

ಮಹೇಶಗೌಡ ಭಾನಾಪುರ
ಕೊಪ್ಪಳ : ಅಜ್ಜನ ಜಾತ್ರೋತ್ಸವ ಅಂಗವಾಗಿ ತೋಟಗಾರಿಕೆ ಇಲಾಖೆ ಏರ್ಪಡಿಸಿರುವ ಫಲ-ಪುಷ್ಪ ಪ್ರದರ್ಶನ ಜನರ ಕಣ್ಮನ ಸೆಳೆಯುತ್ತಿದೆ.
ಈ ಬಾರಿ ಫಲ-ಪುಷ್ಪ ಪ್ರದರ್ಶನ ಹಲವು ವೈಶಿಷ್ಟೃಗಳಿಂದ ಕೂಡಿದೆ. ಕಳೆದ ವರ್ಷ ಭಾರತೀಯ ಚಿತ್ರರಂಗದಲ್ಲಿ ಸಾಕಷ್ಟು ಸದ್ದು ಮಾಡಿದ ‘ಕಾಂತಾರ’ ಸಿನಿಮಾದ ದೈವ ಬಗೆಬಗೆಯ ಹೂಗಳಲ್ಲಿ ಅರಳಿದೆ. ಬೃಹತ್ ಕಾಡಿನ ಗಿಡ ಮರಗಳ ಮಧ್ಯೆ ಬಣ್ಣಬಣ್ಣದ ಪುಷ್ಪಗಳಲ್ಲಿ ‘ದೈವ’ ರೂಪ ತಾಳಿದ್ದಾನೆ. ಅಲ್ಲದೇ ಇತ್ತೀಚೆಗೆ ಲಿಂಗೈಕ್ಯರಾದ ಪರಮ ಪೂಜ್ಯ ನಡೆದಾಡುವ ದೇವರು ಶ್ರೀ ಸಿದ್ಧೇಶ್ವರ ಸ್ವಾಮೀಜಿ ಚಿತ್ರವನ್ನು ರಂಗೋಲಿಯಲ್ಲಿ ಬಿಡಿಸಿ, ಭಾವಚಿತ್ರ ಸುತ್ತ ಫಲ-ಪುಷ್ಪವಿಟ್ಟು ನಮನ ಸಲ್ಲಿಸಲಾಗಿದೆ.
ಕರ್ನಾಟಕದ ನಕಾಶೆಯಲ್ಲಿ ಕರ್ನಾಟಕ ರತ್ನ ನಟ ಡಾ.ಪುನೀತ್ ರಾಜಕುಮಾರ ಮೂಡಿ ಬಂದಿದ್ದು, ಇದನ್ನು ನೋಡಿದ ಅಭಿಮಾನಿಗಳು ಫಿದಾ ಆಗಿದ್ದಾರೆ. ತೋಟಗಾರಿಕೆ ಪಿತಾಮಹ ಡಾ.ಎಂ.ಎಚ್.ಮರಿಗೌಡ ಭಾವಚಿತ್ರ ಹಾಗೂ ಪುತ್ಥಳಿಯನ್ನು ಚೆಂಡು ಹೂಗಳಲ್ಲಿ ಅಲಂಕರಿಸಲಾಗಿದೆ. ನೋಡುಗರಿಗೆಲ್ಲ ಪ್ರಸಕ್ತ ನೂತನ ವರ್ಷದ ಶುಭಾಶಯಗಳನ್ನು ಹಸಿರು ಹೊದಿಕೆ ಮೇಲೆ ಬರೆದು ಕೋರಲಾಗಿದೆ. ಕಲ್ಲಂಗಡಿ ಹಣ್ಣಿನಲ್ಲಿ ಮಹನೀಯರ ಕಲಾಕೃತಿಗಳು ಮೂಡಿದ್ದು, ಜನರ ಗಮನ ಸೆಳೆದವು. ಶ್ರೀಗವಿಸಿದ್ಧೇಶ್ವರ ರಥ, ಎಪಿಜೆ ಅಬ್ದುಲ್ ಕಲಾಂ, ವಲ್ಲಭಭಾಯಿ ಪಟೇಲ್ ಹಾಗೂ ಇತರ ಮಹಾನ್ ನಾಯಕರ ಚಿತ್ರಗಳು ಕಲ್ಲಂಗಡಿಯಲ್ಲಿ ಮೈದಳೆದಿದ್ದವು. ವಿವಿಧ ಮಾದರಿಯ ಅಲಂಕಾರಿಕ ಗಿಡಗಳ ಜೋಡಣೆ, ಕ್ಯಾಕ್ಟಸ್ ಮಾದಿ, ವರ್ಟಿಕಲ್ ಮಾದರಿ, ತ್ರೀಕೋನಾಕಾರ ಅಲಂಕಾರಿಕ ಗಿಡಗಳ, ಬೋನ್ಸಾಯ್ ಹಾಗೂ ಹುಲ್ಲಿನ ಮಾದರಿಯ ನೀರಿನ ಜಲಪಾತ ಅನಾವರಣಗೊಂಡಿವೆ.
ರೈತರಿಗೆ ಉಪಯುಕ್ತ ಮಾಹಿತಿ: ಫಲ-ಪುಷ್ಪ ಪ್ರದರ್ಶನದಲ್ಲಿ ಅಧಿಕಾರಿಗಳು ತೋಟಗಾರಿಕೆ ಕೃಷಿ ಬಗ್ಗೆ ರೈತರಿಗೆ ಅರಿವು ಮೂಡಿಸುತ್ತಿರುವುದು ಕಂಡುಬಂತು. ಎರೆಹುಳು ಗೊಬ್ಬರ, ಎರೆಜಲ, ಬೇವಿನ ಬೀಜದ ಗೊಬ್ಬರ, ಸಾವಯವ ಗೊಬ್ಬರ, ಟೈಕೊಡರ್ಮಾ, ಸುಡೋಮೋನಾಸ್, ತರಕಾರಿ ಸಸಿ, ಹಣ್ಣಿನ ಸಸಿಗಳು ,ಅಲಂಕಾರಿ ಗಿಡಗಳ ಬಗ್ಗೆ ಮಾಹಿತಿ ನೀಡಿದರು.
ಫಲ ಪುಷ್ಪ ಪ್ರದರ್ಶನದಲ್ಲಿ ಕಾಂತಾರ ಚಲಚಿತ್ರದ ದೈವವನ್ನು ಪುಷ್ಪದಲ್ಲಿ ಅರಳಿಸಿದ್ದು, ನೋಡಲು ಸುಂದರವಾಗಿದೆ. ಶ್ರೀಸಿದ್ಧೇಶ್ವರ ಸ್ವಾಮೀಜಿ ,ಡಾ.ಪುನೀತ್ ರಾಜಕುಮಾರ್ ಭಾವಚಿತ್ರವನ್ನು ಉತ್ತಮವಾಗಿ ಚಿತ್ರಿಸಿದ್ದಾರೆ. ಅಧಿಕಾರಿಗಳು ಅಗತ್ಯ ಮಾಹಿತಿ ಒದಿಗಸುತ್ತಿದ್ದು, ಖುಷಿ ನೀಡಿದೆ.| ಮಂಜುಳಾ ಯುವತಿ, ಕಾರಟಗಿ ಗವಿಮಠ ಜಾತ್ರೆಯಲ್ಲಿ ಪ್ರತಿ ವರ್ಷ ಇಲಾಖೆಯಿಂದ ಫಲ ಪುಷ್ಪ ಪ್ರದರ್ಶನ ಆಯೋಜಿಸಲಾಗುತ್ತದೆ. ಈ ವರ್ಷ ಕಾಂತಾರ ಚಲನಚಿತ್ರದ ದೈವವನ್ನು ಪುಷ್ಪದಲ್ಲಿ ಅಲಂಕಾರ ಮಾಡಿದ್ದು ವಿಶೇಷ. ರೈತರಿಗೆ ಅಗತ್ಯ ಮಾಹಿತಿಯನ್ನು ನೀಡಲಾಗುತ್ತಿದೆ.| ಕೃಷ್ಣ ಉಕ್ಕುಂದ ಉಪನಿರ್ದೇಶಕ, ತೋಟಗಾರಿಕೆ ಇಲಾಖೆ