ತನಿಖೆ ನೆಪದಲ್ಲಿ ಅಮಾಯಕರ ಬಂಧಿಸದಿರಿ; ಡಿಸಿಸಿ ಅಧ್ಯಕ್ಷ ಶಿವರಾಜ ತಂಗಡಗಿ ಮನವಿ

15082022 kanakagiri
Published on

ಕನಕಗಿರಿ: ಹುಲಿಹೈದರ್ ಗ್ರಾಮದಲ್ಲಿ ನಡೆದ ಗುಂಪು ಘರ್ಷಣೆಯಲ್ಲಿ ಮೃತಪಟ್ಟವರ ಕುಟುಂಬ ಸದಸ್ಯರು ಊರು ತೊರೆದಿದ್ದು, ಭಾನುವಾರ ಅವರಿರುವಲ್ಲಿಗೆ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಶಿವರಾಜ ತಂಗಡಗಿ ಭಾನುವಾರ ಭೇಟಿ ನೀಡಿ ಸಾಂತ್ವನ ಹೇಳಿದರು.
ಮೃತ ಪಾಷಾವಲಿ ಪತ್ನಿಯ ತವರೂರು ಕನಕಗಿರಿ ಹಾಗೂ ಯಂಕಪ್ಪ ತಳವಾರ ಹೆಂಡತಿಯ ಊರು ಕರಡೋಣ ಗ್ರಾಮದ ಮನೆಗೆ ತೆರಳಿ ನಿಮ್ಮೊಂದಿಗೆ ನಾವಿದ್ದೇವೆ ಎಂದು ಧೈರ್ಯ ತುಂಬಿದರು. ಅಲ್ಲದೆ ತಲಾ 20 ಸಾವಿರ ರೂ. ಸಹಾಯಧನ ನೀಡಿದರು.
ಬಳಿಕ ಸುದ್ದಿಗಾರರೊಂದಿಗೆ ತಂಗಡಗಿ ಮಾತನಾಡಿ, ಹುಲಿಹೈದರ್‌ನಲ್ಲಿ ನಡೆದ ಘಟನೆ ನೋವುಂಟು ಮಾಡಿದೆ. ತನಿಖೆ ನೆಪದಲ್ಲಿ ಅಮಾಯಕರನ್ನು ಬಂಧಿಸಬಾರದು. ಕೂಲಂಕಷವಾಗಿ ವಿಚಾರಿಸಿ ಆರೋಪಿಗಳನ್ನು ಬಂಧಿಸಿ, ಕ್ರಮ ಕೈಗೊಳ್ಳಬೇಕು. ತಕ್ಷಣವೇ ಮೃತರ ಕುಟುಂಬಗಳಿಗೆ ಸರ್ಕಾರ ಮತ್ತು ಜಿಲ್ಲಾಡಳಿತ ಪರಿಹಾರ ನೀಡಬೇಕು. ಶವಸಂಸ್ಕಾರಕ್ಕೆ ಹೋದವರನ್ನು ವಶಕ್ಕೆ ಪಡೆದಿರುವ ಪೊಲೀಸರು ಕೂಡಲೇ ಬಿಡುಗಡೆಗೊಳಿಸಬೇಕು ಎಂದರು.
ಯಾರೇ ಆಗಲಿ ಸಾವಿನಲ್ಲಿ ರಾಜಕೀಯ ಮಾಡಬಾರದು. ಚುನಾವಣೆಗೆ ಸೀಮಿತವಾಗಿರಬೇಕು. ಗ್ರಾಮವು ಸಹಜ ಸ್ಥಿತಿಗೆ ತರಲು ಅಧಿಕಾರಿಗಳು ಶಾಂತಿಸಭೆ, ಜಾಗೃತಿ ಕಾರ್ಯಕ್ರಮ ನಡೆಸಬೇಕು ಎಂದು ಒತ್ತಾಯಿಸಿದರು. ಪಪಂ ಸದಸ್ಯರಾದ ಅನಿಲ್ ಬಿಜ್ಜಳ, ನೂರ್‌ಸಾಬ್ ಗಡ್ಡಿಗಾಲ, ಕಂಠಿರಂಗಪ್ಪ ನಾಯಕ, ರಾಜಾಸಾಬ್ ನಂದಾಪುರ, ಸಂಗಪ್ಪ ಸಜ್ಜನ, ಮುಖಂಡರಾದ ವೀರೇಶ ಸಮಗಂಡಿ, ಹೊನ್ನೂರ್‌ಸಾಬ್ ಉಪ್ಪು, ರಾಮನಗೌಡ ಬುನ್ನಟ್ಟಿ ಇತರರಿದ್ದರು.
ತಂಗಡಗಿ ಆಫೀಸ್‌ಬಾಯ್ ಅರೆಸ್ಟ್
ಡಿಸಿಸಿ ಅಧ್ಯಕ್ಷ, ಮಾಜಿ ಸಚಿವ ಶಿವರಾಜ್ ತಂಗಡಗಿ ಕಚೇರಿಯಲ್ಲಿ ಆಫೀಸ್ ಬಾಯ್ ಆಗಿದ್ದ ಯುವಕನನ್ನು ಭಾನುವಾರ ಪೊಲೀಸರು ಬಂಧಿಸಿದ್ದಾರೆ. ಈತ ಹುಲಿಹೈದರ್ ಗುಂಪು ಘರ್ಷಣೆಗೆ ಸಂಬಂಧಿಸಿದ ಆರೋಪಿಗಳೊಂದಿಗೆ ಸಂಪರ್ಕ ಹೊಂದಿದ್ದ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net