ಕೊಪ್ಪಳ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ

2102-Kpl-Ravi-1
Published on

ಪರಿಹಾರ ನೀಡಲು ಸರ್ಕಾರ ನಿರಾಸಕ್ತಿ

ಕೊಪ್ಪಳ: ಸೇವೆಯಿಂದ ಬಿಡುಗಡೆಯಾದ ನೌಕರರಿಗೆ 1ಲಕ್ಷ ರೂ. ಇಡಿಗಂಟು ಇಡುವಿಕೆ ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ಜಿಲ್ಲಾ ಸಮಿತಿ ಪದಾಧಿಕಾರಿಗಳು ಮಂಗಳವಾರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

20 ವರ್ಷ ಸೇವೆ ಸಲ್ಲಿಸಿದ ಬಿಸಿಯೂಟ ನೌಕರರ ಸೇವೆ ಲೆಕ್ಕಿಸದೆ 2022ರ ಜೂನ್‌ನಲ್ಲಿ ಆರು ಸಾವಿರ ನೌಕರರನ್ನು ಕೆಲಸದಿಂದ ಬಿಡುಗಡೆಗೊಳಿಸಲಾಗಿದೆ. ಈ ವರ್ಷದ ಜೂನ್ ವೇಳೆಗೆ ಮತ್ತೆ ಮೂರು ಸಾವಿರ ನೌಕರರನ್ನು ಬಿಡುಗಡೆಗೊಳಿಸಲು ಸರ್ಕಾರ ತಯಾರಿ ನಡೆಸುತ್ತಿದೆ. 6,500 ಶಾಲೆಗಳ ವಿಲೀನದಿಂದ ಆ ಶಾಲೆಗಳಲ್ಲಿ ಕೆಲಸ ಮಾಡುವ ನೌಕರರು ಕೆಲಸ ಕಳೆದುಕೊಳ್ಳಲಿದ್ದಾರೆ. ಶಕ್ತಿ ಇದ್ದಾಗ ದುಡಿಸಿಕೊಂಡ ಸರ್ಕಾರ ಬಿಡುಗಡೆ ನಂತರ ಯಾವುದೇ ಪರಿಹಾರ ನೀಡುತ್ತಿಲ್ಲ. ಯಾವುದೇ ಇಡಿಗಂಟು ಇಡದೆ ಸಾಮಾಜಿಕ ನ್ಯಾಯದ ವಿರುದ್ಧವಾಗಿ ಸರ್ಕಾರ ನಡೆಸಿಕೊಳ್ಳುತ್ತಿದೆ ಎಂದು ಆರೋಪಿಸಿದರು.

ಸೇವೆಯಿಂದ ಬಿಡುಗಡೆಗೊಂಡ ಆರು ಸಾವಿರ ನೌಕರರಿಗೆ 1ಲಕ್ಷ ರೂ. ಇಡಿಗಂಟು ನೀಡಬೇಕು. 60ವರ್ಷ ಮೇಲ್ಪಟ್ಟ ನೌಕರರಿಗೆ ನಿವೃತ್ತಿ ವೇತನ, ಇಡಿಗಂಟು ನೀಡಿ ಬಿಡುಗಡೆಗೊಳಿಸಬೇಕು. ಬಜೆಟ್‌ನಲ್ಲಿ ಒಂದು ಸಾವಿರ ರೂ. ಗೌರವಧನ ಹೆಚ್ಚಳ ಮಾಡಿದ್ದು, ಅದನ್ನು ಈ ವರ್ಷದ ಜನವರಿಯಿಂದ ಅನ್ವಯಗೊಳಿಸಬೇಕು. ನಿವೃತ್ತಿಯಾಗುವ ಅಡುಗೆ ಸಿಬ್ಬಂದಿ ಕುಟುಂಬದವರಿಗೆ ಕೆಲಸ ನೀಡಬೇಕು. ಮರಣ ಹೊಂದಿದ ಅಡುಗೆದಾರರ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು. ಜಿಲ್ಲಾ ಸಮಿತಿ ಅಧ್ಯಕ್ಷ ಲಕ್ಷ್ಮೀದೇವಿ ಸೊನಾರ, ಅನ್ನಪೂರ್ಣ ಲಿಂಗದಳ್ಳಿ, ಶಿವನಗೌಡ ಪುಟಗಮರಿ, ಅಲಿಮಾ, ಗಂಗಮ್ಮ ಸಿದ್ದಾಪುರ, ಜಯಶ್ರೀ ಕುಕನೂರ, ಶೋಭಾ ಸಿದ್ದಾಪುರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net