

ಪಾಲಾಕ್ಷ ಬಿ.ತಿಪ್ಪಳ್ಳಿ
ಕೊಪ್ಪಳ: ಶ್ರೀ ಗವಿಸಿದ್ಧೇಶ್ವರ ಜಾತ್ರೋತ್ಸವ ನಿಮಿತ್ತ ಮೊದಲ ದಿನ ಭಾನುವಾರ ಮಠದ ಆವರಣದಲ್ಲಿ ಹಮ್ಮಿಕೊಂಡಿದ್ದ ಪೊಲೀಸ್ ಶ್ವಾನ ದಳ, ಕರಾಟೆ ಹಾಗೂ ದಾಲಪಟ ಪ್ರದರ್ಶನ ನೋಡುಗರ ಕಣ್ಮನ ಸೆಳೆದವು.
ಶ್ವಾನದಳ ಪ್ರದರ್ಶನದಲ್ಲಿ ಭಾಗವಹಿಸಿದ್ದ ಸಿಂಧು, ಕಿನ್ನಿ, ತುಂಗಾ ಮತ್ತು ಬಿಂದು ಹೆಸರಿನ ಶ್ವಾನಗಳು ಚಾಣಾಕ್ಷತನ ಪ್ರದರ್ಶಿಸಿ, ಅಪರಾಧ ಪತ್ತೆ ಹಾಗೂ ದೇಶದ ಆಂತರಿಕ ಭದ್ರತೆಯಲ್ಲಿ ಶ್ವಾನಗಳ ಪಾತ್ರ ಎಷ್ಟು ಮುಖ್ಯ ಎಂಬುದನ್ನು ಜನರಿಗೆ ಮನವರಿಕೆ ಮಾಡಿಕೊಟ್ಟವು. ಒಂದೊಂದು ಶ್ವಾನ ಪ್ರದರ್ಶನಕ್ಕೂ ನೆರೆದ ಜನರಿಂದ ಚಪ್ಪಾಳೆ, ಶಿಳ್ಳೆ, ಕೇಕೆಗಳು ಕೇಳಿಬಂದವು. ಶ್ವಾನಗಳಿಗೆ ಬೆಂಗಳೂರಿನ ಆಡುಗೋಡೆಯಲ್ಲಿನ ಸಿಎಆರ್‌ನಲ್ಲಿ ತರಬೇತಿ ನೀಡಲಾಗಿದೆ. ವಿದ್ವಂಸಕಕೃತ್ಯ ಎಸಗುವಿಕೆ, ಸ್ಫೋಟಕ ಪತ್ತೆ, ಅಪರಾಧ ಎಸಗಿದ ವ್ಯಕ್ತಿ ಗುರುತು, ಕರವಸ್ತ್ರದ ವಾಸನೆ ಕಂಡುಹಿಡಿವ ದೃಶ್ಯ ನೋಡುಗರನ್ನು ನಿಬ್ಬೆರಗಾಗಿಸಿತು. ಸ್ಫೋಟಕ ಪತ್ತೆ ವಿಭಾಗದಲ್ಲಿ ಬಿಂದು, ಕಿನ್ನಿ, ಅಪರಾಧ ಪತ್ತೆ ವಿಭಾಗದಲ್ಲಿ ತುಂಗಾ, ಸಿಂಧು ಎನ್ನುವ ಶ್ವಾನಗಳ ಪ್ರದರ್ಶನ ನಿರ್ವಹಣೆಯಲ್ಲಿ ಗೋಲಾಸಿಕ್ ಕಾರ್ಯಾಚರಣೆ ದೃಶ್ಯ ಅದ್ಭುತವಾಗಿತ್ತು. ಡಿವೈಎಸ್ಪಿಗಳಾದ ಶರಣಪ್ಪ ಸುಬೇದಾರ್, ಆರ್.ಎಸ್.ಉಜ್ಜನಕೊಪ್ಪ, ಶಶಿಧರ್, ಸಿಪಿಐಗಳಾದ ಮಹಾಂತೇಶ ಸಜ್ಜನ, ಅಮರೇಶ ಹುಬ್ಬಳ್ಳಿ, ಸಂತೋಷ ಹಳ್ಳೂರ ಇದ್ದರು.
ಮೈನವಿರೇಳಿಸಿದ ಕರಾಟೆ ಪಟುಗಳ ಸಾಹಸ
ಕೊಪ್ಪಳದ ಭೂಮಿ ಫೌಂಡೇಷನ್‌ನಿಂದ ಗವಿಮಠದ ಆವರಣದಲ್ಲಿ ಆಯೋಜಿಸಿದ್ದ ಕರಾಟೆ ಪ್ರದರ್ಶನ ಮೈನವಿರೇಳಿಸಿತು. ಕೈಯಿಂದ ಟೈಲ್ಸ್, ಹೆಂಚು ಹೊಡೆಯುವುದು, ಹೊಟ್ಟೆಯ ಮೇಲೆ ಕಲ್ಲುಬಂಡೆ ಇಟ್ಟು ಸುತ್ತಿಗೆಯಿಂದ ಹೊಡೆಯುವುದು ಮತ್ತು ಹೊಟ್ಟೆಯ ಮೇಲೆ ಬೈಕ್‌ರೈಡ್ ಮಾಡುವ ದೃಶ್ಯ ನೆರೆದಿದ್ದವರನ್ನು ರೋಮಾಂಚನಗೊಳಿಸಿತು. ಅಲ್ಲದೆ ಚಿಲ್ಕಮುಖಿ ಗ್ರಾಮದ ಶ್ರೀಶೈಲ ಮಲ್ಲಿಕಾರ್ಜುನ ಸಾಹಸ ಜನಪದ ಅಲೆಮಾರಿ ಕಲಾವಿದರ ಸಂಘದ ಹಿರಿಯ ಕಲಾವಿದ ಹನುಮಂತಪ್ಪ ಬಬ್ಬಲ್ ತಂಡ ಪ್ರದರ್ಶನ ನೀಡಿದ ಉತ್ತರ ಭಾರತದ ಸಾಂಪ್ರದಾಯಿಕ ಕಲೆಯಾದ ದಾಲಪಟ ನೋಡುಗರನ್ನು ಮಂತ್ರಮುಗ್ಧರನ್ನಾಗಿಸಿತು. ದಂಡ ವರಸೆ, ಕತ್ತಿ ವರಸೆ, ಸಂಭಾಳ, ಗೊಂಬೆಗಳ ಸ್ತಬ್ಧಚಿತ್ರ ಪ್ರದರ್ಶನ ನಡೆಯಿತು. ದಂಡ ವರಸೆ, ಕತ್ತಿ ವರಸೆ ಅಚ್ಚರಿಮೂಡಿಸಿತು. ಜನ ಶಿಳ್ಳೆ ಚಪ್ಪಾಳೆ ತಟ್ಟಿ ಕಲಾವಿದರನ್ನು ಹುರಿದುಂಬಿಸಿದರು.