

ಕೊಪ್ಪಳ: ರಾಜ್ಯದ ಇತಿಹಾಸ ತೆರೆದು ನೋಡಿದಾಗ ಬಿಜೆಪಿ ಶಾಸಕರ ವರ್ತನೆ, ಸಂಸ್ಕೃತಿ ತಿಳಿಯುತ್ತದೆ ಎಂದು ಮಾಜಿ ಸಚಿವ ಎಚ್.ಎಂ.ರೇವಣ್ಣ ಹೇಳಿದ್ದಾರೆ.
ಬೇವಿನಹಳ್ಳಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ ನಾಯಕರು ಹೇಳುವುದು ‘ಬೇಟಿ ಪಢಾವೋ.. ಬೇಟಿ ಬಚಾವೋ’ ಅಂತ. ಆದರೆ, ಉತ್ತರದಿಂದ ಹಿಡಿದು ದಕ್ಷಿಣ ಭಾರತದಲ್ಲಿ ಪರಿಸ್ಥಿತಿ ಏನಾಗಿದೆ ? ಮಹಿಳೆಯರು ಹಾಗೂ ಮಕ್ಕಳ ಮೇಲೆ ಅತ್ಯಾಚಾರಗಳು ಹೆಚ್ಚುತ್ತಿವೆ. ಸಭೆಯಲ್ಲಿ ಬಿಜೆಪಿ ಶಾಸಕರು ಅಶ್ಲೀಲ ಚಿತ್ರ ನೋಡುತ್ತಾರೆ. ಅವರು ಮುತ್ತಿಟ್ಟಿರುವುದನ್ನು ಜನರು ನೋಡಿದ್ದಾರೆ. ಇಂದು ಇಂಥವರು ಸಿಎಂ ಕಾರ್ಯದರ್ಶಿಯಾಗಿದ್ದಾರೆ. ಬಿಜೆಪಿಯಲ್ಲಿ ಇಂಥವರ ಸಂಖ್ಯೆ ಹೆಚ್ಚಿದೆ ಎಂದರು.
ಭೂತದ ಬಾಯಿಯಲ್ಲಿ ಭಗವದ್ಗೀತೆ ಬರುತ್ತಿದೆ. ಜಾಗ ಬಿಡೋದು.. ಬಿಡಿಸೋದು ಅಧಿಕಾರಿಗಳು ಮಾಡುತ್ತಾರೆ. ಮಹಿಳೆಯ ಮೇಲೆ ದೌರ್ಜನ್ಯ ಹಾಗೂ ದಬ್ಬಾಳಿಕೆ ಖಂಡನೀಯ. ಮಹಿಳೆ ಜಾಗ ಒತ್ತುವರಿ ಮಾಡಿದ್ದರೆ ಅಧಿಕಾರಿಗಳಿದ್ದಾರೆ, ಕಾನೂನಿದೆ. ಆತನ ವರ್ತನೆ ತಪ್ಪು ಎಂದು ಅರವಿಂದ ಲಿಂಬಾವಳಿ ವಿರುದ್ಧ ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯಗೆ ಇಡೀ ರಾಜ್ಯದಲ್ಲಿ ಆಪ್ತರಿದ್ದಾರೆ. ಅವರು ರಾಜ್ಯದ ದೊಡ್ಡ ನಾಯಕರು. ಅವರು ಬಾದಾಮಿಯಿಂದ ನಿಲ್ಲಬೇಕು, ಅಲ್ಲಿಂದಲೇ ಗೆಲ್ಲಬೇಕು ಅಂತ ಆಪ್ತರು ಹೇಳಿದ್ದಾರೆ. ಬೇರೆಬೇರೆ ಕಡೆಯೂ ಕರೆಯುತ್ತಿದ್ದಾರೆ. ಎಲ್ಲಿ ನಿಲ್ಲಬೇಕು ಎಂಬುದು ತೀರ್ಮಾನ ಮಾಡಲು ಸಮಯವಿದೆ. ಸಿದ್ದರಾಮೋತ್ಸವ ನಂತರ ಬಿಜೆಪಿಗೆ ಭಯ ಬಂದಿದೆ. ರಾಷ್ಟ್ರದಲ್ಲಿ ಜನಪ್ರಿಯ ನಾಯಕನಾಗಿ ಕೊಟ್ಟ ಮಾತಿನಂತೆ ನಡೆದ ಸಿದ್ದರಾಮಯ್ಯ ಉತ್ತಮ ರಾಜಕಾರಣಿ ಮತ್ತು ಸಿಎಂ ಕೆಲಸ ಮಾಡಿವರು. ಅವರು ಕೊಟ್ಟ ಯೋಜನೆಗಳು ಇಡೀ ಭಾರತದಲ್ಲಿ ಚರ್ಚೆಗೆ ಗ್ರಾಸವಾಗಿದೆ ಎಂದರು