

ಕೊಪ್ಪಳ: ವಚನ ಸಾಹಿತ್ಯ ಸಂರಕ್ಷಿಸಲು .ಗು.ಹಳಕಟ್ಟಿ ಅವರು ಮಾಡಿದ ಕಾರ್ಯ ಶ್ಲಾಘನೀಯ ಎಂದು ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ ಹೇಳಿದರು.
ನಗರದ ಸಾಹಿತ್ಯ ಭವನದಲ್ಲಿ ಜಿಲ್ಲಾಡಳಿತದಿಂದ .ಗು.ಹಳಕಟ್ಟಿ ಜನ್ಮ ದಿನಾಚರಣೆ ಅಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ ವಚನ ಸಾಹಿತ್ಯ ಸಂರಕ್ಷಣಾ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
12ನೇ ಶತಮಾನದಲ್ಲಿ ಶರಣರು ಮನುಕುಲದ ಉದ್ಧಾರಕ್ಕಾಗಿ ವಚನ ರಚಿಸಿದ್ದಾರೆ. ಅವುಗಳನ್ನು ರಕ್ಷಿಸಿ ಮುಂದಿನ ಪೀಳಿಗೆಗೆ ದಾಖಲೆಗಳಾಗಿ ಉಳಿಸುವ ಕೆಲಸ ಹಳಕಟ್ಟಿಯವರು ಮಾಡಿದ್ದಾರೆ. ವಿಜಯಪುರದಲ್ಲಿ ಬಿಎಲ್‌ಇಡಿ ವಿವಿ ಸ್ಥಾಪಿಸಿ ಉನ್ನತ ಶಿಕ್ಷಣಕ್ಕೆ ಬುನಾದಿ ಹಾಕಿದರು. ಬ್ಯಾಂಕ್ ಸ್ಥಾಪಿಸಿದರು. ಹಳಕಟ್ಟಿ ಸ್ಮರಣಾರ್ಥ ವಿಜಯಪುರದಲ್ಲಿ ಅವರ ಸ್ಮಾರಕ ನಿರ್ಮಿಸಲಾಗಿದೆ. ಅವರ ಕಾರ್ಯ ಅರ್ಥಪೂರ್ಣಗೊಳಿಸುವ ಜವಾಬ್ದಾರಿ ನಮ್ಮ ಮೇಲಿದೆ. ವಚನಗಳ ಸತ್ವ ಅರಿತು ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದರು.
ಎಡಿಸಿ ಸಾವಿತ್ರಿ ಕಡಿ ಮಾತನಾಡಿ, ಹಳಕಟ್ಟಿ ಸಾಹಿತ್ಯದೊಂದಿಗೆ ಸಾಮಾಜಿಕ ಕೆಲಸ ಮಾಡಿದ್ದಾರೆ. ಅವರ ಸಾಧನೆ ನಮ್ಮೆಲ್ಲರಿಗೆ ಸ್ಪೂರ್ತಿ. ಕರ್ನಾಟಕ ಏಕೀಕರಣ ಚಳವಳಿಯಲ್ಲಿ ಪ್ರಮುಖ ಪಾತ್ರವಹಿಸಿದ್ದರು. ವಚನ ಸಾಹಿತ್ಯದೆಡೆಗೆ ಆಕರ್ಷಿತರಾಗಿ ಅವುಗಳ ರಕ್ಷಣಾ ಕಾರ್ಯ ಮಾಡಿದರು. ವಿಪ ಸದಸ್ಯರಾಗಿದ್ದರು. ವಚನಗಳ ರಕ್ಷಣೆಗಾಗಿ ತಮ್ಮ ಮನೆಯನ್ನೇ ಮಾರಿದರು ಎಂದರು.
ವಿಶ್ವಗುರು ಬಸವೇಶ್ವರ ಟ್ರಸ್ಟ್‌ನ ಶಿವಕುಮಾರ ಕುಕನೂರು ಮಾತನಾಡಿ, ಕೀರಪ್ಪ ಗುರುಬಸಪ್ಪ ಹಳಕಟ್ಟಿಯವರು 25ನೆ ವಯಸ್ಸಿಗೆ ವಚನ ಸಾಹಿತ್ಯದೆಡೆ ಆಕರ್ಷಿತರಾದರು. ಒಂದು ವಿವಿ 100 ವರ್ಷ ಮಾಡುವ ಕೆಲಸವನ್ನು ಅವರು ಒಬ್ಬರೇ ಮಾಡಿದರು. 23 ಸಾವಿರ ವಚನ ಸಂಗ್ರಹಿಸಿ ಪ್ರಕಟಿಸಿದರು. ಇಂಗ್ಲೀಷ್‌ಗೂ ತರ್ಜುಮೆ ಮಾಡಿದರು. ನವಕರ್ನಾಟಕ ಪತ್ರಿಕೆ ಆರಂಭಿಸಿ ಏಕೀಕರಣಕ್ಕೆ ಮುನ್ನುಡಿ ಬರೆದರು ಎಂದು ತಿಳಿಸಿದರು.
ಸಾಹಿತಿ ಸಾವಿತ್ರಿ ಮುಜುಂದಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ ಮರಬನಳ್ಳಿ, ಡಾ.ಸಂಗಮೇಶ ಕಲಾಲ್, ವಿವಿಧ ಅಧಿಕಾರಿಗಳು, ಸಿಬ್ಬಂದಿ, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಇತರರಿದ್ದರು.