

ಕೊಪ್ಪಳ: ಜಾತಿ ವಿಷ ಬೀಜ ಬಿತ್ತಿ ದೇಶವನ್ನು ಒಡೆಯಲಾಗಿದೆ. ಅದನ್ನು ಮತ್ತೆ ಒಂದುಗೂಡಿಸಲು ಪಕ್ಷದ ನಾಯಕ ರಾಹುಲ್ ಗಾಂಧಿ ಪಾದಯಾತ್ರೆ ಹಮ್ಮಿಕೊಂಡಿದ್ದು, ನಾವೆಲ್ಲರೂ ಅವರ ಕೈ ಬಲಪಡಿಸೋಣ ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್ ಜಿಲ್ಲಾ ಉಸ್ತುವಾರಿ ಸಂತೋಷ ಲಾಡ್ ಹೇಳಿದರು.
ನಗರದ ಮೇಘರಾಜ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಕಾಂಗ್ರೆಸ್, ಕೊಪ್ಪಳ ಗ್ರಾಮೀಣ ಮತ್ತು ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಶನಿವಾರ ಹಮ್ಮಿಕೊಂಡಿದ್ದ ಐಕ್ಯತಾ ಯಾತ್ರೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಸುಳ್ಳುಗಳ ಮೂಲಕ ಅಧಿಕಾರಕ್ಕೆ ಬಂದ ಬಿಜೆಪಿಗರು ದೇಶ ಮಾರಾಟ ಮಾಡುತ್ತಿದ್ದಾರೆ. ಜಾತಿ, ಜನಾಂಗಿಯ ದ್ವೇಷ ಬಿತ್ತುತ್ತಿದ್ದಾರೆ. ಭಾರತೀಯರಲ್ಲೇ ಬೇರೆ ಬೇರೆ ಎಂಬ ಭಾವನೆ ಹೆಚ್ಚಿಸ್ತುತಿದ್ದಾರೆ. ಮತ್ತೆ ಎಲ್ಲ ಜಾತಿ, ಜನಾಂಗದ ಜನರನ್ನು ಒಟ್ಟುಗೂಡಿಸುವ ಕನಸಿನೊಂದಿಗೆ ರಾಹುಲ್ ಗಾಂಧಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ಅವರ ಸದುದ್ದೇಶಕ್ಕೆ ನಾವೆಲ್ಲ ಕೈ ಜೋಡಿಸಬೇಕು. ಉದ್ಯಮಿ ಅದಾನಿ ಆಸ್ತಿ ಕಳೆದ ಮೂರು ವರ್ಷಗಳಿಗೆ ಹೋಲಿಸಿದಲ್ಲಿ ಹತ್ತು ಪಟ್ಟು ಹೆಚ್ಚಾಗಿದೆ. ಇದನ್ನು ನಾವೆಲ್ಲ ಪ್ರಶ್ನಿಸಬೇಕಿದೆ. ಭ್ರಷ್ಟಾಚಾರ, ದುರಾಡಳಿತ ವಿಷಯವನ್ನು ಮನೆ ಮನೆಗೆ ಮುಟ್ಟಿಸಬೇಕಿದೆ. ನೋಟು ಅಮಾನ್ಯೀಕರಣದ ಹೆಸರಿನಲ್ಲಿ ಉದ್ಯಮಿಗಳಿಗೆ ಲಾಭವಾಯಿತು. ರೈತರಿಗೆ ನಯಾ ಪೈಸೆ ಅನುಕೂಲವಾಗಿಲ್ಲ. ಮುಂಬರುವ ಚುನಾವಣೆಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಾರದಿದ್ದರೆ ದೇಶಕ್ಕೆ ಭವಿಷ್ಯ ಇಲ್ಲದಂತಾಗುತ್ತದೆ. ಎಲ್ಲರೂ ಕೈ ಜೋಡಿಸಿ ಪಾದಯಾತ್ರೆ ಯಶಸ್ವಿಗೊಳಿಸಿ ಎಂದು ಮನವಿ ಮಾಡಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವರಾಜ ತಂಗಡಗಿ ಮಾತನಾಡಿ, ಕೊಪ್ಪಳದಿಂದ 50 ಸಾವಿರ ಜನರನ್ನು ಬಳ್ಳಾರಿ ಕಾರ್ಯಕ್ರಮಕ್ಕೆ ಕರೆದೊಯ್ಯತ್ತೇವೆ. ಭಾರತ್ ಜೋಡೋ ಯಾತ್ರೆ ದೇಶದಲ್ಲಿ ಹೊಸ ಇತಿಹಾಸ ಸೃಷ್ಟಿಸಲಿದೆ. ಯುವಕರಿಗೆ ಉದ್ಯೋಗವಿಲ್ಲ. ಬೆಲೆ ಏರಿಕೆ ಬಿಸಿಯಿಂದ ಜನರನ್ನು ರಕ್ಷಿಸಬೇಕಿದೆ. ಬಿಜೆಪಿ ದುರಾಡಳಿತ ಜನರಿಗೆ ಮುಟ್ಟಿಸಲು ರಾಹುಲ್ ಗಾಂಧಿ ಯಾತ್ರೆ ಹಮ್ಮಿಕೊಂಡಿದ್ದಾರೆ. ಜಿಲ್ಲೆಯ ಐದು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಿಸುವ ಮೂಲಕ ಅವರ ಕೈ ಬಲಪಡಿಸಿ. ರಾಹುಲ್ ಗಾಂಧಿ ದೊಡ್ಡ ಮನೆತನದಿಂದ ಬಂದವರು. ದೇಶದ ಜನತೆಗಾಗಿ ಸಾವಿರಾರು ಕಿಮೀ ಪಾದಯಾತ್ರೆಗೆ ಮುಂದಾಗಿದ್ದಾರೆ ಎಂದರು.
ಶಾಸಕ ರಾಘವೇಂದ್ರ ಹಿಟ್ನಾಳ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜ್ಯೋತಿ ಗೊಂಡಬಾಳ, ನಗರಸಭೆ ಸದಸ್ಯ ಅಮ್ಜದ್ ಪಟೇಲ್ ಮಾತನಾಡಿದರು. ಕಾರ್ಯಕ್ರಮದಲ್ಲಿ ವಿವಿಧ ಗ್ರಾಮಗಳ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಗೊಂಡರು. ಮುಖಂಡರಾದ ಬಸವರಾಜ ಹಿಟ್ನಾಳ್, ಗೂಳಪ್ಪ ಹಲಗೇರಿ, ಎಂ.ಕಾಟನ್ ಪಾಷಾ, ಶಾಂತಣ್ಣ ಮುದಗಲ್, ಇಮಾಮ್ ರಿಯಾಜ್, ಎಸ್.ಬಿ.ನಾಗರಳ್ಳಿ, ಶಿವರಡ್ಡಿ ಭೂಮಕ್ಕನವರ್, ಕೆ.ಎಂ.ಸೈಯದ್, ಇಂದಿರಾ ಬಾವಿಕಟ್ಟಿ, ಶೈಲಜಾ ಹಿರೇಮಠ, ಪ್ರಸನ್ನ ಗಡಾದ್, ಜನಾರ್ದನ ಹುಲಗಿ ಇತರರಿದ್ದರು.