶೋಕ ಉಮಲೂಟಿ, ತುಕಾರಾಮ್ ಸುರ್ವೇ, ವೀರೇಶ ಮಹಾಂತಯ್ಯನಮಠ.
Published on

ವಿ.ಕೆ.ರವೀಂದ್ರ ಕೊಪ್ಪಳ

ಹಳೇ ಮೈಸೂರು ಭಾಗ ಹೊರತುಪಡಿಸಿ ಉಳಿದೆಡೆ ಜೆಡಿಎಸ್ ನಿರಾಶ್ರಿತರ ತಾಣವೆಂಬ ಹಣೆಪಟ್ಟಿಯಿಂದ ತಪ್ಪಿಸಿಕೊಂಡು ಕಾರ್ಯಕರ್ತರ ಮನ ಗೆಲ್ಲಲು ಮುಂದಾಗಿರುವ ದಳಪತಿಗಳು, ಚುನಾವಣೆಗೆ ಹಲವು ತಿಂಗಳಿರುವಾಗಲೇ ಅಭ್ಯರ್ಥಿಗಳ ಘೋಷಣೆ ಮಾಡಿದ್ದಾರೆ. ಜಿಲ್ಲೆಯ ಐದು ಕ್ಷೇತ್ರಗಳ ಪೈಕಿ ಎರಡಕ್ಕೆ ಅಭ್ಯರ್ಥಿಗಳನ್ನು ಘೋಷಿಸಿದ್ದು, ಮೂರರಲ್ಲಿ ಕಾದು ನೋಡುವ ತಂತ್ರಕ್ಕೆ ಶರಣಾದಂತಿದೆ.

ಜಿಲೆಯಲ್ಲಿ ಜೆಡಿಎಸ್ ಪ್ರಭಾವ ಕಡಿಮೆಯಾಗಿದ್ದರೂ, ಸೋಲು ಗೆಲುವಿನ ಲೆಕ್ಕಾಚಾರದಲ್ಲಿ ನಿರ್ಣಾಯಕ ಪಾತ್ರವಹಿಸಲಿದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಪಂಚರತ್ನ ಯೋಜನೆ ಮೂಲಕ ವಿಧಾನಸಭೆ ಚುನಾವಣೆಗೆ ದಳಪತಿಗಳು ರಣಕಣ ಸಿದ್ಧಪಡಿಸಿಕೊಳ್ಳುತ್ತಿದ್ದು, ಸೋಮವಾರ ಘೋಷಿಸಿದ 93 ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಜಿಲ್ಲೆಯ ಎಸ್ಸಿ ಮೀಸಲು ಕ್ಷೇತ್ರ ಕನಕಗಿರಿ ಹಾಗೂ ಕುಷ್ಟಗಿಗೆ ಯಾರೆಂಬುದನ್ನು ಬಹಿರಂಗಪಡಿಸಿದ್ದಾರೆ. ಕನಕಗಿರಿಗೆ ಈ ಹಿಂದೆ ನಿಯೋಜಿತ ಅಭ್ಯರ್ಥಿ ಎಂದು ಘೋಷಿಸಿದ್ದ ಅಶೋಕ ಉಮಲೂಟಿ ಅವರನ್ನೇ ಅಂತಿಮಗೊಳಿಸಲಾಗಿದೆ. ಕುಷ್ಟಗಿಗೆ ಹೊಸ ಮುಖ ಪರಿಚಯಿಸಿದ್ದು, ತುಕಾರಾಮ್ ಸರ್ವೇ ಎಂಬುವರನ್ನು ಅಧಿಕೃತಗೊಳಿಸಿದೆ.

ಒಂದೊಮ್ಮೆ ಜಿಲ್ಲೆಯಲ್ಲಿ ಕಾಯಂ ಖಾತೆ ಹೊಂದಿರುತ್ತಿದ್ದ ಜೆಡಿಎಸ್, ಕಳೆದೆರಡು ಚುನಾವಣೆಗಳಲ್ಲಿ ಬೇರೆ ಪಕ್ಷಗಳಲ್ಲಿ ಅವಕಾಶ ವಂಚಿತರ ಆಶ್ರಯ ತಾಣವಾಗಿ ಮಾರ್ಪಟ್ಟಿದೆ. ಚುನಾವಣೆ ಸಮಯದಲ್ಲಷ್ಟೇ ಪದಾಧಿಕಾರಿಗಳ ಚಟುವಟಿಕೆ ಗರಿಗೆದರುವುದು ಬಿಟ್ಟರೆ, ಸಂಘಟನೆ ಅಷ್ಟಕ್ಕಷ್ಟೇ. ಹೀಗಾಗಿ ಹಲವು ವರ್ಷಗಳಿಂದ ಪಕ್ಷ ಕಟ್ಟಿದವರು ಟಿಕೆಟ್ ವಂಚಿತರಾಗುತ್ತಿದ್ದು, ಅನ್ಯ ಪಕ್ಷಗಳಿಗೆ ವಲಸೆ ಹೋಗಿದ್ದಾರೆ. 2018ರ ವಿಧಾನಸಭಾ ಚುನಾವಣೆಯಲ್ಲೂ ಯಲಬುರ್ಗಾ ಹಾಗೂ ಗಂಗಾವತಿ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವಿನಲ್ಲಿ ಜೆಡಿಎಸ್ ಪ್ರಮುಖ ಪಾತ್ರವಹಿಸಿದ್ದನ್ನು ಜಿಲ್ಲೆಯ ರಾಜಕೀಯ ರಂಗ ಮರೆತಿಲ್ಲ.

ಬದಲಾದ ರಾಜಕೀಯದಲ್ಲಿ ಜಾತ್ಯತೀತ ಜನತಾದಳದಿಂದ ಕೊಪ್ಪಳ ಕ್ಷೇತ್ರದಲ್ಲಿ 2011, 2013ರಲ್ಲಿ ಸ್ಪರ್ಧಿಸಿದ್ದ ಪ್ರದೀಪಗೌಡ ಕವಲೂರು, ಬಿಜೆಪಿ ಸೇರಿದ್ದಾರೆ. 2018ರಲ್ಲಿ ಸ್ಪರ್ಧಿಸಿದ್ದ ಕೆ.ಎಂ.ಸೈಯದ್ ಕಾಂಗ್ರೆಸ್ ಪಕ್ಷಾಂತರವಾಗಿದ್ದು, ಜೆಡಿಎಸ್ ಕಟ್ಟಾಳು ವೀರೇಶ ಮಹಾಂತಯ್ಯನಮಠ ಅವರನ್ನು ಜಿಲ್ಲಾಧ್ಯಕ್ಷರನ್ನಾಗಿ ಇತ್ತೀಚೆಗಷ್ಟೇ ಆಯ್ಕೆ ಮಾಡಲಾಗಿದೆ. ಕಳೆದ ಕೆಲ ತಿಂಗಳ ಹಿಂದೆಯೇ ಚುನಾವಣೆ ಗುಂಗಿಗೆ ಜಾರಿರುವ ದಳಪತಿಗಳು ಹಲವು ಸುತ್ತಿನ ಸಭೆ, ಕಾರ್ಯಕ್ರಮಗಳನ್ನು ನಡೆಸಿ ಬುನಾದಿ ಚಟುವಟಿಕೆ ಪೂರ್ಣಗೊಳಿಸಿದ್ದಾರೆ. ಆಗಲೇ ಜಿಲ್ಲೆಯ ಮೂರು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ನಿಯೋಜಿಸಲಾಗಿತ್ತು. ಸೋಮವಾರ ಪ್ರಕಟವಾದ ಪಟ್ಟಿಯಲ್ಲಿ ಎರಡು ಕ್ಷೇತ್ರಗಳಿಗೆ ಮಾತ್ರ ಅಭ್ಯರ್ಥಿ ಅಂತಿಮಗೊಳಿಸಿದ್ದು, ಮೂರನ್ನು ಕಾಯ್ದಿರಿಸಿರುವುದು ಕುತೂಹಲ ಮೂಡಿಸಿದೆ.

ಹೊಸಮುಖಗಳೇ ಕಣಕ್ಕೆ: ಕುಷ್ಟಗಿ ಹಾಗೂ ಕನಕಗಿರಿ ಕ್ಷೇತ್ರಗಳಲ್ಲಿ ಕಳೆದೆರಡು ಚುನಾವಣೆಯಿಂದ ಹೊಸಬರಿಗೆ ಜೆಡಿಎಸ್ ಮಣೆ ಹಾಕುತ್ತಿದೆ. ಕುಷ್ಟಗಿಯಿಂದ 2008, 2013ರಲ್ಲಿ ಕೆ.ಶರಣಪ್ಪ, 2018ರಲ್ಲಿ ಎಚ್.ಸಿ.ನೀರಾವರಿ ಕಣಕ್ಕಿಳಿದಿದ್ದರು. 2023ಕ್ಕೆ ತುಕಾರಾಮ್ ಸುರ್ವೇ ಹೆಸರು ಘೋಷಿಸಲಾಗಿದೆ. ಇನ್ನು ಜಿಲ್ಲೆಯ ಏಕೈಕ ಮೀಸಲು ಕ್ಷೇತ್ರ ಕನಕಗಿರಿಯಲ್ಲಿ 2008ರಲ್ಲಿ ರಾಮಾನಾಯ್ಕ, 2013ರಲ್ಲಿ ಪ್ರಕಾಶ ರಾಠೋಡ್, 2018ರಲ್ಲಿ ಮಂಜುಳಾ ರವಿ ಸ್ಪರ್ಧಿಸಿದ್ದರು. 2023ರಲ್ಲಿ ಅಶೋಕ ಉಮಲೂಟಿಗೆ ಟಿಕೆಟ್ ನೀಡಲಾಗಿದೆ.

ಇಬ್ಬರಿಗೆ ನಿರಾಸೆ: ಕೆಲ ತಿಂಗಳ ಹಿಂದೆ ಕೊಪ್ಪಳಕ್ಕೆ ವೀರೇಶ ಮಹಾಂತಯ್ಯನಮಠ, ಯಲಬುರ್ಗಾ ಕ್ಷೇತ್ರಕ್ಕೆ ಮಲ್ಲನಗೌಡ ಕೋನನಗೌಡ ಹಾಗೂ ಕನಕಗಿರಿಗೆ ಅಶೋಕ ಉಮಲೂಟಿ ಅಭ್ಯರ್ಥಿಗಳೆಂದು ಎಚ್.ಡಿ.ಕುಮಾರಸ್ವಾಮಿ ಘೋಷಿಸಿದ್ದರು. ಕ್ಷೇತ್ರದಲ್ಲಿ ಕಾರ್ಯಚಟುವಟಿಕೆ ಚುರುಕುಗೊಳಿಸಲು ಸೂಚಿಸಿದ್ದರು. ಆದರೆ, ಹಿಂದೆ ಘೋಷಿಸಿದ ಮೂವರ ಪೈಕಿ ಅಶೋಕ ಉಮಲೂಟಿ ಹೆಸರು ಮಾತ್ರ ಮೊದಲ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಕೊಪ್ಪಳದ ವೀರೇಶ ಮಹಾಂತಯ್ಯನಮಠ ಹಾಗೂ ಯಲಬುರ್ಗಾದ ಮಲ್ಲನಗೌಡ ಕೋನನಗೌಡರ ಹೆಸರು ಪಟ್ಟಿಯಲ್ಲಿಲ್ಲ.

ಕಮಲ ಬಿಟ್ಟು ತೆನೆ ಹೊರುವ ನಿರೀಕ್ಷೆ: ಕಳೆದ ಚುನಾವಣೆಯಲ್ಲಿ ಗಂಗಾವತಿ, ಯಲಬುರ್ಗಾ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಕರಿಯಣ್ಣ ಸಂಗಟಿ, ವೀರನಗೌಡ ಬಳೂಟಗಿ ಸ್ಪರ್ಧೆಯಿಂದ ಕಾಂಗ್ರೆಸ್ ಸೋಲುವಂತಾಯಿತು. 2023ರಲ್ಲೂ ಎರಡೂ ಕ್ಷೇತ್ರಗಳಲ್ಲಿ ಜೆಡಿಎಸ್ ಸೋಲು-ಗೆಲುವಿನ ಲೆಕ್ಕಾಚಾರದ ಮೇಲೆ ಗಂಭೀರ ಪರಿಣಾಮ ಬೀರುವ ಲಕ್ಷಣಗಳಿವೆ. ಅದರಂತೆ ಕೊಪ್ಪಳ ಕ್ಷೇತ್ರದಲ್ಲಿ ಬಿಜೆಪಿಯಿಂದ ಟಿಕೆಟ್ ಪೈಪೋಟಿ ಹೆಚ್ಚಿದ್ದು, ಅಂತಿಮ ಕ್ಷಣದಲ್ಲಿ ಪ್ರಮುಖ ನಾಯಕರೊಬ್ಬರು ಕಮಲ ಬಿಟ್ಟು ತೆನೆ ಹೊರುವ ಮಾತುಗಳು ಬಲವಾಗಿವೆ. ಹೀಗಾಗಿ ಈ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸದೆ ಕಾದು ನೋಡುವ ತಂತ್ರಕ್ಕೆ ಎಚ್‌ಡಿಕೆ ಶರಣಾದಂತಿದೆ.

ಪಂಚರತ್ನ ಯೋಜನೆಗೆ ಜನರದಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಮೊದಲ ಹಂತದಲ್ಲಿ ರಾಜ್ಯದ 93 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲಾಗಿದೆ. ಬಹುಪಾಲು ಮೀಸಲು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದೆ. ಕೊಪ್ಪಳದಲ್ಲಿ ನಾನೇ ನಿಯೋಜಿತ ಅಭ್ಯರ್ಥಿ. ಅದರಲ್ಲಿ ಅನುಮಾನವಿಲ್ಲ. ಪಂಚರತ್ನ ಎರಡನೇ ಯೋಜನೆ ನಂತರ ಇನ್ನೊಂದು ಪಟ್ಟಿ ಬಿಡುಗಡೆಯಾಗಲಿದ್ದು, ಅದರಲ್ಲಿ ಬಾಕಿ ಮೂರು ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಿಸಲಾಗುವುದು.| ವೀರೇಶ ಮಹಾಂತಯ್ಯನಮಠ, ಜೆಡಿಎಸ್ ಜಿಲ್ಲಾಧ್ಯಕ್ಷ, ಕೊಪ್ಪಳ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net