

ಕೊಪ್ಪಳ: ರೈತರಿಗೆ ಅನುಕೂಲವಾಗುವ ಫಸಲ್ ಬಿಮಾ ಯೋಜನೆ ಜಿಲ್ಲೆಯಲ್ಲಿ ಸರಿಯಾಗಿ ಅನುಷ್ಠಾನ ಮಾಡುವಂತೆ ಜಿಲ್ಲಾಧಿಕಾರಿ ಎಂ.ಸುಂದರೇಶ ಬಾಬು ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಗ್ರಾಪಂ, ಹೋಬಳಿವಾರು ಬೆಳೆ ಕಟಾವು ಪ್ರಯೋಗಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ರಸಕ್ತ ಸಾಲಿನಲ್ಲಿ ವಿಮಾ ಯೋಜನೆ ಸರಿಯಾಗಿ ಅನುಷ್ಠಾನಗೊಳಿಸಿ. ಮುಖ್ಯ ಹಾಗೂ ಇತರ ಬೆಳೆಗಳನ್ನು ತಾಲೂಕುವಾರು ಪರಿಗಣಿಸಿ. ಆಯಾ ತಾಲೂಕಿನಲ್ಲಿ ಮುಖ್ಯಬೆಳೆಗಳಿಗೆ ಗ್ರಾಪಂ ಅಥವಾ ನಗರ, ಸ್ಥಳೀಯ ಸಂಸ್ಥೆಗಳನ್ನು ವಿಮಾ ಘಟಕವಾಗಿ ಇತರ ಬೆಳೆಗಳಿಗೆ ಹೋಬಳಿಯನ್ನು ವಿಮಾ ಘಟಕವಾಗಿ ಪರಿಗಣಿಸುವಂತೆ ಮಾರ್ಗಸೂಚಿ ಇದ್ದು, ಅದನ್ನೇ ಪಾಲಿಸಿ.
ಕಂದಾಯ, ಗ್ರಾಮೀಣಾಭಿವೃದ್ಧಿ, ತಾಲೂಕು, ಹೋಬಳಿ ಮಟ್ಟದ ಕೃಷಿ, ತೋಟಗಾರಿಕೆ ಅಧಿಕಾರಿಗಳು ಕಡ್ಡಾಯವಾಗಿ ಬೆಳೆ ಅಂದಾಜು ಸಮೀಕ್ಷೆಯಲ್ಲಿ ಭಾಗಿಯಾಗಿ. ವಿಮಾ ಕಂಪನಿಗಳ ಪ್ರತಿನಿಧಿಗಳೊಂದಿಗೆ ಆ್ಯಪ್ ಮೂಲಕ ಬೆಳೆ ಅಂದಾಜು ಸಮೀಕ್ಷೆ ನಡೆಸಿ. ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳು ಕಟಾವು ಪ್ರಯೋಗದ ಮೇಲುಸ್ತುವಾರಿ ನೋಡಿಕೊಳ್ಳಿ. ಯಾವುದೇ ಲೋಪವಾಗದಂತೆ ನೋಡಿಕೊಳ್ಳುವಂತೆ ಎಚ್ಚರಿಸಿದರು.
ಜಂಟಿ ಕೃಷಿ ನಿರ್ದೇಶಕ ಟಿ.ಎಸ್.ರುದ್ರೇಶಪ್ಪ ಮಾತನಾಡಿ, ವಿಮೆಗೆ ನೀರಾವರಿ ಆಶ್ರಿತ ಭತ್ತ, ಮೆಕ್ಕೆಜೋಳ, ನೀರಾವರಿ ಹಾಗೂ ಮಳೆ ಆರಿತ ಜೋಳ, ಸಜ್ಜೆ, ತೊಗರಿ, ಮಳೆ ಆಶ್ರಿತ ಹುರಳಿ, ನೀರಾವರಿ ಆಶ್ರಿತ ಸೂರ್ಯಕಾಂತಿ ಬೆಳೆಗಳಿಗೆ ಜು.31ವರೆಗೆ ವಿಮೆ ನೋಂದಣಿಗೆ ಅವಕಾಶವಿದೆ ಎಂದು ಮಾಹಿತಿ ನೀಡಿದರು. ಇದೆ ವೇಳೆ, ಹಿಂಗಾರು ಹಂಗಾಮಿನ ಬೆಳೆ ಕ್ಷೇತ್ರ ಮರು ಹೊಂದಾಣಿಕೆ ವರದಿ ಅಂತಿಮಗೊಳಿಸಲಾಯಿತು.
ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಸುಧಾಕರ ಮಾನೆ, ಪಶುಪಾಲನಾ ಇಲಾಖೆ ಉಪ ನಿರ್ದೇಶಕ ಪಿ.ಎಂ.ಮಲ್ಲಯ್ಯ, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ವಿಭಾಗದ ಅಭಿಯಂತರ ಹರ್ಷವರ್ದನ್ ಎಸ್. ಜಿಲ್ಲಾ ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ, ಸಹಾಯಕ ಸಾಂಖ್ಯಿಕ ಅಧಿಕಾರಿ ಮಂಜುಳಾ, ರೇಷ್ಮೆ ಇಲಾಖೆಯ ಅಕ್ಕಮಹಾದೇವಿ ಬಡಿಗೇರ ಇತರರಿದ್ದರು.