

ಕೊಪ್ಪಳ: ಹನುಮಮಾಲೆ ವಿಸರ್ಜನೆ ಅಂಗವಾಗಿ ಡಿ.4 ಮತ್ತು 5ರಂದು ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟಕ್ಕೆ ಎರಡು ಲಕ್ಷಕ್ಕೂ ಅಧಿಕ ಭಕ್ತರು ಬರುವ ನಿರೀಕ್ಷೆ ಇದ್ದು, ಅಗತ್ಯ ಮೂಲ ಸೌಕರ್ಯ ಕೈಗೊಳ್ಳುವಂತೆ ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಅಧಿಕಾರಿಗಳಿಗೆ ಸೂಚಿಸಿದರು. ನಗರದ ಜಿಪಂ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಬುಧವಾರ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದರು.
ಅಂಜನಾದ್ರಿ ಪವರ್ತ ದೇಶ, ವಿದೇಶಗಳ ಗಮನ ಸೆಳೆದಿದೆ. ಕಳೆದೆರಡು ವರ್ಷ ಕೋವಿಡ್ ಕಾರಣ ಹೆಚ್ಚು ಭಕ್ತರು ಸೇರುವುದನ್ನು ನಿರ್ಬಂಧಿಸಿದ್ದೆವು. ಆದರೂ, ಕಳೆದ ವರ್ಷ 60-70ಸಾವಿರ ಭಕ್ತರು ಬೆಟ್ಟಕ್ಕೆ ಬಂದಿದ್ದರು. ಈ ವರ್ಷ ಎರಡು ಲಕ್ಷಕ್ಕೂ ಅಧಿಕ ಜನರು ಬರುವ ನಿರೀಕ್ಷೆ ಇದೆ. ಅವರಿಗೆಲ್ಲ ವಾಹನ ಪಾರ್ಕಿಂಗ್, ಸ್ನಾನ, ಪ್ರಸಾದ, ಕುಡಿವ ನೀರು ಹಾಗೂ ಪೂಜೆ ಸಲ್ಲಿಸಲು ಅನುಕೂಲ ಕಲ್ಪಿಸಬೇಕು. ನಾನು ಅನ್ಯ ಜಿಲ್ಲೆಯವಳಾಗಿದ್ದು, ಇದೇ ಜಿಲ್ಲೆಯ ಸಂಸದರು ಹಾಗೂ ಶಾಸಕರಿಗೆ ಇಲ್ಲಿನ ಪರಿಸ್ಥಿತಿ ಅರಿವಿರುತ್ತದೆ. ಅವರ ಸಲಹೆ ಪಡೆದು ಬೇಕಾದ ವ್ಯವಸ್ಥೆ ಕಲ್ಪಿಸಿ. ಮೈಗಳ್ಳತನ ಮಾಡದೆ, ಎಲ್ಲರೂ ಸಹಕಾರದೊಂದಿಗೆ ಕಾರ್ಯನಿರ್ವಹಿಸಿ ಯಶಸ್ವಿಗೊಳಿಸಿ. ಹೆಚ್ಚಿನ ಪೊಲೀಸ್ ಭದ್ರತೆ ಕಲ್ಪಿಸಿ. ಊಟ, ಸ್ವಚ್ಛತೆ, ಆರೋಗ್ಯ ಸಮಿತಿ ರಚಿಸಿ ನಿಮ್ಮ ಜವಾಬ್ದಾರಿ ಸರಿಯಾಗಿ ನಿಭಾಯಿಸಿ ಎಂದು ಸೂಚಿಸಿದರು.
ಸಚಿವ ಹಾಲಪ್ಪ ಮಾತನಾಡಿ, ವಿಶೇಷವಾಗಿ ಕಾರ್ಯಕ್ರಮ ಆಯೋಜಿಸಿ. ಸ್ವಚ್ಛತೆಗೆ ಆದ್ಯತೆ ನೀಡಬೇಕು. ಬೆಟ್ಟದಲ್ಲಿ ಎಲ್ಲೆಂದರಲ್ಲಿ ಜನ ಹತ್ತುವುದರಿಂದ ಅಪಾಯ ಎದುರಾಗಬಹುದು. ಹೀಗಾಗಿ ರಾಜ್ಯ ವಿಪತ್ತು ನಿರ್ವಹಣ ತಂಡ ಕರೆಸುವ ಅಗತ್ಯವಿದೆ ಎಂದರು.
ಸಂಸದ ಸಂಗಣ್ಣ ಕರಡಿ ಮಾತನಾಡಿ, ಹನುಮನಳ್ಳಿ ಹತ್ತಿರ ಕಾಲುವೆ ಹರಿಯುತ್ತದೆ. ಅಲ್ಲಿಯೇ ಪೈಪ್ ಅಳವಡಿಸಿ ಕುಡಿವ ನೀರಿನ ವ್ಯವಸ್ಥೆ ಮಾಡುವಂತೆ ಭಕ್ತರು ಮನವಿ ಸಲ್ಲಿಸಿದ್ದು, ಅದರಂತೆ ಕ್ರಮವಹಿಸಲು ತಿಳಿಸಿದರು. ಗಂಗಾವತಿ ತಹಸೀಲ್ದಾರ್ ಯು.ನಾಗರಾಜ ಮಾತನಾಡಿ, ಬೆಟ್ಟದ ಮೇಲೆ ಎರಡು ಸಾವಿರ ಲೀಟರ್ ಸಾಮರ್ಥ್ಯದ ಶುದ್ಧ ಕುಡಿವ ನೀರಿನ ಘಟಕ ಅಳವಡಿಸಲಾಗುತ್ತಿದೆ. ವಾರದಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಮಾಹಿತಿ ನೀಡಿದರು.
ಡಿಸಿ ಎಂ.ಸುಂದರೇಶ ಬಾಬು ಮಾತನಾಡಿ, 6-8ಕಡೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗುವುದು. ಭಕ್ತರ ಸಂಖ್ಯೆ ಹೆಚ್ಚುವ ಕಾರಣ ಬೆಟ್ಟದ ಮುಂಭಾಗದಲ್ಲಿ ಹತ್ತಲು ಹಾಗೂ ಹಿಂಭಾಗದಲ್ಲಿ ಇಳಿಯಲು ವ್ಯವಸ್ಥೆ ಮಾಡಲಾಗುವುದು. ತುರ್ತು ಚಿಕಿತ್ಸೆಗಾಗಿ ಆರು ಕೇಂದ್ರಗಳು, ವೇದ ಪಾಠಶಾಲೆ ಹತ್ತಿರ ಊಟದ ವ್ಯವಸ್ಥೆ, ಎರಡು ಅಗ್ನಿಶಾಮಕ ವಾಹನ, ಸಿಸಿ ಕ್ಯಾಮರಾ, ಸಹಾಯವಾಣಿ ಕೇಂದ್ರ, ನಗರದಿಂದ ಬರುವ ಭಕ್ತರಿಗಾಗಿ 6 ಬಸ್ ವ್ಯವಸ್ಥೆ ಮಾಡಲಾಗುವುದು ಎಂದರು. ಶಾಸಕರಾದ ಪರಣ್ಣ ಮುನವಳ್ಳಿ, ಬಸವರಾಜ ದಢೇಸುಗೂರು, ವಿಪ ಸದಸ್ಯೆ ಹೇಮಲತಾ ನಾಯಕ, ಜಿಪಂ ಸಿಇಒ ಫೌಜಿಯಾ ತರನ್ನುಮ್, ಎಡಿಸಿ ಸಾವಿತ್ರಿ ಕಡಿ, ಎಸಿ ಬಸವಣ್ಣೆಪ್ಪ ಕಲಶೆಟ್ಟಿ, ಎಸ್ಪಿ ಅರುಣಾಂಗ್ಷು ಗಿರಿ, ಡಿವೈಎಸ್ಪಿ ರುದ್ರೇಶ ಉಜ್ಜನಕೊಪ್ಪ ಇತರರಿದ್ದರು.
ಎಸಿಗೆ ಉಸ್ತುವಾರಿ: ನಿಮ್ಮ ಬಗ್ಗೆ ಸಾಕಷ್ಟು ದೂರುಗಳಿದ್ದು, ಹೀಗೆ ಮಾಡಿದರೆ ಹೇಗೆಂದು ಸಚಿವೆ ಶಶಿಕಲಾ ಜೊಲ್ಲೆ ಗಂಗಾವತಿ ತಹಸೀಲ್ದಾರ್ ಯು.ನಾಗರಾಜರನ್ನು ತರಾಟೆ ತೆಗೆದುಕೊಂಡರು. ಕೇವಲ ಒಂದರೆಡಲ್ಲ. ಸಾಕಷ್ಟು ದೂರುಗಳು ಬಂದಿವೆ. ದೇವರ ಕೆಲಸದಲ್ಲಿ ತಪ್ಪು ಮಾಡಬಾರದು ಎಂದರು. ಹನುಮ ಮಾಲೆ ವಿಸರ್ಜನೆ ಹಾಗೂ ಅಂಜನಾದ್ರಿ ಬೆಟ್ಟದ ಉಸ್ತುವಾರಿಯನ್ನು ಎಸಿಗೆ ವಹಿಸಿ ಎಂದು ಜಿಲ್ಲಾಧಿಕಾರಿಗೆ ತಾಕೀತು ಮಾಡಿದರು.
ಅಂಜನಾದ್ರಿ ಬೆಟ್ಟಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚುತ್ತಿದ್ದು, ಕಾಯಂ ಮೂಲ ಸೌಕರ್ಯ ಕಲ್ಪಿಸಲಾಗುವುದು. ಬೆಟ್ಟದ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ಭೂ ಸ್ವಾಧೀನ ಪ್ರಕ್ರಿಯೆಗೆ ಚಾಲನೆ ನೀಡಿದ್ದು, ಶೀಘ್ರವೇ ಕಾಮಗಾರಿ ಆರಂಭಿಸಲಾಗುವುದು. ರಾಜ್ಯ ವಿಪತ್ತು ನಿರ್ವಹಣಾ ತಂಡ ಬೇಕೆಂಬ ಬೇಡಿಕೆ ಇದ್ದು, ಈ ಬಗ್ಗೆ ಸರ್ಕಾರ ಹಂತದಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು.| ಶಶಿಕಲಾ ಜೊಲ್ಲೆ, ಮುಜರಾಯಿ ಸಚಿವೆ