ಬಿಜೆಪಿ ಮೊಟ್ಟೆ ಎಸೆದ್ರೆ, ನಾವು ಕಲ್ಲು ಹೊಡಿತೀವಿ; ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ ಆಕ್ರೋಶ

Shivaraj Tangadagi
SL
Published on

ಕೊಪ್ಪಳ: ಬಿಜೆಪಿಯವರು ಮೊಟ್ಟೆ ಎಸೆಯುವ ಪದ್ಧತಿ ಆರಂಭಿಸಿದ್ದಾರೆ. ಇದು ಮುಂದುವರಿದರೆ ನಾವು ಸುಮ್ಮನಿರಲ್ಲ. ಸಿಎಂ, ಮಂತ್ರಿಗಳು ಓಡಾಡುವುದು ಕಷ್ಟವಾಗಲಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ ಎಚ್ಚರಿಕೆ ನೀಡಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮಡಿಕೇರಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಭೇಟಿ ನೀಡಿದ ವೇಳೆ ಅವರ ಕಾರಿನ ಮೇಲೆ ಬಿಜೆಪಿ ಯುವ ಮೋರ್ಚಾ ಮುಖಂಡರು ಮೊಟ್ಟೆ ಎಸೆದಿದ್ದಾರೆ. ಅದರಿಂದ ಕಾಂಗ್ರೆಸ್ ಕುಗ್ಗಲ್ಲ. ಅವರು ಮೊಟ್ಟೆ ಎಸೆದರೆ ನಾವು ಕಲ್ಲು ಎಸೆಯುತ್ತೇವೆ. ಚಿಕ್ಕಮಗಳೂರಿನಲ್ಲಿ ಗೋಬ್ಯಾಕ್ ಸಿದ್ದರಾಮಯ್ಯ ಎಂದು ಘೇರಾವ್ ಹಾಕಿದ್ದಾರೆ. ಬಿಜೆಪಿ ಮಂತ್ರಿಗಳು ಬಂದರೆ ನಾವು ಮುತ್ತಿಗೆ ಹಾಕಿ ವಾಪಸ್ ಕಳಿಸುತ್ತೇವೆ. ಕಾಂಗ್ರೆಸ್‌ನಿಂದ ಆ.26ರಂದು ಮಡಿಕೇರಿ ಚಲೋ ನಡೆಸಲಾಗುವುದು ಎಂದರು.
ರಾಜ್ಯದ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಬಿಜೆಪಿ ಯುವಮೋರ್ಚಾಗೆ ಮೂರ್ಛೆ ಬಂದಂತಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷರ ಕಾರನ್ನು ಬೀಳಿಸಲು ಮುಂದಾಗಿದ್ದರು. ಇದೀಗ ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆದಿದ್ದಾರೆ. ಇದು ಬಿಜೆಪಿ ಸಂಸ್ಕೃತಿ ತೋರಿಸುತ್ತದೆ ಎಂದು ಆರೋಪಿಸಿದ ಅವರು, ಸಿದ್ದರಾಮೋತ್ಸವ ಹಾಗೂ ಕಾಂಗ್ರೆಸ್‌ನ ಸ್ವಾತಂತ್ರೃದ ಪಥಸಂಚಲನ ನೋಡಿ ಬಿಜೆಪಿ ನಾಯಕರು ಭ್ರಮ ನಿರಸರಾಗಿ ಇಂತಹ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಶಾಸಕ ಕೆ.ರಾಘವೇಂದ್ರ ಹಿಟ್ನಾಳ್ ಮಾತನಾಡಿ, ಮಾಜಿ ಸಿಎಂ ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net