

ಕೊಪ್ಪಳ: ಒಳ್ಳೆಯ ಯೋಚನೆ ಇಟ್ಟುಕೊಂಡು ಕೆಲಸ ಮಾಡಿದರೆ ಏನನ್ನಾದರೂ ಸಾಧಿಸಬಹುದು ಎನ್ನುವುದಕ್ಕೆ ಗಿಣಿಗೇರಿ ಕೆರೆ ಅಭಿವೃದ್ಧಿ ಸಾಕ್ಷಿ ಎಂದು ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಹೇಳಿದರು.
ಗವಿಸಿದ್ಧೇಶ್ವರ ಜಾತ್ರೆ ಅಂಗವಾಗಿ ತಾಲೂಕಿನ ಗಿಣಿಗೇರಿ ಕೆರೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಭೂ-ಸಾಹಸ, ಜಲಕ್ರೀಡೆ, ಉದ್ಯಾನ ಉದ್ಘಾಟಿಸಿ ಮಾತನಾಡಿದರು. ಗಿಣಿಗೇರಿ ಕೆರೆ ಸುತ್ತಲಿನ ಗ್ರಾಮಗಳಿಗೆ ಆಸರೆಯಾಗಿದೆ. ವರ್ಷದ ಹಿಂದೆ ಇಲ್ಲಿ ಓಡಾಡುವುದು ಕಷ್ಟವಿತ್ತು. ಆದರೆ ಗ್ರಾಮಸ್ಥರ ಸಂಕಲ್ಪದಿಂದ ಈಗ ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ. ಕೆರೆ, ಉದ್ಯಾನ, ಆಟದ ಸಾಮಗ್ರಿ ಎಲ್ಲವೂ ನಿಮ್ಮ ಸ್ವತ್ತು. ಇದನ್ನು ಕಾಪಾಡಿಕೊಂಡು ಹೋಗುವ ಜವಾಬ್ದಾರಿ ಎಲ್ಲರ ಮೇಲಿದೆ. ಕೆರೆ ಅಭಿವೃದ್ಧಿಗೆ ಮಹಿಳೆಯರು, ಪುರುಷರು, ಮಕ್ಕಳು, ವಿವಿಧ ಕಂಪನಿಗಳು, ಇಲಾಖೆ ಅಧಿಕಾರಿಗಳು ಶ್ರಮಿಸಿದ್ದಾರೆ ಎಂದರು.
ಜಿಪಂ ಮಾಜಿ ಸದಸ್ಯ ಗೂಳಪ್ಪ ಹಲಗೇರಿ ಮಾತನಾಡಿ, ಗವಿಶ್ರೀಗಳ ಕೃಪಾಶೀರ್ವಾದ, ಜನರ ಸಹಕಾರದಿಂದ 258 ಎಕರೆ ಗಿಣಗೇರಿ ಕೆರೆ ಅಭಿವೃದ್ಧಿ ಕಂಡಿದೆ. ಇದರಿಂದ ರೈತರಿಗೆ ಸಾಕಷ್ಟು ಅನುಕೂಲವಾಗಿದೆ. ಮಕ್ಕಳಿಗೆ ಆಟವಾಡಲು ಉದ್ಯಾನ, ಆಟಿಕೆಗಳಿರುವುದು ಗ್ರಾಮಸ್ಥರಲ್ಲಿ ಸಂತಸ ಮೂಡಿಸಿದೆ ಎಂದರು.
ಅಭಿನವ ಶ್ರೀಕಂಠ ಸ್ವಾಮೀಜಿ, ನಾಗಲಿಂಗ ಸ್ವಾಮೀಜಿ, ನರಸಿಂಹ ಸ್ವಾಮೀಜಿ, ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಸುಬ್ಬಣಾಚಾರ್ಯ ವಿದ್ಯಾನಗರ, ಮಾಜಿ ಶಾಸಕ ಬಸವರಾಜ ಹಿಟ್ನಾಳ್, ಮುಖಂಡರಾದ ಸಿ.ವಿ.ಚಂದ್ರಶೇಖರ, ಗವಿಸಿದ್ದಪ್ಪ ಕರಡಿ, ಗ್ರಾಪಂ ಅಧ್ಯಕ್ಷ ಲಕ್ಷ್ಮಣ ಡೊಳ್ಳಿನ, ಡಿವೈಎಸ್ಪಿ ಶರಣಪ್ಪ ಸುಬೇದಾರ, ಸಿಪಿಐಗಳಾದ ಮಹಾಂತೇಶ ಸಜ್ಜನ್, ವಿಶ್ವನಾಥ ಹೀರೆಗೌಡರ್, ಕಲ್ಯಾಣಿ ಕಂಪನಿ ಸಿಇಒ ರತ್ನಪ್ರಸಾದ ಇತರರಿದ್ದರು.