

ಕೊಪ್ಪಳ: ನಗರದ ವೈದ್ಯಕೀಯ ವಿಜ್ಞಾನ ಸಂಸ್ಥೆ (ಕಿಮ್ಸ್)ಗೆ ಕಾಯಂ ನಿರ್ದೇಶಕರ ನೇಮಕಕ್ಕೆ ಅಧಿಕಾರಿಗಳು ಕೊನೆಗೂ ಜು.27ರಂದು ಅಧಿಸೂಚನೆ ಹೊರಡಿಸಿದ್ದಾರೆ.
ಜಿಲ್ಲೆಯಲ್ಲಿ 2013ರಲ್ಲಿ ಕಾಲೇಜು ಆರಂಭವಾಗಿದೆ. ಅಂದಿನಿಂದ ಈವರೆಗೆ ಕೇವಲ ಒಬ್ಬರು ಕಾಯಂ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಉಳಿದಂತೆ ಪ್ರಭಾರಗಳ ಮೇಲೆ ಕಾಲೇಜು ನಡೆಸಲಾಗುತ್ತಿದೆ. 2020ರಲ್ಲಿ ನಿರ್ದೇಶಕರ ನೇಮಕಕ್ಕೆ ಅಧಿಸೂಚನೆ ಪ್ರಕಟವಾಗಿದ್ದರೂ ನಂತರದಲ್ಲಿ ವಿನಾಕಾರಣ ಕೈ ಬಿಡಲಾಗಿತ್ತು. ಪ್ರಸಕ್ತ ವರ್ಷ ಜು.12ರಂದು ವೈದ್ಯಕೀಯ ಶಿಕ್ಷಣ ಇಲಾಖೆ ಕಾರವಾರ, ಗದಗ, ಕೊಪ್ಪಳ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ಬೆಂಗಳೂರಿನ ಇಂದಿರಾ ಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಗೆ ಕಾಯಂ ನಿರ್ದೇಶಕರ ನೇಮಕಕ್ಕೆ ಆದೇಶಿಸಿದೆ. ತಕ್ಷಣವೇ ಅಧಿಸೂಚನೆ ಹೊರಡಿಸಿ, ಅರ್ಜಿ ಕರೆದು ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಲು ಸೂಚಿಸಿದೆ. ಅದರಂತೆ ಕಾರವಾರ, ಗದಗ, ಬೆಂಗಳೂರು ಸಂಸ್ಥೆಗಳು ಒಂದೆರಡು ದಿನಗಳಲ್ಲಿ ಅಧಿಸೂಚನೆ ಪ್ರಕಟಿಸಿವೆ.
ಆದರೆ, ಕೊಪ್ಪಳ ಕಿಮ್ಸ್‌ನ ಮುಖ್ಯ ಆಡಳಿತಾಧಿಕಾರಿ 12 ದಿನಗಳಾದರೂ ನೇಮಕಾತಿ ಅಧಿಸೂಚನೆ ಪ್ರಕಟಿಸಿರಲಿಲ್ಲ. ಈ ಕುರಿತು ವಿಜಯವಾಣಿ ಜು.24ರಂದು ‘ಕಿಮ್ಸ್‌ಗೆ ಕಾಯಂ ನಿರ್ದೇಶಕರಿಲ್ಲ’ ಎಂಬ ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು. ಬಳಿಕ ದಿಗ್ವಿಜಯ ನ್ಯೂಸ್ ವರದಿಗಾಗಿ ಅಧಿಕಾರಿಗಳನ್ನು ಸಂಪರ್ಕಿಸಿದ ಕೂಡಲೇ ಎಚ್ಚೆತ್ತ ಅಧಿಕಾರಿಗಳು ಜು.27ರ ಸಂಜೆ ಅಧಿಸೂಚನೆ ಪ್ರಕಟಿಸಿ ಅರ್ಜಿ ಆಹ್ವಾನಿಸಿದ್ದಾರೆ. ಆ.12 ಸಂಜೆ 5 ಗಂಟೆವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಿದ್ದಾರೆ.