

ಕೊಪ್ಪಳ: ಕಲ್ಯಾಣ ಕರ್ನಾಟಕ ಭಾಗದ ರಂಗ ಕಲಾವಿದರನ್ನು ಸಂಗಮಗೊಳಿಸುವ ಉದ್ದೇಶದಿಂದ ಜು.27ರಿಂದ ಬೀದರ್‌ನಲ್ಲಿ ಕಲ್ಯಾಣ ಕರ್ನಾಟಕ ಸಾಂಸ್ಕೃತಿಕ ಮತ್ತು ಜನಪದ ಉತ್ಸವ ಆಯೋಜಿಸಲಾಗಿದೆ ಎಂದು ಕಕ ಕಲಾವಿದರ ಒಕ್ಕೂಟದ ಅಧ್ಯಕ್ಷ ವಿಜಯಕುಮಾರ ಸೋನಾರೆ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕಲ್ಯಾಣ ಕರ್ನಾಟಕ ಭಾಗದ ರಂಗಭೂಮಿ, ಜನಪದ, ನೃತ್ಯ, ಸಂಗೀತ, ಬಯಲಾಟ, ಅಲೆಮಾರಿ, ಬುಡಕಟ್ಟು ಹಾಗೂ ಆದಿವಾಸಿ ಸೇರಿ ಎಲ್ಲ ಪ್ರಕಾರದ ಕಲಾವಿದರನ್ನು ಸಂಘಟಿಸಿ ಒಕ್ಕೂಟ ರಚಿಸಿದ್ದೇವೆ. ಒಕ್ಕೂಟದ ಪ್ರಥಮ ಸಂಭ್ರಮಾಚರಣೆ ನಿಮಿತ್ತ ಬೀದರ್‌ನ ಚನ್ನಬಸವ ಪಟ್ಟದೇವರು ರಂಗಮಂದಿರದಲ್ಲಿ ಜು.27 ಮತ್ತು 28 ರಂದು ಸಾಂಸ್ಕೃತಿಕ ಮತ್ತು ಜನಪದ ಉತ್ಸವ ಆಯೋಜಿಸಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನೀಲ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಕಕ ಭಾಗದ ಏಳು ಜಿಲ್ಲೆಗಳ ಕಲಾವಿದರು ಭಾಗವಹಿಸುವರು. 41 ಕಲಾ ತಂಡಗಳಿಂದ ಬೃಹತ್ ಮೆರವಣಿಗೆ, 41 ಕಲಾವಿದರಿಗೆ ಸನ್ಮಾನ, ಕಲಾ ಪ್ರದರ್ಶನ, ಗಾಯನ, ಕಲಾವಿದರ ಸಮಸ್ಯೆ ಮತ್ತು ಸವಾಲುಗಳ ಬಗ್ಗೆ ಗೋಷ್ಠಿಗಳು ಇರಲಿವೆ ಎಂದರು. ಒಕ್ಕೂಟದ ಪ್ರ.ಕಾರ್ಯದರ್ಶಿ ಪ್ರಕಾಶ ಅಂಗಡಿ ಮಾತನಾಡಿ, ಸರ್ಕಾರ ಕಲಾವಿದರ ಸಮೀಕ್ಷೆಗೆ ಮುಂದಾಗಿರುವುದು ಸಂತಸದ ಸಂಗತಿ. ತೆಲಂಗಾಣದಲ್ಲಿ ಕಲಾವಿದರಿಗೆ 10 ಸಾವಿರ ರೂ. ಮಾಸಾಶನ ನೀಡಲಾಗುತ್ತಿದೆ. ನಮ್ಮ ಸರ್ಕಾರ ಕಲಾವಿದರಿಗೆ ಕನಿಷ್ಠ ಸೌಲಭ್ಯ ನೀಡುತ್ತಿಲ್ಲ. ಅನ್ಯಾಯ ಮಾಡುತ್ತಿದೆ ಎಂದರು. ಸಹ ಕಾರ್ಯದರ್ಶಿ ಅಮರೇಶ ವೇಷಗಾರ ಇತರರಿದ್ದರು.