

ಗಂಗಾವತಿ: ಪರಿಸರ ಸ್ನೇಹಿ ಗಣೇಶ ಪ್ರತಿಷ್ಠಾಪನೆಗೆ ಆದ್ಯತೆ ನೀಡಬೇಕಿದ್ದು, ಕಲಾವಿದರ ನೆರವಿಗಾಗಿ ಡಿಜೆ ಕೈ ಬಿಡುವಂತೆ ಡಿವೈಎಸ್ಪಿ ಆರ್.ಎಸ್. ಉಜ್ಜನಕೊಪ್ಪ ಹೇಳಿದರು.
ಗಣೇಶಹಬ್ಬದ ನಿಮಿತ್ತ ನಗರದ ಐಎಂಎ ಹಾಲ್‌ನಲ್ಲಿ ಸೋಮವಾರ ಆಯೋಜಿಸಿದ್ದ ತ್ರಿವಳಿ ತಾಲೂಕು ಮಟ್ಟದ ಶಾಂತಿಸಭೆಯಲ್ಲಿ ಮಾತನಾಡಿ, ಅಬ್ಬರದ ಡಿಜೆಯಿಂದ ಯಾರಿಗೂ ಲಾಭವಿಲ್ಲ. ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಬೇಕಿದ್ದು, 2 ಹಂತದಲ್ಲಿ ವಿಸರ್ಜನೆಗೆ ಆದ್ಯತೆ ನೀಡುವಂತೆ ತಿಳಿಸಿದರು.
ಕೋವಿಡ್ ಮುಂಜಾಗ್ರತಾ ಕ್ರಮಗಳಿಂದ ಕಲಾವಿದರು ಸಂಕಷ್ಟದಲ್ಲಿದ್ದು, ಅಂತಹ ಕಲಾವಿದರಿಗೆ ಅವಕಾಶ ನೀಡುವ ಮೂಲಕ ಸಂಸ್ಕೃತಿ ಉಳಿಸಿ. ಡಿಜೆ ಬಳಕೆಗೆ ಸರ್ಕಾರ ಅವಕಾಶ ನೀಡಿಲ್ಲ. ಉತ್ಸವ ಸಮಿತಿ ರಚಿಸಿಕೊಂಡು ಸೌಹಾರ್ದತೆಯ ಆಚರಣೆಗೆ ಆದ್ಯತೆ ನೀಡಿ. ಪೊಲೀಸ್ ಇಲಾಖೆ ಆವರಣದಲ್ಲಿ ಏಕಗವಾಕ್ಷಿ ಪದ್ಧತಿಯಡಿ ಪರವಾನಗಿ ನೀಡಲಾಗುತ್ತಿದ್ದು, ಮುಂಜಾಗ್ರತಾಕ್ರಮಗಳನ್ನು ಅನುಸರಿಸುವಂತೆ ಸಲಹೆ ನೀಡಿದರು.
ತಹಸೀಲ್ದಾರ್ ಯು.ನಾಗರಾಜ್ ಮಾತನಾಡಿ, ಗಣೇಶ ಹಬ್ಬವನ್ನು ಪಾವಿತ್ರೃತೆಯಿಂದ ಅರ್ಥಪೂರ್ಣವಾಗಿ ಆಚರಿಸಬೇಕಿದೆ. ವಿಸರ್ಜನೆ ಸಂದರ್ಭದಲ್ಲಿ ಯುವ ಸಮುದಾಯ ಅಡ್ಡದಾರಿ ಹಿಡಿಯುತ್ತಿದ್ದು, ಉತ್ತಮ ಬೆಳೆವಣಿಗೆಯಲ್ಲ ಎಂದರು.
3 ವರ್ಷಗಳಿಂದ ಡಿಜೆಗೆ ಅವಕಾಶ ನೀಡಿಲ್ಲ, ಪ್ರಸಕ್ತ ಸಾಲಿನಲ್ಲಿ ಡಿಜೆ ಇಲ್ಲದೇ ಗಣೇಶ ಹಬ್ಬ ಆಚರಣೆಯಿಲ್ಲ ಎಂದು ಪ್ರತಿಷ್ಠಾಪನೆ ಸಮಿತಿ ಪದಾಧಿಕಾರಿಗಳು ತಿಳಿಸಿದರು. ಪ್ರತಿಷ್ಟಾಪನೆ ಮತ್ತು ವಿಸರ್ಜನೆ ಸಂದರ್ಭದಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡಲಾಯಿತು. ಆ.25ರಿಂದಲೇ ಪೊಲೀಸ್ ಠಾಣೆ ಆವರಣದಲ್ಲಿ ಪರವಾನಗಿ ನೀಡುವ ಪ್ರಕ್ರಿಯೆಗೆ ಚಾಲನೆ ನೀಡಲು ಅಧಿಕಾರಿಗಳು ಒಪ್ಪಿಗೆ ನೀಡಿದರು.
ಕಾರಟಗಿ ತಹಸೀಲ್ದಾರ್ ಬಸವರಾಜ್, ತಾಪಂ ಇಒ ಮಹಾಂತಗೌಡ ಪಾಟೀಲ್, ನಗರಸಭೆ ಆರೋಗ್ಯ ನಿರೀಕ್ಷಕ ಎ.ನಾಗರಾಜ್, ಪಿಐಗಳಾದ ವೆಂಕಟಸ್ವಾಮಿ, ಎನ್.ಮಂಜುನಾಥ, ಪಿಎಸ್‌ಐಗಳಾದ ವಿಲಾಸ್ ಭೋಸ್ಲೆ, ಎಂ.ಎನ್.ಕಾಮಣ್ಣ, ಜೆಸ್ಕಾ ಎಇಇ ಎಂ.ವೀರೇಶ ಇದ್ದರು.