ಕೈನಲ್ಲಿ ಭ್ರಷ್ಟಾಚಾರ ನಡೆದರೆ ಉಚ್ಚಾಟನೆ: ಎಐಸಿಸಿ ಪ್ರ.ಕಾರ್ಯದರ್ಶಿ ಸುರ್ಜೆವಾಲಾ ಭರವಸೆ

0403-Kpl-Ravi-2 (1)
Published on

ಕೊಪ್ಪಳ: ರಾಜ್ಯ ಬಿಜೆಪಿ ಸರ್ಕಾರ ಶೇ.40 ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಜನರ ದುಡ್ಡು ಕೊಳ್ಳೆ ಹೊಡೆಯುತ್ತಿದೆ. ಅಭಿವೃದ್ಧಿ ವಿಷಯ ಮಾತನಾಡುವ ಬದಲು ಕೊಲ್ಲುವ ಮಾತಾಡುತ್ತಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ಭ್ರಷ್ಟಾಚಾರ ರಹಿತಿ ಆಡಳಿತ ನೀಡುತ್ತೇವೆ. ನಮ್ಮವರು ಯಾರೊಬ್ಬರು ಭ್ರಷ್ಟಾಚಾರದಲ್ಲಿ ಭಾಗಿಯಾದರೂ ಪಕ್ಷದಿಂದ ಕಿತ್ತೊಗೆಯುತ್ತೇವೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪಸಿಂಗ್ ಸುರ್ಜೆವಾಲಾ ಭರವಸೆ ನೀಡಿದರು.

ನಗರದ ಶಿವಶಾಂತವೀರ ಮಂಗಲ ಭವನದಲ್ಲಿ ಜಿಲ್ಲಾ ಕಾಂಗ್ರೆಸ್‌ನಿಂದ ಶನಿವಾರ ಹಮ್ಮಿಕೊಂಡಿದ್ದ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕಾಮಗಾರಿ ಗುತ್ತಿಗೆ, ಪಿಎಸ್‌ಐ, ಖಾಸಗಿ ಶಿಕ್ಷಣ ಸಂಸ್ಥೆಗಳು, ಪ್ರಾಧ್ಯಾಪಕರು, ಕೆಎಂಎಫ್, ಸಾಬೂನು ಹೀಗೆ ಎಲ್ಲದರಲ್ಲೂ ಶೇ.40 ಭ್ರಷ್ಟಾಚಾರ ನಡೆಯುತ್ತಿದೆ. ಸಿಎಂ ಬೊಮ್ಮಾಯಿ ಎಲ್ಲೇ ಹೋದರೂ ಜನರು ಪೇಸಿಎಂ ಎಂದು ಗೇಲಿ ಮಾಡುತ್ತಿದ್ದಾರೆ. ಬಿಜೆಪಿ ಕಾರ್ಯಕರ್ತರೇ ಭ್ರಷ್ಟಾಚಾರಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಬಿಜೆಪಿ ಶಾಸಕರು, ಅವರ ಮನೆಯವರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಸಿಎಂ ಆಗಲು 2500 ಕೋಟಿ ರೂ. ನೀಡಬೇಕೆಂದು ಶಾಸಕ ಯತ್ನಾಳ್ ಹೇಳುತ್ತಾರೆ. ಬೊಮ್ಮಾಯಿ ಮಾತೆತ್ತಿದ್ದರೆ ಸಾಕ್ಷಿ ಕೇಳುತ್ತಾರೆ. ಇದಕ್ಕಿಂತ ಸಾಕ್ಷಿ ಬೇಕಾ? ಇವರಿಗೆ ನಾಚಿಕೆಯಾಗಬೇಕು. ನೈತಿಕತೆ ಇದ್ದರೆ ರಾಜೀನಾಮೆ ನೀಡಲಿ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಷಾ ರಾಜ್ಯಕ್ಕೆ ಹಲವು ಬಾರಿ ಭೇಟಿ ನೀಡಿದ್ದಾರೆ. ಆದರೆ, ಭ್ರಷ್ಟಾಚಾರದ ಬಗ್ಗೆ ಬಾಯಿ ಬಿಡುತ್ತಿಲ್ಲವೆಂದು ಚಾಟಿ ಬೀಸಿದರು.

ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಪ್ರತಿಯೊಬ್ಬರಿಗೆ ತಿಂಗಳಿಗೆ 10 ಕೆಜಿ ಅಕ್ಕಿ, ಮನೆಯ ಮಹಿಳೆ ಖಾತೆಗೆ ತಿಂಗಳಿಗೆ ಎರಡು ಸಾವಿರ ರೂ., ಎಲ್ಲ ವರ್ಗದ ಜನರಿಗೆ 200 ಯೂನಿಟ್ ಉಚಿತ ವಿದ್ಯುತ್ ನೀಡುವ ಗ್ಯಾರಂಟಿ ನೀಡುತ್ತೇವೆ. ಸದ್ಯ ರಾಜ್ಯ ಬಜೆಟ್ ಗಾತ್ರ 3ಲಕ್ಷ ಕೋಟಿ ರೂ. ಇದರಲ್ಲಿ 1.10 ಲಕ್ಷ ಕೋಟಿ ಲಂಚಕ್ಕೆ ಹೋಗುತ್ತಿದೆ. ಕೇವಲ 30 ಸಾವಿರ ಕೋಟಿ ರೂ.ನಲ್ಲಿ ಇಷ್ಟೆಲ್ಲ ಯೋಜನೆ ನೀಡಬಹುದು. 80 ಸಾವಿರ ಕೋಟಿ ರೂ. ಉಳಿತಾಯವಾಗುತ್ತದೆ. ಇದನ್ನು ಜನತೆ ಮುಂದಿಡುತ್ತಿರುವುದಕ್ಕೆ ನಮ್ಮನ್ನು ಮುಗಿಸಲು ಬಿಜೆಪಿಗರು ಮುಂದಾಗಿದ್ದಾರೆ. ಸಚಿವ ಅಶ್ವತ್ಥ ನಾರಾಯಣ ಸಿದ್ದರಾಮಯ್ಯನನ್ನು ಕೊಲ್ಲಿ ಎನ್ನುತ್ತಿದ್ದಾರೆ. ದೇಶಕ್ಕಾಗಿ ಇಂದಿರಾ ಗಾಂಧಿ, ರಾಜೀವ್ ಗಾಂಧಿ ಬಲಿಯಾಗಿದ್ದಾರೆ. ಆದರೆ, ಕಾಂಗ್ರೆಸ್ ಹಾಗೂ ವಿಚಾರಗಳನ್ನು ಕೊಲ್ಲಲಾಗಿಲ್ಲವೆಂದು ಟಾಂಗ್ ನೀಡಿದರು.

ರಾಜ್ಯಸಭಾ ಸದಸ್ಯ ಸೈಯದ್ ನಾಸೀರ್ ಹುಸೇನ್, ಶಾಸಕ ರಾಘವೇಂದ್ರ ಹಿಟ್ನಾಳ್ ಮಾತನಾಡಿದರು. ಡಿಸಿಸಿ ಅಧ್ಯಕ್ಷ ಶಿವರಾಜ ತಂಗಡಗಿ, ಬಿಜೆಪಿ ಮುಖಂಡ, ಜಿಪಂ ಮಾಜಿ ಸದಸ್ಯ ರಾಮಣ್ಣ ಚೌಡ್ಕಿ ಕಾಂಗ್ರೆಸ್ ಸೇರಿದರು. ಶಾಸಕರಾದ ಅಮರೇಗೌಡ ಬಯ್ಯಪುರ, ಶ್ರೀಧರ ಬಾಬು, ಮಾಜಿ ಸಚಿವರಾದ ಬಸವರಾಜ ರಾಯರಡ್ಡಿ, ಇಕ್ಬಾಲ್ ಅನ್ಸಾರಿ, ಮಲ್ಲಿಕಾರ್ಜುನ ನಾಗಪ್ಪ, ಜಿಲ್ಲಾ ಉಸ್ತುವಾರಿ ಜೆ.ಬಿ.ಮ್ಯಾಥು, ಪ್ರಮುಖರಾದ ಬಸವನಗೌಡ ಬಾದರ್ಲಿ, ಎಚ್.ಆರ್.ಶ್ರೀನಾಥ, ಹಸನಸಾಬ್ ದೋಟಿಹಾಳ, ಬಸವರಾಜ ಹಿಟ್ನಾಳ್, ಅಮ್ಜದ್ ಪಟೇಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net