

ವಿ.ಕೆ. ರವೀಂದ್ರ ಕೊಪ್ಪಳ
ಗಣಿ ಉದ್ಯಮಿ, ಮಾಜಿ ಸಚಿವ ಜನಾರ್ದನ ರೆಡ್ಡಿ ರಾಜಕೀಯ ಚದುರಂಗದಲ್ಲಿ ಮತ್ತೊಂದು ಆಟ ಆರಂಭಕ್ಕೆ ಮುನ್ನುಡಿ ಬರೆದಿದ್ದು, ಡಿ.25ರಂದು ಅಂತಿಮ ಸ್ಪರ್ಶ ನೀಡಲು ಮುಹೂರ್ತ ಇಡುವ ಮೂಲಕ ರಾಜ್ಯ ರಾಜಕೀಯದ ಕುತೂಹಲ ಕೆರಳಿಸಿದ್ದಾರೆ.
ದಕ್ಷಿಣ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ತರುವಲ್ಲಿ ಚಾಣಕ್ಯನ ಪಾತ್ರವಹಿಸಿದ್ದ ರೆಡ್ಡಿ, ಅಕ್ರಮ ಗಣಿಗಾರಿಕೆ ಸುಳಿಗೆ ಸಿಲುಕಿ ಅಷ್ಟೇ ಬೇಗ ರಾಜಕೀಯವಾಗಿ ಮರೆಯಾಗಿದ್ದರು. ಜಾಮೀನು ಪಡೆದು ಬಂಧಮುಕ್ತಗೊಂಡರೂ ನ್ಯಾಯಾಲಯದ ಷರತ್ತುಗಳು ರೆಡ್ಡಿ ಕೈ ಕಟ್ಟಿ ಹಾಕಿವೆ. ಅಧಿಕಾರದಲ್ಲಿದ್ದಾಗ ರೆಡ್ಡಿ ತಾಳಕ್ಕೆ ಕುಣಿಯುತ್ತಿದ್ದ ಬಿಜೆಪಿ, ಈಗ ಬೇಡಿಕೊಂಡರೂ ರೆಡ್ಡಿಗೆ ರಾಜಕೀಯ ಅನುಕಂಪ ತೋರುತ್ತಿಲ್ಲ. ಕಮಲ ನಾಯಕರು ರೆಡ್ಡಿ ವೈಯಕ್ತಿಕ ಕಾರ್ಯಕ್ರಮಗಳಿಗೆ ತೆರಳಲೂ ಹಿಂದೇಟು ಹಾಕುತ್ತಿದ್ದಾರೆ. ಆಪ್ತ ಸ್ನೇಹಿತನೂ ತನ್ನ ದಾರಿ ನೋಡಿಕೊಂಡಿದ್ದು, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ರೆಡ್ಡಿಯನ್ನು ಪಕ್ಷದಲ್ಲೇ ಉಳಿಸಿಕೊಳ್ಳುವ ಬಗ್ಗೆ ಅನುಕಂಪ ತೋರಿದರೂ ಹೈಕಮಾಂಡ್ ಮೂಗುದಾರ ಹಾಕುತ್ತಿದೆ. ಇದರಿಂದ ರಾಜಕೀಯ ಅನಾಥ ಭಾವ ಗಾಲಿ ಜನಾರ್ದನನಿಗೆ ಕಾಡುತ್ತಿದ್ದು, ಏಕಾಂಗಿಯಾಗಿ ಚದುರಂಗ ಮುಂದುವರೆಸಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ.
12 ವರ್ಷ ವನವಾಸ ಅನುಭವಿಸಿದರೂ, ರಾಜಕೀಯ ಲಯಕ್ಕೆ ಮರಳಲು ಹೊಸ ಪಕ್ಷ ಕಟ್ಟಿದ್ದಾರೆ. ‘ಕಲ್ಯಾಣ ರಾಜ್ಯ ಪ್ರಗತಿ ಪಕ್ಷ’ ಆರಂಭಿಸಿ ಕಲ್ಯಾಣ ಕರ್ನಾಟಕದ ಮೇಲೆ ರಾಜಕೀಯ ಹಿಡಿತ ಸಾಧಿಸಲು ಹವಣಿಸುತ್ತಿದ್ದಾರೆ. ರಾಜಕೀಯ ನಿರ್ಧಾರಗಳ ಬಗ್ಗೆ ಬಹಿರಂಗಪಡಿಸದಿದ್ದರೂ ಸುಳಿವು ನೀಡುವ ಮೂಲಕ ಬಿಜೆಪಿಗೆ ಚೆಕ್ ಮೇಟ್ ನೀಡುವ ಸೂಚನೆಯನ್ನೂ ಕೊಟ್ಟಿದ್ದಾರೆ. ಇಷ್ಟಾದರೂ ಕಮಲ ಪಾಳಯ ರೆಡ್ಡಿ ವಿಷಯದಲ್ಲಿ ಸ್ಪಷ್ಟ ನಿಲುವು ಪ್ರಕಟಿಸುತ್ತಿಲ್ಲ. ಮೌನ ವಹಿಸುವ ಮೂಲಕ ಏನಾದರೂ ಮಾಡಿಕೊಳ್ಳಲಿ ಎಂಬಂತಿದ್ದು, ರೆಡ್ಡಿ ಹೊಸ ಪಕ್ಷ ಕಟ್ಟಲು ಪರೋಕ್ಷ ಪ್ರೇರಣೆ ನೀಡಿದಂತಾಗಿದೆ.
ರೆಡ್ಡಿ ಸಹೋದರರ ರಾಜಕೀಯ ಬೆಳವಣಿಗೆ ವಿಜಯನಗರ ಸಾಮ್ರಾಜ್ಯ ಸುತ್ತ ಗಿರಕಿಹೊಡೆದಿದ್ದು, ಎರಡನೇ ಇನ್ನಿಂಗ್ಸ್‌ನಲ್ಲೂ ರೆಡ್ಡಿ ಇದೇ ಕ್ಷೇತ್ರ ಆಯ್ಕೆ ಮಾಡಿಕೊಂಡಿದ್ದಾರೆ. ರಾಮಾಯಣದ ಕಿಷ್ಕಿಂಧಾ ಪ್ರದೇಶವಾದ ಅಂಜನಾದ್ರಿಯಲ್ಲಿ ರಾಜಕೀಯ ಸಂಕಲ್ಪ ಮಾಡಿದ್ದಾರೆ. ಗಂಗಾವತಿಯಲ್ಲಿ ಮನೆ ಮಾಡಿದ್ದು, ಹೇಳಿದ ಅವಧಿಗೂ ಮುನ್ನ ಗೃಹ ಪ್ರವೇಶ ನಡೆಸಿ ಅಚ್ಚರಿ ನಡೆ ಅನುಸರಿಸಿದ್ದಾರೆ. ಇದೀಗ ಡಿ.25ಕ್ಕೆ ಮಹತ್ವದ ಸುದ್ದಿಗೋಷ್ಠಿ ಕರೆದಿದ್ದು, ಹೊಸ ವರ್ಷ ಆರಂಭ ಅವಧಿಯಲ್ಲಿ ಹೊಸ ರಾಜಕೀಯ ಜೀವನದ ಗುಟ್ಟು ಬಹಿರಂಗಪಡಿಸಲು ಮುಂದಾಗಿದ್ದಾರೆ.
ದುರ್ಗಾದೇವಿ ಆಶೀರ್ವಾದಕ್ಕೆ ತವಕ: ಕೋರ್ಟ್ ನಿರ್ಬಂಧದಿಂದ ಬಳ್ಳಾರಿ ಶಕ್ತಿದೇವತೆ ಕನಕ ದುರ್ಗಮ್ಮನ ದರ್ಶನ ಭಾಗ್ಯ ರೆಡ್ಡಿಗೆ ದುರ್ಲಭವಾಗಿದೆ. ಹೀಗಾಗಿ ಗಂಗಾವತಿ ಗ್ರಾಮ ದೇವತೆ ದುರ್ಗಾದೇವಿ ಆಶೀರ್ವಾದ ಪಡೆಯಲು ರೆಡ್ಡಿ ಹವಣಿಸುತ್ತಿದ್ದಾರೆ. ಡಿ.19ರಿಂದ ಮತ್ತೊಮ್ಮೆ ಟೆಂಪಲ್ ರನ್ ಮಾಡಲು ಮುಂದಾಗಿದ್ದು, ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಲಿದ್ದಾರೆ. 20ರಂದು ಗದಗಿನ ಪುಟ್ಟರಾಜ ಗವಾಯಿಗಳ ಗದ್ದುಗೆ ದರ್ಶನ, 21ರಂದು ಮಸ್ಕಿ, ರಾಯಚೂರು, ಬಳ್ಳಾರಿ, ಕೊಪ್ಪಳ, ವಿಜಯನಗರ ಭಾಗದ ಪ್ರಮುಖ ಮುಖಂಡರ ಸಭೆ, 22ರಂದು ಗಂಗಾವತಿ ಗ್ರಾಮ ದೇವತೆ ದುರ್ಗಾದೇವಿ ಜಾತ್ರೆಯಲ್ಲಿ ಭಾಗಿಯಾಗಿ ಪ್ರಮುಖರ ಜತೆ ಸಭೆ ನಡೆಸಲಿದ್ದಾರೆ. ಡಿ.25ಕ್ಕೆ ಬೆಂಗಳೂರಿನ ಪಾರಿಜಾತ ಅಪಾಟ್ಮೆರ್ಂಟ್‌ನಲ್ಲಿ ಸುದ್ದಿಗೋಷ್ಠಿ ಕರೆದಿದ್ದಾರೆ.
ಸ್ಪಷ್ಟ ಉತ್ತರ ಸಿಕ್ಕಿಲ್ಲ: ಜನಾರ್ದನ ರೆಡ್ಡಿ ರಾಜಕೀಯಕ್ಕೆ ಮರಳುವುದು ಖಚಿತವಾಗಿದ್ದರೂ ಯಾವ ಪಕ್ಷ, ಕ್ಷೇತ್ರ, ಯಾರೊಂದಿಗೆ ಎಂಬಿತ್ಯಾದಿ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಬಿಜೆಪಿ ಬಿಡುವುದಿಲ್ಲ ಎಂದರೂ ಕಮಲ ನಾಯಕರು ಕರೆದುಕೊಳ್ಳುವ ಮಾತಾಡುತ್ತಿಲ್ಲ. ಇದರಿಂದ ಬೇಸತ್ತ ರೆಡ್ಡಿ ಹೊಸ ಪಕ್ಷ ಕಟ್ಟಿದ್ದು, ಬಿಜೆಪಿಗೆ ಚೆಕ್‌ಮೇಟ್ ನೀಡಲು ಮುಂದಾಗಿದ್ದಾರೆ. ಡಿ.18ರಂದು ಗೃಹ ಪ್ರವೇಶದಲ್ಲಿ ಸ್ಪಷ್ಟವಾಗಿ ಹೇಳುವುದಾಗಿ ತಿಳಿಸಿದ್ದರೂ, ನಾಲ್ಕು ದಿನ ಮುಂಚಿತವಾಗಿ ಕಾರ್ಯಕ್ರಮ ನಡೆಸಿ ಅಚ್ಚರಿ ನಡೆ ಅನುಸರಿಸಿದ್ದರು. ಇದೀಗ ಅಧಿಕೃತವಾಗಿ ಮತ್ತೊಂದು ದಿನಾಂಕ ನಿಗದಿಗೊಳಿಸಿದ್ದು ಎಲ್ಲ ಊಹಾಪೋಹಗಳಿಗೆ ತೆರೆ ಎಳೆಯುತ್ತಾರಾ? ಎಂಬುದನ್ನು ಕಾದು ನೋಡಬೇಕಿದೆ.