ನಿರಂತರ ಯೋಗದಿಂದ ಶಾಂತಿ, ನೆಮ್ಮದಿ ಪ್ರಾಪ್ತಿ

Koppal Eshwari VV
ಕೊಪ್ಪಳದ ಈಶ್ವರೀಯ ವಿದ್ಯಾಲಯದಲ್ಲಿ ಮಂಗಳವಾರ ಆಯೋಜಿಸಿದ್ದ ಶಿವಸ್ಮೃತಿ ಭವನದ ಲೋಕಾರ್ಪಣೆ ಕಾರ್ಯಕ್ರಮವನ್ನು ರಾಜಯೋಗಿನಿ ಲಂಡನ್ನಿನ ಜಯಂತಿ ದೀದೀಜಿ ಉದ್ಘಾಟಿಸಿದರು.
Published on

ಕೊಪ್ಪಳ: ಕಳೆದ ಎಂಟು ವರ್ಷಗಳಿಂದ ಯೋಗವನ್ನು ಜಗತ್ತಿಗೆ ಪರಿಚಯಿಸಲಾಗುತ್ತಿದ್ದು, ಭಾರತ ಭೂಮಿಯಲ್ಲಿ ರಾಜಯೋಗದ ಕಳೆ ಬಂದಿದೆ ಎಂದು ರಾಜಸ್ತಾನದ ಮೌಂಟ್ ಅಬುವಿನ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಆಡಳಿತಾಧಿಕಾರಿಣಿ ರಾಜಯೋಗಿನಿ ಲಂಡನ್ನಿನ ಜಯಂತಿ ದಿದೀಜಿ ಹೇಳಿದರು.

ನಗರದ ಈಶ್ವರೀಯ ವಿದ್ಯಾಲಯದಲ್ಲಿ ಮಂಗಳವಾರ ಆಯೋಜಿಸಿದ್ದ ಶಿವಸ್ಮೃತಿ ಭವನದ ಲೋಕಾರ್ಪಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಶಾಂತಿ, ನೆಮ್ಮದಿಯನ್ನು ಬಿಟ್ಟು ಉಳಿದೆಲ್ಲವನ್ನು ಹಣದಿಂದ ಕೊಂಡುಕೊಳ್ಳಬಹುದು. ಪರಮಾತ್ಮನ ಧ್ಯಾನದಿಂದ ಶಾಂತಿ, ಸುಖ, ಸತ್ಯ, ನೆಮ್ಮದಿ ಎಲ್ಲವೂ ನಮ್ಮದಾಗಲಿದೆ. 24 ಗಂಟೆಗಳ ಸಮಯದಲ್ಲಿ ಯಾವಾಗ, ಏನು ಮಾಡಬೇಕೆಂಬುದುನ್ನು ಅರಿತು ಬದುಕಿದರೆ ಜೀವನ ಪರಿಪೂರ್ಣವಾಗುತ್ತದೆ ಎಂದರು.

ಸಂಸದ ಸಂಗಣ್ಣ ಕರಡಿ ಮಾತನಾಡಿ, ಯೋಗಿನಿ ಅಕ್ಕನವರು ಸಮಾಜದ ಪ್ರೀತಿಗೆ ಪಾತ್ರರಾಗಿದ್ದಾರೆ. ಅವರ ನಿಸ್ವಾರ್ಥ ಸೇವೆ ಅನನ್ಯವಾಗಿದೆ. ಸಮಾಜದಲ್ಲಿ ಸ್ವಾರ್ಥಕ್ಕೆ ಕಡಿವಾಣ ಹಾಕಬೇಕಾದರೆ ಈಶ್ವರೀಯ ವಿಶ್ವವಿದ್ಯಾಲಯ ಪಾತ್ರ ಪ್ರಮುಖವಾದದ್ದು. ಹುಟ್ಟು ಉಚಿತ, ಸಾವು ಖಚಿತ, ಈ ನಡುವೆ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು ಎನ್ನುವುದು ಈಶ್ವರೀಯ ವಿವಿ ಸುಸಂದೇಶವಾಗಿದೆ. ದೀರ್ಘಕಾಲದವರೆಗೆ ಬದುಕಲು ಯೋಗ ಮಾಡುವುದು ಅವಶ್ಯಕವಾಗಿದ್ದು, ಇದರಿಂದ ವಿಶೇಷ ಶಕ್ತಿ ಸಿಗುತ್ತದೆ. ದುಶ್ಚಟಕ್ಕೆ ಬಲಿಯಾಗಿ ರೋಗರುಜಿನಗಳಿಗೆ ತುತ್ತಾದರೆ ಸಮಾಜ ಕೀಳಾಗಿ ನೋಡುತ್ತದೆ. ಯೋಗಾಭ್ಯಾಸ ಜೀವನಕ್ಕೆ ಪ್ರಮುಖವಾಗಿದ್ದು, ಯುವಕರು ಆಟೋಟಗಳು, ಸಂವಾದ ನಾನಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು ಎಂದರು.

ಎಸ್ಪಿ ಯಶೋಧಾ ವಂಟಗೋಡಿ, ಬಿಜೆಪಿ ಮುಖಂಡ ಸಿ.ವಿ.ಚಂದ್ರಶೇಖರ, ಈಶ್ವರೀಯ ವಿಶ್ವವಿದ್ಯಾಲಯದ ಹುಬ್ಬಳ್ಳಿ ವಲಯದ ನಿರ್ದೇಶಕ ಡಾ.ಬಿ.ಕೆ.ಬಸವರಾಜ, ಎಂಎಲ್ಸಿ ಹೇಮಲತಾ ನಾಯಕ್, ಡಾ.ಕೆ.ಜಿ.ಕುಲಕರ್ಣಿ ರಾಜಯೋಗಿನಿಗಳಾದ ಗದಗ ಪ್ರ.ಬ್ರ.ಈ.ವಿ.ವಿ ಸಂಚಾಲಕಿ ಜಯಂತಿ, ದುಬೈನ ಜ್ಯೋತಿ, ಕೊಪ್ಪಳ ಸಂಚಾಲಕಿ ಬಿ.ಎ.ಯೋಗಿನಿಹಂಸಾ ಬೆಹೆನ್‌ಜಿ, ಉದ್ಯಮಿ ಜೀತೇಂದ್ರ ತಾಲೇಡಾ, ಕರಡಿ ಫೌಂಡೇಷನ್ ಅಧ್ಯಕ್ಷೆ ಮಂಜುಳಾ ಕರಡಿ, ಕಿಶೋರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net