

ಗಂಗಾವತಿ: ಮಾಜಿ ಸಿಎಂ ಸಿದ್ದರಾಮಯ್ಯರ ಮೇಲೆ ಮೊಟ್ಟೆ ಎಸೆದ ಪ್ರಕರಣ ಖಂಡಿಸಿ ಕಾಂಗ್ರೆಸ್ ವಿವಿಧ ಘಟಕಗಳ ಕಾರ್ಯಕರ್ತರು ನಗರದ ತಾಲೂಕು ಆಡಳಿತ ಸೌಧದ ಮುಂದೆ ಸೋಮವಾರ ಪ್ರತಿಭಟನೆ ನಡೆಸಿದರು. ಕೊಪ್ಪಳ ರಸ್ತೆ ಕಾಂಗ್ರೆಸ್ ನಗರ ಬ್ಲಾಕ್ ಕಚೇರಿಯಿಂದ ತಾಲೂಕು ಆಡಳಿತ ಸೌಧದವರೆಗೂ ಬೈಕ್ ರ‌್ಯಾಲಿ ಮೂಲಕ ಆಗಮಿಸಿ ತಹಸೀಲ್ದಾರ್ ಯು.ನಾಗರಾಜ್‌ಗೆ ಮನವಿ ಸಲ್ಲಿಸಿದರು.
ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಾಮೀದ್ ಮನಿಯಾರ್ ಮಾತನಾಡಿ, ವಿಪಕ್ಷ ನಾಯಕನನ್ನು ಅವಮಾನಿಸುವ ಮೂಲಕ ಬಿಜೆಪಿ ಸರ್ವಾಧಿಕಾರಿ ಧೋರಣೆ ಪ್ರದರ್ಶಿಸಿದೆ. ಭದ್ರತೆ ವೈಲ್ಯದಿಂದ ಘಟನೆ ನಡೆದಿದ್ದು, ಸರ್ಕಾರ ನಡೆಸಲು ಬಿಜೆಪಿಗೆ ಯಾವುದೇ ಅರ್ಹತೆಯಿಲ್ಲ. ಸಿದ್ದರಾಮಯ್ಯ ವರ್ಚಸ್ಸಿಗೆ ಹೆದರಿದ ಬಿಜೆಪಿ ಕ್ಷುಲ್ಲಕ ಘಟನೆಗಳಿಗೆ ಅವಕಾಶ ನೀಡುತ್ತಿದ್ದು, ಕೈ ಕಾರ್ಯಕರ್ತರು ತಕ್ಕ ಉತ್ತರ ನೀಡಲಿದ್ದಾರೆ ಎಂದರು.
ಜಿಪಂ ಮಾಜಿ ಸದಸ್ಯ ಅಮರೇಶ ಗೋನಾಳ್, ನಗರಸಭೆ ಸದಸ್ಯ ಮನೋಹರಸ್ವಾಮಿ ಹಿರೇಮಠ ಮಾತನಾಡಿ, ಅಭಿವೃದ್ಧಿ ಮರೆತ ಬಿಜೆಪಿ, ಸಂಘರ್ಷಕ್ಕೆ ಒತ್ತು ನೀಡುತ್ತಿದೆ. ಸಿದ್ದರಾಮಯ್ಯರನ್ನು ಕೆಣಕಿದ ಬಿಜೆಪಿಗೆ ಮುಂದಿನ ಚುನಾವಣೆಯಲ್ಲಿ ತಕ್ಕ ಶಾಸ್ತಿಯಾಗಲಿದೆ ಎಂದರು.
ತಾಪಂ ಮಾಜಿ ಅಧ್ಯಕ್ಷ ಶರಣೇಗೌಡ ಮಾಲಿ ಪಾಟೀಲ್, ಗ್ರಾಪಂ ಸದಸ್ಯ ಬಳ್ಳಾರಿ ರಾಮಣ್ಣನಾಯಕ, ಪಿಎಸ್ಸೆಸ್ಸೆನ್ ನಿರ್ದೇಶಕ ವಿಶ್ವನಾಥ ಮಾಲಿ ಪಾಟೀಲ್, ನಗರಸಭೆ ಸದಸ್ಯರಾದ ಎ್.ರಾಘವೇಂದ್ರ, ಹುಲಿಗೆಮ್ಮ ಕಿರಿಕಿರಿ, ಸೋಮನಾಥ ಭಂಡಾರಿ, ಅಬ್ದುಲ್ ಜಬ್ಬಾರ್, ಮೌಲಾಸಾಬ್, ಮುಖಂಡರಾದ ಜವಳಗೇರಾ ಹುಸೇನ್‌ಪೀರಾ, ಬಿ.ಕೆ.ಸಲ್ಮಾನ್, ಜುಬೇರ್ ಅಹ್ಮದ್ ಇದ್ದರು.