ಭತ್ತದ ನಾಡು ಗಂಗಾವತಿಯಲ್ಲಿ ‘ಶಿವಾ 143’ ಸಿನಿಮಾ ಪ್ರಚಾರ

19082022 gvt
Published on

ಗಂಗಾವತಿ: ಅಭಿಮಾನಿಗಳಿಂದಲೇ ಡಾ.ರಾಜಕುಮಾರ್ ಕುಟುಂಬ ಉತ್ತುಂಗದಲ್ಲಿದೆ ಎಂದು ಡಾ.ರಾಜ್ ಮೊಮ್ಮಗ, ಯುವನಟ ಧೀರೇನ್ ರಾಮ್‌ಕುಮಾರ್ ಹೇಳಿದರು.
ನಟಿಸಿದ ಮೊದಲ ಸಿನಿಮಾ ‘ಶಿವಾ 143’ ಪ್ರಚಾರಕ್ಕಾಗಿ ನಗರದ ಶಿವೆ ಚಿತ್ರಮಂದಿರಕ್ಕೆ ಶುಕ್ರವಾರ ಭೇಟಿ ನೀಡಿದ ವೇಳೆ ಮಾತನಾಡಿದರು. ಸಿನಿಮಾ ಬಿಡುಗಡೆಗಾಗಿ ಮೂರು ವರ್ಷದಿಂದ ಕಾಯುತ್ತಿದ್ದು, ಈಗ ಕಾಲ ಕೂಡಿಬಂದಿದೆ. ಉತ್ತರ ಕರ್ನಾಟಕ ಜನತೆ ಕನ್ನಡ ಚಿತ್ರರಂಗ ಬೆಳೆಸುತ್ತಿದ್ದು, ನನ್ನನ್ನೂ ಹರಸುವಂತೆ ಕೋರಿದರು. ದಿ.ಪುನೀತ್ ರಾಜಕುಮಾರ್ ಭಾವಚಿತ್ರಕ್ಕೆ ಪುಷ್ಪಾರ್ಪಣೆ ನಂತರ ಫೋಟೋಗಳನ್ನು ಅಭಿಮಾನಿಗಳಿಗೆ ಉಚಿತ ವಿತರಿಸಿದರು. ಇದಕ್ಕೂ ಮುನ್ನ ಸಾರೋಟದಲ್ಲಿ ಸಾಯಿಬಾಬಾ ದೇವಾಲಯದಿಂದ ಚಿತ್ರಮಂದಿರದವರಿಗೂ ಮೆರವಣಿಗೆ ನಡೆಸಲಾಯಿತು. ಜೆಸಿಬಿ ಮೂಲಕ ಧೀರೇನ್‌ಗೆ ಹೂಮಾಲೆ ಹಾಕಿದ್ದು ವಿಶೇಷ. ನಗರಸಭೆ ಸದಸ್ಯ ಉಮೇಶ ಸಿಂಗನಾಳ್, ಚಿತ್ರಮಂದಿರದ ಮಾಲೀಕ ಎಸ್.ಶಿವರಾಜಗೌಡ, ಪ್ರಮುಖರಾದ ಚನ್ನವೀರನಗೌಡ ಆರಾಳ್, ವೀರೇಶ ಸುಳೇಕಲ್ ಇತರರಿದ್ದರು.
ಆಂಜನಾದ್ರಿಗೆ ಭೇಟಿ: ನಟ ಧೀರೇನ್‌ರಾಂಕುಮಾರ, ತಾಯಿ ಪೂರ್ಣಿಮಾ ಮತ್ತು ಸಹೋದರಿ ಧನ್ಯಾರಾಮ್‌ಕುಮಾರ್ ಹಾಗೂ ಚಿತ್ರತಂಡ ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಿ ದರ್ಶನ ಪಡೆದರು. ಡಾ.ರಾಜ್ ಕುಟುಂಬದ ಹೆಸರಿನಲ್ಲೂ ವಿಶೇಷ ಪೂಜೆ ಸಲ್ಲಿಸಿದರು. ಅಭಿಮಾನಿಗಳು ಸೆಲ್ಫಿಗಾಗಿ ಮುಗಿಬಿದ್ದಿದ್ದರಿಂದ ಕೆಲಕಾಲ ಗದ್ದಲ ಉಂಟಾಯಿತು. ನಿಯಂತ್ರಣಕ್ಕೆ ಪೊಲೀಸರು ಹರಸಾಹಸ ಪಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net