

ಕೊಪ್ಪಳ: ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆ. 1ರಂದು ಭೇಟಿ ನೀಡಲಿದ್ದಾರೆ. ಇದಕ್ಕಾಗಿ ಅಧಿಕಾರಿಗಳು ಸಿದ್ಧತೆ ನಡೆಸುತ್ತಿದ್ದಾರೆ. ಆಂಜನೇಯನ ಜನ್ಮಸ್ಥಳ ಅಭಿವೃದ್ಧಿಗೆ ಸರ್ಕಾರ ಈಗಾಗಲೇ ಹಲವು ಸುತ್ತಿನ ಸಭೆ ನಡೆಸಿದೆ. ಆದರೆ, ಯಾವೊಂದೂ ಆರಂಭವಾಗಿಲ್ಲ. ಸಿಎಂ ವೈಮಾನಿಕ ಸಮೀಕ್ಷೆ ನಡೆಸಿದ ಬಳಿಕ ಅಭಿವೃದ್ಧಿ ಕಾರ್ಯ ಆರಂಭಿಸಲಾಗುವುದೆಂದು ಉಸ್ತುವಾರಿ ಸಚಿವ ಆನಂದ ಸಿಂಗ್ ತಿಳಿಸಿದ್ದರು.
ಸದ್ಯ ಸಿಎಂ ಸ್ವಾಗತಕ್ಕೆ ಸಿದ್ಧತೆಗಳು ನಡೆದಿದ್ದು, ಅಧಿಕಾರಿಗಳು ಬೆಟ್ಟಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆಟ್ಟದ ಬಳಿಯೇ ಹೆಲಿಪ್ಯಾಡ್ ನಿರ್ಮಿಸಲು ಸ್ಥಳ ಪರಿಶೀಲನೆ ನಡೆಸಲಾಗಿದೆ. ಅಂಜನಾದ್ರಿ ಅಭಿವೃದ್ಧಿಗೆ ರಾಜ್ಯ ಸರ್ಕಾರ ಬಜೆಟ್‌ನಲ್ಲಿ 120 ಕೋಟಿ ರೂ. ಅನುದಾನ ಘೋಷಿಸಿದೆ. ಸದ್ಯ ಆಗಬೇಕಾದ ಕಾರ್ಯಗಳ ನೀಲಿನಕ್ಷೆ ಹಾಗೂ ಅಭಿವೃದ್ಧಿ ಕೆಲಸಗಳ ಬಗ್ಗೆ ಸಿಎಂ ಪರಿಶೀಲನೆ ನಡೆಸಲಿದ್ದಾರೆ.