ಗವಿಮಠದ ಮಹಾರಥೋತ್ಸವ ಸಂಪನ್ನ

default
default
Published on

ವಿ.ಕೆ. ರವೀಂದ್ರ

ಕೊಪ್ಪಳ : ದಕ್ಷಿಣದ ಕುಂಭಮೇಳ ಹಾಗೂ ಎರಡನೇ ಸಿದ್ಧಗಂಗೆ ಖ್ಯಾತಿಯ ಗವಿಸಿದ್ಧೇಶ್ವರ ಸ್ವಾಮಿ 207ನೇ ವರ್ಷದ ಮಹಾ ರಥೋತ್ಸವ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಸಡಗರ, ಸಂಭ್ರಮದಿಂದ ಭಾನುವಾರ ಸಂಜೆ ಅದ್ದೂರಿಯಾಗಿ ಜರುಗಿತು. ಕಳೆದ ಎರಡು ವರ್ಷ ಕೋವಿಡ್ ಕಾರಣ ಜಾತ್ರೆ ವೈಭವ ಕಾಣದೆ ವಂಚಿತರಾಗಿದ್ದ ಭಕ್ತರು ಈ ವರ್ಷ ನಿರೀಕ್ಷೆ ಮೀರಿ ಸೇರಿ ಭಕ್ತಿ ಸಮರ್ಪಿಸಿದರು.

ಶನಿವಾರ ಲಘು ರಥೋತ್ಸವ ಜರುಗಿದಾಗಿನಿಂದ ಜಾತ್ರೆ ಆವರಣದಲ್ಲಿ ಜನಜಂಗುಳಿ ಸೇರಿದ್ದು ಭಾನುವಾರ ಬೆಳಗಾದಂತೆ ಹೆಚ್ಚುತ್ತಾ ಹೋಯಿತು. ಬೆಳಗ್ಗೆ 10 ಗಂಟೆ ಹೊತ್ತಿಗೆ ಗವಿಮಠ ಸಂಪರ್ಕಿಸುವ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಯಿತು. ಹರಕೆ ಮಾಡಿಕೊಂಡ ಭಕ್ತರು ದೀರ್ಘದಂಡ ನಮಸ್ಕಾರ ಹಾಕಿದರು. ಗದ್ದುಗೆ ದರ್ಶನದ ಬಳಿಕ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಆಶೀರ್ವಾದ ಪಡೆದರು. ವೈಭಕ್ಕೆ ಹೆಸರಾದಂತೆ ಅಜ್ಜನ ಜಾತ್ರೆ ಸ್ವಚ್ಛತೆಗೂ ಹೆಸರಾಗಿದೆ. ಬಸವೇಶ್ವರ ವೃತ್ತ ದಾಟುತ್ತಲೇ ಪ್ರವೇಶದ್ವಾರದಿಂದ ಜಾತ್ರೆ ಆವರಣದವರೆಗೆ ಎಲ್ಲಿಯೂ ಕಸ ಬೀಳದಂತೆ ಸ್ವಚ್ಛತಾ ಸಿಬ್ಬಂದಿ ಸೇವಾ ನಿರತರಾಗಿದ್ದು ಕಂಡುಬಂತು.

ರಥ ಬೀದಿ ಮುಂಭಾಗದ ಜಾಗದಲ್ಲಿ 12 ಸಾಲುಗಳಲ್ಲಿ 1000 ಅಂಗಡಿಗಳನ್ನು ಹಾಕಲಾಗಿದ್ದು, ಫಳಾರ, ಮಿಠಾಯಿ, ಬಳೆ, ಹೋಟೆಲ್, ಹಣ್ಣು, ಜ್ಯೂಸ್, ಪಾರ್ಕಿಂಗ್, ಪೊಲೀಸ್ ಚೌಕಿ, ತುರ್ತು ಚಿಕಿತ್ಸಾ ಕೇಂದ್ರ ತೆರೆಯಲಾಗಿದೆ. ಪ್ರಸಾದ ನಿಲಯ, ಜಾತ್ರಾ ಆವರಣ, ಪೊಲೀಸ್ ಚೌಕಿ ಬಳಿ ಆರೋಗ್ಯ ಕೇಂದ್ರಗಳನ್ನು ಆರಂಭಿಸಿದ್ದು, ಭಕ್ತರಿಗೆ ಉಚಿತ ಆರೋಗ್ಯ ತಪಾಸಣೆ ಹಾಗೂ ತುರ್ತು ಚಿಕಿತ್ಸಾ ಸೇವೆ, ಅಗತ್ಯ ಔಷಧ ನೀಡಲಾಗುತ್ತಿದೆ. ನಿತ್ಯ ಬೆಳಗ್ಗೆ 8ರಿಂದ 10ಗಂಟೆವರೆಗೆ ಜ.21ವರೆಗೆ ವೈದ್ಯಕೀಯ ಸೇವೆ ಲಭ್ಯವಿರಲಿದೆ. 32 ವೈದ್ಯರು, 100 ಸ್ನಾತಕೋತ್ತರ ವಿದ್ಯಾರ್ಥಿಗಳು, 3 ಆಂಬುಲೆನ್ಸ್‌ಗಳು ಸೇವಾ ನಿರತವಾಗಿವೆ. ಇದರೊಂದಿಗೆ ಜ.10ರವರೆಗೆ ರಕ್ತದಾನ ಶಿಬಿರ ನಡೆಯಲಿದ್ದು, ಭಕ್ತರು ರಕ್ತದಾನ ಮಾಡುವ ಮೂಲಕ ಸಾರ್ಥಕತೆ ಮೆರೆಯುತ್ತಿದ್ದಾರೆ. ಕಳೆದ ವರ್ಷ 293 ಜನ ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿದ್ದರು. ಈ ವರ್ಷ ರಕ್ತ ಸಂಗ್ರಹ ಕಾರ್ಯಕ್ಕೆ 15 ವೈದ್ಯರು, 15 ಪ್ರಯೋಗಶಾಲ ತಂತ್ರಜ್ಞರು, 20 ಸ್ವಯಂ ಸೇವಕರು ಕಾರ್ಯನಿರತರಾಗಿದ್ದಾರೆ.

ಇವತ್ತಿನ ಕಾರ್ಯಕ್ರಮಗಳ ವಿವರ: ಗವಿಮಠ ಆವರಣದಲ್ಲಿ ಜ.9ರಂದು ಬೆಳಗ್ಗೆ 10ಕ್ಕೆ ವಾಲಿಬಾಲ್ ಪಂದ್ಯಾವಳಿ, ಸಂಜೆ 4 ಗಂಟೆಗೆ ಬಳಗಾನೂರು ಶಿವಶಾಂತವೀರ ಶರಣರ ದೀರ್ಘದಂಡ ನಮಸ್ಕಾರ ಮತ್ತು ಸಿದ್ಧೇಶ್ವರ ಮೂರ್ತಿ ಮೆರವಣಿಗೆ, ಸಂಜೆ 5.30ಕ್ಕೆ ಕೈಲಾಸ ಮಂಟಪದಲ್ಲಿ ಭಕ್ತ ಹಿತ ಚಿಂತನಾ ಸಭೆ ಇರಲಿದೆ. ಚಿನ್ಮಯ ಮಿಷನ್‌ನ ಸ್ವಾಮಿ ಬ್ರಹ್ಮಾನಂದ, ಅರಳೆಮಠದ ಸಿದ್ಧಲಿಂಗ ಶಿವಾಚಾರ್ಯರು ಸಾನ್ನಿಧ್ಯವಹಿಸುವರು. ಇಚಲಕರಂಜಿಯ ಭಕ್ತಿ ಯೋಗಾಶ್ರಮದ ಮಹೇಶಾನಂದ ಸ್ವಾಮೀಜಿ, ಕೆಎಲ್‌ಇ ಸೊಸೈಟಿ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಅತಿಥಿಗಳಾಗಿ ಭಾಗವಹಿಸುವರು.
ಬಳಿಕ ಸ್ವರಸಂಗಮ ಮತ್ತು ಅಂತಾರಾಷ್ಟ್ರೀಯ ಖ್ಯಾತಿ ವಿದ್ವಾಂಸರಿಂದ ಸಂಗೀತ ಗೋಷ್ಠಿ ನಡೆಯಲಿದೆ. ರಾತ್ರಿ 10.30ಕ್ಕೆ ಮದ್ದು ಸುಡುವ ಕಾರ್ಯಕ್ರಮ ಜರುಗಲಿದೆ.

ದಾಸೋಹ ಸವಿದ ಆರು ಲಕ್ಷಕ್ಕೂ ಹೆಚ್ಚು ಮಂದಿ

ಅಜ್ಜನ ಜಾತ್ರೆ ಎಂದರೆ ಮಹಾ ದಾಸೋಹವೆಂದೇ ನಾಡಿನಾದ್ಯಂತ ಹೆಸರಾಗಿದೆ. ಈ ವರ್ಷ ನಿರೀಕ್ಷೆಗೂ ಮೀರಿ ಭಕ್ತರು ಆಗಮಿಸುತ್ತಿದ್ದು ಮೊದಲ ದಿನವೇ 6 ಲಕ್ಷಕ್ಕೂ ಅಧಿಕ ಭಕ್ತರು ಪ್ರಸಾದ ಸವಿದು ಪುನೀತರಾದರು. ಜ.21ರವರೆಗೆ ಪ್ರಸಾದ ಮುಂದುವರಿಯಲಿದೆ. ಮೊದಲ ದಿನ ಶೇಂಗಾ ಹೋಳಿಗೆ, ಮಾದಲಿ, ತುಪ್ಪ, ಹಾಲು, ಖಡಕ್ ರೊಟ್ಟಿ, ಬೇಳೆ, ಅನ್ನ, ಸಾಂಬಾರು, ಪುಡಿ, ಚಟ್ನಿ ಪ್ರಸಾದವನ್ನು ಭಕ್ತರು ಸವಿದರು. ಆಯುರ್ವೇದ ಮಹಾವಿದ್ಯಾಲಯದ ಹರ್ಬಲ್ ಗಾರ್ಡನ್‌ನ ಆರು ಎಕರೆ ಆವರಣದಲ್ಲಿ ಭವ್ಯ ಅಡುಗೆಮನೆ, ಆಹಾರ ಸಂಗ್ರಹ ಕೊಠಡಿ ನಿರ್ಮಿಸಲಾಗಿದೆ. 76 ಕೌಂಟರ್‌ಗಳನ್ನು ನಿರ್ಮಿಸಲಾಗಿದೆ. 40 ಕೌಂಟರ್‌ಗಳಲ್ಲಿ ಅನ್ನ, ಸಾಂಬಾರ್, 36 ಕೌಂಟರ್‌ಗಳಲ್ಲಿ ಸಿಹಿ ಪದಾರ್ಥಕ್ಕೆ ಮೀಸಲಿಡಲಾಗಿದೆ. ಮಹಿಳೆ, ಪುರುಷ, ಅಂಗವಿಕಲರು, ಹಿರಿಯ ನಾಗರಿಕರಿಗೆ ಪ್ರತ್ಯೇಕ ಕೌಂಟರ್‌ಗಳಿವೆ. ಜತೆಗೆ ಅಲ್ಲಲ್ಲಿ ವಿಶ್ರಾಂತಿಗಾಗಿ ವ್ಯವಸ್ಥೆ ಮಾಡಿರುವುದು ವಿಶೇಷ. ಭಕ್ತರ ಸುರಕ್ಷತೆಗಾಗಿ ಹೊರ, ಒಳಾಂಗಣ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ದಾಸೋಹದಲ್ಲಿ ಒಂದು ದಿನಕ್ಕೆ ಸುಮಾರು 300 ರಿಂದ 400ರವರೆಗೆ ಭಕ್ತರು ಪ್ರಸಾದ ತಯಾರಿಸುವ ಸೇವೆಗೈದರೆ, ಪ್ರಸಾದ ವಿತರಣೆಯಲ್ಲಿ500 ರಿಂದ 600 ಭಕ್ತರು ಪಾಲ್ಗೊಳ್ಳಲಿದ್ದಾರೆ. ಜಾತ್ರೋತ್ಸವದ ಆರಂಭದಿಂದ ಮುಕ್ತಾಯದವರೆಗೆ ಪ್ರಸಾದ ನಿಲಯದಲ್ಲಿ ಸುಮಾರು 25 ಸಾವಿರ ಭಕ್ತರು ವಿವಿಧ ಸೇವೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

default
default
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net