ಮೃತ ಮಹಿಳೆ ಕುಟುಂಬಕ್ಕೆ ಅಗತ್ಯ ಪರಿಹಾರ: ಕೊಪ್ಪಳ ನಗರಸಭೆ ಅಧ್ಯಕ್ಷೆ ಶಿವಗಂಗಾ ಭರವಸೆ

251122 Koppala municipal General Meeting
ಕೊಪ್ಪಳದಲ್ಲಿ ಶುಕ್ರವಾರ ನಗರಸಭೆ ವಿಶೇಷ ಸಾಮಾನ್ಯ ಸಭೆ ನಡೆಯಿತು.
Published on

ಕೊಪ್ಪಳ: ಬಿಡಾಡಿ ದನದ ದಾಳಿಯಿಂದ ಮೃತಪಟ್ಟ 30ನೇ ವಾರ್ಡ್ ನಿವಾಸಿ ರಮೀಜಾ ಬೇಗಂ ಅವರ ಕುಟುಂಬಕ್ಕೆ ಕಾನೂನಿನಡಿ ಲಭ್ಯ ಸೌಲಭ್ಯ ಕಲ್ಪಿಸಲಾಗವುದು. ಹೆಚ್ಚಿನ ಪರಿಹಾರ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದೆಂದು ನಗರಸಭೆ ಅಧ್ಯಕ್ಷೆ ಶಿವಗಂಗಾ ಶಿವರಡ್ಡಿ ಭೂಮಕ್ಕನವರ್ ಹೇಳಿದರು. ಇಲ್ಲಿನ ನಗರಸಭೆ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿಶೇಷ ಸಾಮಾನ್ಯ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.

ನಗರದಲ್ಲಿ ಬೀದಿ ದನಗಳು, ನಾಯಿಗಳ ಹಾವಳಿ ಹೆಚ್ಚಿದೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿವೆ. ಇತ್ತೀಚೆಗಷ್ಟೇ ದನ ಇರಿದು ಮಹಿಳೆ ಮೃತಪಟ್ಟಿದ್ದಾರೆ. ಇದು ಎಲ್ಲರ ಗಮನಕ್ಕಿದೆ. ಅವರ ಕುಟುಂಬಕ್ಕೆ ಅಗತ್ಯ ಪರಿಹಾರ ನೀಡಲಾಗುವುದು. ಕುಟುಂಬದ ಒಬ್ಬರಿಗೆ ಗುತ್ತಿಗೆ ಆಧಾರದಲ್ಲಿ ಯಾವುದಾದರೂ ಉದ್ಯೋಗ ನೀಡೋಣ ಎಂದರು. ಇದಕ್ಕೆ ಸರ್ವ ಸದಸ್ಯರು ಸಮ್ಮತಿಸಿದರು. ಅಧಿಕಾರಿಗಳು ತಮ್ಮ ವ್ಯಾಪ್ತಿಗೆ ಬರುವುದಿಲ್ಲವೆಂದು ಸಬೂಬು ಹೇಳದಂತೆ ಸೂಚಿಸಿದರು.

ಗವಿಮಠ ಜಾತ್ರೆ ಸಮೀಪಿಸುತ್ತಿದ್ದು, ನಗರದಲ್ಲಿ ಶೌಚಗೃಹ, ರಸ್ತೆ ರಿಪೇರಿ ಮಾಡಿಸಬೇಕು. ಸಮರ್ಪಕ ಕುಡಿವ ನೀರು ಪೂರೈಸುವಂತೆ ಸದಸ್ಯರು ಒತ್ತಾಯಿಸಿದರು. ಪೌರಾಯುಕ್ತ ಎಚ್.ಎನ್.ಭಜಕ್ಕನವರ್ ಮಾತನಾಡಿ, ಪ್ರತಿ ನಗರ, ಸ್ಥಳೀಯ ಸಂಸ್ಥೆಯಿಂದ ತಲಾ ಮೂವರ ಸ್ವಚ್ಛತಾ ಕಾರ್ಮಿಕರನ್ನು ಕರೆಸಲಾಗುವುದೆಂದರು. ನಗರದ ಯಾವುದೇ ವಾರ್ಡ್‌ನಲ್ಲಿ ಶೌಚಗೃಹ, ಚರಂಡಿ ಸ್ವಚ್ಛವಿಲ್ಲವೆಂದು ಸದಸ್ಯರು ದೂರಿದರು. ಅಗತ್ಯ ಇರುವಷ್ಟು ಕಾರ್ಮಿಕರನ್ನು ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳಲು ಆಗ್ರಹಿಸಿದರು. ಬಸವೇಶ್ವರ ವೃತ್ತ ಸೇರಿ ನಗರದ ಬಹುಪಾಲು ರಸ್ತೆಗಳು ಹಾಳಾಗಿದ್ದು, ತಾತ್ಕಾಲಿಕವಾಗಿಯಾದರೂ ರಿಪೇರಿಗೊಳಿಸಲು ತಾಕೀತು ಮಾಡಿದರು. ಈ ಬಗ್ಗೆ ಕ್ರಮವಹಿಸಲು ಅಧ್ಯಕ್ಷರು ಅಧಿಕಾರಿಗಳಿಗೆ ಆದೇಶಿಸಿದರು.

ನಗರದ ಅಶೋಕ ವೃತ್ತ ಸ್ತಂಭ ಹಾಳಾಗಿದ್ದು, ದುರಸ್ತಿಗೊಳಿಸದಿರುವುದಕ್ಕೆ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಎಇಇ ಮಧುರಾ ಬಿ.ಮಾತನಾಡಿ, 15ನೇ ಹಣಕಾಸು ಉಳಿತಾಯ ಮೊತ್ತ 16 ಲಕ್ಷ ರೂ.ನಲ್ಲಿ ವೃತ್ತ ಅಭಿವೃದ್ಧಿಗೆ ಯೋಜಿಸಲಾಗಿದೆ. ಸ್ತಂಭಕ್ಕೆ ಧಕ್ಕೆಯಾಗದಂತೆ ಸ್ವಲ್ಪ ಎತ್ತರಿಸಿಕೊಂಡು, ವಿದ್ಯುತ್ ದೀಪ ಅಳವಡಿಸಿ ಅಲಂಕಾರಗೊಳಿಸಲಾಗುವುದೆಂದರು. ಹಿಂದಿನ ಸಭೆಗಳಲ್ಲಿ ಗಡಿಯಾರ ಕಂಬ ವೃತ್ತ, ಲಾಲ್‌ಬಹಾದುರ್ ಶಾಸ್ತ್ರಿ ವೃತ್ತ ಅಭಿವೃದ್ಧಿಗೆ ನಡಾವಳಿ ರಚಿಸಲಾಗಿದೆ. ನಗರಾಭಿವೃದ್ಧಿ ಪ್ರಾಧಿಕಾರದಿಂದ ಅಭಿವೃದ್ಧಿ ಮಾಡುವುದಾಗಿ ತಿಳಿಸಿದ್ದು ಕ್ರಮವಹಿಸಿಲ್ಲವೆಂದು ಸದಸ್ಯರು ದೂರಿದರು. ಈ ಬಗ್ಗೆ ನಡಾವಳಿ ರಚಿಸಿ ಕ್ರಮವಹಿಸುವುದಾಗಿ ಪೌರಾಯುಕ್ತ ಭರವಸೆ ನೀಡಿದರು. ಉಪಾಧ್ಯಕ್ಷೆ ಆಯೇಷಾ ರುಬಿನಾ, ಸ್ಥಾಯಿ ಸಮಿತಿ ಅಧ್ಯಕ್ಷೆ ಯಲ್ಲಮ್ಮ ಗಿಣಿಗೇರಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net