ದೇಶ ಮುನ್ನಡೆಸಲು ಬೇಕು ಸಮರ್ಥ ನಾಯಕ: ಬಿಜೆಪಿ ಪ್ರ.ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಹೇಳಿಕೆ

210123 Koppala BJP Sankalpa Yatre
ಕೊಪ್ಪಳದಲ್ಲಿ ಶನಿವಾರ ಬಿಜೆಪಿ ವಿಜಯ ಸಂಕಲ್ಪ ಅಭಿಯಾನಕ್ಕೆ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಚಾಲನೆ ನೀಡಿದರು.
Published on

ಕೊಪ್ಪಳ: ದೇಶ ಮುನ್ನಡೆಯಲು ಉತ್ತಮ ನಾಯಕತ್ವ ಬೇಕು. ಪ್ರಧಾನಿ ನರೇಂದ್ರ ಮೋದಿ ಆ ಕೆಲಸ ಮಾಡುತಿದ್ದು, ಅವರ ಕೈ ಬಲಪಡಿಸಬೇಕಿದೆ. ಕಾಂಗ್ರೆಸ್, ಬಸ್‌ನಲ್ಲಿ ಜನರ ಬಳಿ ಬಂದರೆ, ಬಿಜೆಪಿ ಮನೆ ಮನೆಗೆ ತಲುಪುತ್ತಿದೆ ಎಂದು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಹೇಳಿದರು.

ನಗರದ 26ನೇ ವಾರ್ಡ್‌ನ ಗಣೇಶನಗರದಲ್ಲಿ ಶನಿವಾರ ಬಿಜೆಪಿ ವಿಜಯ ಸಂಕಲ್ಪ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ದೇಶದ ಜನರಿಗೆ ಬಿಜೆಪಿ ನೀಡಿದ ಭರವಸೆ ಈಡೇರಿಸಿದೆ. 370 ರದ್ದು, ರಾಮ ಮಂದಿರ ನಿರ್ಮಾಣವಾಗುತ್ತಿದೆ. ಜಗತ್ತು ನಿಬ್ಬೆರಗಾಗುವ ರೀತಿಯಲ್ಲಿ ದೇಶ ಅಭಿವೃದ್ಧಿ ಕಾಣುತ್ತಿದೆ. ಕಾಂಗ್ರೆಸ್‌ನವರು ಒಳಜಗಳ ಮಾಡುತ್ತ ಅಧಿಕಾರಕ್ಕಾಗಿ ಕಿತ್ತಾಡುತ್ತಿದ್ದಾರೆ. ಅಭಿವೃದ್ಧಿಯೊಂದೇ ನಮ್ಮ ಗುರಿ. ವಿಜಯ ಸಂಕಲ್ಪ ಅಭಿಯಾನ ಮೂಲಕ ರಾಜ್ಯದ ಜನರ ಮನೆ ಮನೆ ತಲುಪುತ್ತಿದ್ದೇವೆ. ಅಭಿಯಾನದಲ್ಲಿ ಒಂದು ಕೋಟಿ ಸದಸ್ಯತ್ವ ಮಾಡಿಸುವ ಗುರಿ ಹೊಂದಲಾಗಿದೆ. ಎಲ್ಲ ಬೂತ್‌ಗಳಲ್ಲಿ ಒಂದೇ ದಿನದಲ್ಲಿ 10 ಲಕ್ಷ ಸದಸ್ಯತ್ವ ಮಾಡುವ ಭರವಸೆ ಇದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಾಧನೆಗಳನ್ನು ಜನರಿಗೆ ಮುಟ್ಟಿಸಲಾಗುವುದು ಎಂದರು.

ಬಳ್ಳಾರಿ ವಿಭಾಗ ಸಹ ಪ್ರಭಾರ ಚಂದ್ರಶೇಖರ ಹಲಗೇರಿ ಮಾತನಾಡಿ, ಈಗಾಗಲೇ ಸದಸ್ಯತ್ವ ಹೊಂದಿದವರೂ ಮತ್ತೊಮ್ಮೆ ಸದಸ್ಯತ್ವ ಪಡೆಯಬೇಕು. ಕೇಂದ್ರ, ರಾಜ್ಯ ಸರ್ಕಾರದ ಸಾಧನೆಗಳಿರುವ ಕರಪತ್ರಗಳನ್ನು ಮನೆ ಮನೆಗೆ ಹಂಚಿ. ಆರೋಗ್ಯ, ಆಹಾರ ಸುರಕ್ಷತೆ ಸೇರಿ ಅನೇಕ ರಂಗದಲ್ಲಿ ದೇಶ ಅಭೀವೃದ್ಧಿಯಾಗಿದ್ದು, ಈ ಬಗ್ಗೆ ಜನರಿಗೆ ತಿಳಿಸಬೇಕು ಎಂದರು.

ಅಭಿಯಾನದ ಜಿಲ್ಲಾ ಸಂಚಾಲಕ ಚಂದ್ರಶೇಖರ ಕವಲೂರು ಮಾತನಾಡಿ, ಕಾಂಗ್ರೆಸ್, ಜೆಡಿಎಸ್‌ನಲ್ಲಿ ಕುಟುಂಬ ರಾಜಕಾರಣವಿದೆ. ಬಿಜೆಪಿಯಲ್ಲಿ ಇಲ್ಲ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಗೆಲ್ಲಿಸುವ ಕೆಲಸ ಮಾಡೋಣ ಎಂದರು. ನಗರ ಮಂಡಲ ಅಧ್ಯಕ್ಷ ಸುನೀಲ್ ಹೆಸರೂರು, ನಗರಸಭೆ ಸದಸ್ಯೆ ದೇವಕ್ಕ ಕಂದಾರಿ, ನಗರ ಸಂಚಾಲಕ ಅಮರೇಶ ಮುರಳಿ, ಮುಖಂಡರಾದ ಸಿ.ವಿ ಚಂದ್ರಶೇಖರ, ಡಾ.ಕೆ.ಜಿ ಕುಲಕರ್ಣಿ, ರಾಜ್ಯ ಮಹಿಳಾ ಮೋರ್ಚಾ ಕಾರ್ಯದರ್ಶಿ ಶೋಭಾ ನಗರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net