ಶಾಂತಿ, ಸುವ್ಯವಸ್ಥೆ ಕಾಪಾಡಲು ಕ್ರಮ; ಹುಲಿಹೈದರ್‌ನಲ್ಲಿ ಸಂಸದ ಸಂಗಣ್ಣ ಕರಡಿ ಹೇಳಿಕೆ

17082022 knk4
Published on

ಕನಕಗಿರಿ: ಹುಲಿಹೈದರ್‌ನಲ್ಲಿ ನಡೆದ ಗುಂಪು ಘರ್ಷಣೆಯಲ್ಲಿ ಮೃತಪಟ್ಟವರ ಕುಟುಂಬಕ್ಕೆ ಸರ್ಕಾರ ಸೌಲಭ್ಯ ಒದಗಿಸಲಿದ್ದು, ಈ ಬಗ್ಗೆ ಸಿಎಂ ಜತೆ ಚರ್ಚಿಸಿ ಗ್ರಾಮದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಕ್ರಮ ವಹಿಸಲಾಗುವುದು ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.
ಹುಲಿಹೈದರ್ ಗ್ರಾಮಕ್ಕೆ ಮಂಗಳವಾರ ಭೇಟಿ ನೀಡಿ ವೃದ್ಧರು, ಮಹಿಳೆಯರ ಕುಶಲೋಪರಿ ವಿಚಾರಿಸಿ ಮಾತನಾಡಿದರು. ಗ್ರಾಮದಲ್ಲಿ ಆ.11ರಿಂದ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದು, ಮನೆಯಲ್ಲಿರುವ ವೃದ್ಧರು, ಮಹಿಳೆಯರು ಜೀವನ ಸಾಗಿಸುವುದು ಕಷ್ಟವಾಗಿದೆ. ಪ್ರಕರಣಕ್ಕೆ ಸಂಬಂಧವಿಲ್ಲದವರು ಸಹ ಭೀತಿಯಿಂದ ಊರು ಬಿಟ್ಟಿರುವುದು ಬೇಸರದ ಸಂಗತಿಯಾಗಿದೆ. ಜೀವನಾವಶ್ಯಕ ವಸ್ತುಗಳಾದ ತರಕಾರಿ, ಕಿರಾಣಿ ಅಂಗಡಿಗಳು ತೆರೆದು ವ್ಯಾಪಾರ ಮಾಡುವಂತೆ ವ್ಯಾಪಾರಸ್ಥರಿಗೆ ಮನವಿ ಮಾಡಲಾಗಿದೆ. ಯಾವುದೇ ಕಾರಣಕ್ಕೂ ಭೀತಿಗೊಳಗಾಗದಂತೆ ಧೈರ್ಯ ಹೇಳಲಾಗಿದೆ ಎಂದರು. ಗ್ರಾಮವನ್ನು ಸಹಜ ಸ್ಥಿತಿಗೆ ತರಲು ನಾನಾ ಇಲಾಖೆಗಳ ಅಧಿಕಾರಿಗಳಿಂದ ಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದರು.
ಡಿಆರ್ ವ್ಯಾನ್ ತೆಗೆದಿದ್ದೆ ಗಲಾಟೆಗೆ ಕಾರಣ: ಸಂಸದ ಸಂಗಣ್ಣ ಕರಡಿ, ಗ್ರಾಮ ಸುತ್ತಿ ವೃದ್ಧರು, ಮಹಿಳೆಯರ ಬಳಿ ಚರ್ಚಿಸುವಾಗ ಮಾಬುಸಾಬ್ ನೌಕರಿ ಎನ್ನುವವರು ಗ್ರಾಮದಲ್ಲಿ ಪೊಲೀಸರೇ ಇದ್ದಾರೆ. ಆ.11ರಂದು ಡಿಆರ್ ವ್ಯಾನ್ ತೆಗೆದಿದ್ದೇ ಘಟನೆ ಕಾರಣ ಎಂದರು. ಮಧ್ಯಪ್ರವೇಶಿಸಿದ ಶಾಸಕ ಬಸವರಾಜ ದಢೇಸುಗೂರು, ಗ್ರಾಮದಲ್ಲಿ ಕೆಲ ದಿನಗಳಿಂದ ಡಿಆರ್ ವ್ಯಾನ್ ಇತ್ತು. ಆದರೆ, ಶ್ರೀರಾಮನಗರದ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಹಿನ್ನೆಲೆಯಲ್ಲಿ ಅಲ್ಲಿಗೆ ಡಿಆರ್ ವ್ಯಾನ್ ಕಳಿಸಿದ ಒಂದು ತಾಸಿನಲ್ಲಿ ಘಟನೆ ನಡೆದಿದೆ ಎಂದರು. ಡಿವೈಎಸ್ಪಿ ಆರ್.ಎಸ್.ಉಜ್ಜನಕೊಪ್ಪ, ಮಂಡಲ ಅಧ್ಯಕ್ಷ ಮಹಾಂತೇಶ ಸಜ್ಜನ್, ರಂಗಪ್ಪ ನಾಯಕ, ವೀರೇಶ ಸಾಲೋಣಿ, ಸಣ್ಣ ಕನಕಪ್ಪ ಇತರರಿದ್ದರು.
ಬಿಜೆಪಿ ಮುಖಂಡರ ಬಂಧನ?: ಘಟನೆ ಸಂಬಂಧಿಸಿ ಜಿಪಂ ಕೆಡಿಪಿ ಸದಸ್ಯ ಗುರುನಗೌಡ ಹಾಗೂ ಎಪಿಎಂಸಿ ಮಾಜಿ ನಿರ್ದೇಶಕ, ಗ್ರಾಪಂ ಹಾಲಿ ಉಪಾಧ್ಯಕ್ಷ ಶಿವಶಂಕ್ರಪ್ಪ ಚನ್ನದಾಸರನ್ನು ಬಂಧಿಸಲಾಗಿದೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net