ಪರೀಕ್ಷಾ ಶುಲ್ಕ ಇಳಿಕೆಗೆ ಒತ್ತಾಯ: ಕೊಪ್ಪಳದಲ್ಲಿ ತರಗತಿ ಬಹಿಷ್ಕರಿಸಿ ಪದವಿ ವಿದ್ಯಾರ್ಥಿಗಳ ಪ್ರತಿಭಟನೆ

13092022 Koppal Students portest
Published on

ಕೊಪ್ಪಳ: ಪದವಿಯ ಎರಡನೇ ಸೆಮಿಸ್ಟರ್ ಪರೀಕ್ಷಾ ಶುಲ್ಕ ಹೆಚ್ಚಳ ಖಂಡಿಸಿ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ಮಂಗಳವಾರ ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.

ಬಿಎ, ಬಿಎಸ್ಸಿ ಹಾಗೂ ಬಿಕಾಂ ದ್ವಿತೀಯ ಸೆಮಿಸ್ಟರ್ ಪರೀಕ್ಷಾ ಶುಲ್ಕವನ್ನು ಏಕಾಏಕಿ 1300 ರೂ.ಗೆ ಹೆಚ್ಚಿಸಲಾಗಿದೆ. ಇದರಿಂದ ನಮಗೆ ತೊಂದರೆಯಾಗಿದೆ. ಮೊದಲ ಸೆಮಿಸ್ಟರ್‌ನಲ್ಲಿ 150 ರೂ. ಶುಲ್ಕ ಪಡೆಯಲಾಗಿದೆ. ಎರಡನೇ ಸೆಮಿಸ್ಟರ್ ಫೀ 1300ರೂ.ಗೆ ಹೆಚ್ಚಿಸಲಾಗಿದೆ. ಬಡತನ ಕಾರಣ ಸರ್ಕಾರಿ ಕಾಲೇಜಿಗೆ ಸೇರಿದ್ದೇವೆ. ಹೀಗಿದ್ದರೂ ಅವೈಜ್ಞಾನಿಕವಾಗಿ ಶುಲ್ಕ ಹೆಚ್ಚಳ ಮಾಡಿರುವುದರಿಂದ ನಮಗೆ ಆರ್ಥಿಕ ಹೊರೆಯಾಗಲಿದೆ ಎಂದು ಅಳಲು ತೋಡಿಕೊಂಡರು. ಕೂಡಲೇ ಶುಲ್ಕ ಕಡಿಮೆ ಮಾಡಬೇಕು. ಪರೀಕ್ಷೆ ಬರೆಯಲು ಅನುಕೂಲ ಮಾಡಿಕೊಡಬೇಕೆಂದು ಪಟ್ಟುಹಿಡಿದರು.

ವಿಷಯ ತಿಳಿದು ವಿಎಸ್‌ಕೆ ವಿವಿ ಸಿಂಡಿಕೇಟ್ ಸದಸ್ಯ ಡಾ.ಬಸವರಾಜ ಪೂಜಾರ ಆಗಮಿಸಿ, ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದರು. ಶುಲ್ಕ ಹೆಚ್ಚಳದಿಂದಾದ ತೊಂದರೆ ಬಗ್ಗೆ ಕುಲಪತಿ ಸೇರಿ ಇತರರ ಗಮನಕ್ಕೆ ತರಲಾಗಿದ್ದು, ಶೀಘ್ರವೇ ಇಳಿಕೆ ಮಾಡಲಾಗುವುದೆಂದು ಭರವಸೆ ನೀಡಿದರು. ವಿದ್ಯಾರ್ಥಿಗಳ ಮನವೊಲಿಸಿ ತರಗತಿಗೆ ಕಳಿಸಿದರು. ವಿದ್ಯಾರ್ಥಿಗಳಾದ ಮೈಲಾರಪ್ಪ, ನಿಂಗಜ್ಜ, ಯಲ್ಲಪ್ಪ, ವೆಂಕಟೇಶ, ರೂಪಾ, ರೋಹಿಣಿ, ಶಿಲ್ಪಾ, ಸವಿತಾ, ಚೈತ್ರಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net