

ಕೊಪ್ಪಳ: ರಾಜ್ಯದಲ್ಲಿ ಹಿಜಾಬ್-ಕೇಸರಿ ಸಂಘರ್ಷ ಬಿಸಿಯಾಗಿರುವಾಗಲೇ ಕೇಸರಿನಂದನನ ವಿವಾದ ಮುನ್ನೆಲೆಗೆ ಬರುವ ಲಕ್ಷಣಗಳು ಗೋಚರಿಸಿವೆ. ಅರ್ಥಾತ್, ಹನುಮಂತನ ಜನ್ಮಸ್ಥಾನದ ಕುರಿತು ಅಂಜನಾದ್ರಿ ದೇವಸ್ಥಾನ ಮತ್ತು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ನಡುವಿನ ವಾಗ್ವಾದ ಚುರುಕುಗೊಳ್ಳುವ ಸಾಧ್ಯತೆಗಳಿವೆ.
ಏಕೆಂದರೆ ರಾಮ ಭಕ್ತ ಹನುಮಂತ ಹುಟ್ಟಿದ್ದು ತಿರುಪತಿಯ ಅಂಜನಾದ್ರಿ ಬೆಟ್ಟದಲ್ಲಿ ಎಂಬ ಟಿಟಿಡಿ ಕ್ಯಾತೆಗೆ ತಿರುಗೇಟು ನೀಡಲು ಕರ್ನಾಟಕ ಸರ್ಕಾರ ಸಿದ್ಧವಾಗಿದೆ. ಸಂಶೋಧಕರು ಮತ್ತು ತಜ್ಞರ ವಾದ ಅಲಕ್ಷಿಸಿ, ಟಿಡಿಡಿ ಹನುಮಂತನ ಭವ್ಯ ಮಂದಿರ ನಿರ್ಮಾಣಕ್ಕೆ ಮುಂದಾದ ಬೆನ್ನಲ್ಲೇ ರಾಜ್ಯ ಸರ್ಕಾರ ಹನುಮಂತ ಹುಟ್ಟಿದ್ದು, ಕೊಪ್ಪಳದ ಅಂಜನಾದ್ರಿ ಬೆಟ್ಟದಲ್ಲಿ ಎಂದು ಘೋಷಿಸಲು ಸೂಕ್ತ ಆಧಾರ ಮತ್ತು ದಾಖಲೆ ಒದಗಿಸಲು ಕೊಪ್ಪಳ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದೆ ಎಂಬ ಮಾಹಿತಿ ತಿಳಿದುಬಂದಿದೆ.
ಈ ನಿಟ್ಟಿನಲ್ಲಿ ಕೊಪ್ಪಳ ಸಂಸದ ಸಂಗಣ್ಣ ಕರಡಿ ಕೂಡ ಉತ್ಸುಕರಾಗಿದ್ದು, ಸ್ವತಃ ಸಿಎಂ ಬಸವರಾಜ ಬೊಮ್ಮಾಯಿ ಅವರಿಂದಲೇ ಇದರ ಘೋಷಣೆ ಆಗಲಿದೆ ಎಂದು ತಿಳಿಸಿದ್ದಾರೆ. ಇನ್ನು ಇದೇ ಅಧಿವೇಶನದಲ್ಲಿ ಮೇಲ್ಮನೆಯಲ್ಲಿಯೂ ಈ ಕುರಿತು ಚರ್ಚೆಯಾಗುವ ಸಾಧ್ಯತೆ ಇದ್ದು, ವಿಧಾನ ಪರಿಷತ್ ಸದಸ್ಯರಾದ ಪಿ.ಎಚ್. ಪೂಜಾರ ಹಾಗೂ ಶಶಿಲ್ ನಮೋಶಿ ಅವರು, ಹನುಮ ಜನ್ಮಸ್ಥಾನಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಲು ಚುಕ್ಕೆ ಗುರುತಿನ ಪ್ರಶ್ನೆ ಸಿದ್ದತೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಇನ್ನು ಇಂದು ವಿಜಯನಗರ ಜಿಲ್ಲಾ ಕೇಂದ್ರ ಹೊಸಪೇಟೆಯಲ್ಲಿ ಸಚಿವ ಆನಂದ್ ಸಿಂಗ್ ಕೂಡ ಹನುಮ ಜನ್ಮಸ್ಥಾನ ವಿಚಾರವಾಗಿ ಮಾತನಾಡಿದ್ದಾರೆ. ಹನುಮ ಅಲ್ಲಿ ಹುಟ್ಟಿದ್ದು ಅಂತ ಆಂಧ್ರಪ್ರದೇಶ ಸರ್ಕಾರ ಯಾವ ಆಧಾರದ ಮೇಲೆ ಘೋಷಣೆ ಮಾಡುತ್ತದೆ ಎಂದು ಪ್ರಶ್ನಿಸಿರುವ ಅವರು, ಇತಿಹಾಸ ಬರೆಯೋದೇ ಬೇರೆ, ನಮ್ಮ ಮುಂದೆ ಇರುವ ಇತಿಹಾಸವೇ ಬೇರೆ ಎಂದು ಹೇಳಿದ್ದಾರೆ.
ನಮ್ಮ ತಾತ ತಂದೆ ಎಲ್ಲ ಇದೇ ಆಂಜನೇಯನ ಸ್ಥಳ ಅಂತಿದ್ರು, ನಮ್ಮ ಮಕ್ಕಳಿಗೂ ನಾವು ಅದನ್ನೇ ಹೇಳಿದ್ದೀವಿ, ಅವರೂ ತಮ್ಮ ಮಕ್ಕಳಿಗೂ ಅದನ್ನೇ ಹೇಳುತ್ತಾರೆ ಎನ್ನುವ ಮೂಲಕ ಕೊಪ್ಪಳದ ಅಂಜನಾದ್ರಿ ಬೆಟ್ಟವೇ ಹನುಮನ ಜನ್ಮಸ್ಥಾನ ಎಂದು ಪ್ರತಿಪಾದಿಸಿದ್ದಾರೆ.
ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವನಾಗಿ, ಇಲ್ಲಿ ಹುಟ್ಟಿ ಬೆಳೆದವನಾಗಿ ಹೇಳುತ್ತಿದ್ದೇನೆ.. ಇತಿಹಾಸ ತಿರುಚಲು ಯಾರಿಂದಲೂ ಸಾಧ್ಯವಿಲ್ಲ. ಟಿಟಿಡಿ ಅವರ ಹೇಳಿಕೆಗಳಿಗೆ ತಾಳ ಮೇಳ ಏನೂ ಇಲ್ಲ. ಜೀವಂತ ಸಾಕ್ಷಿ ಇಟ್ಕೊಂಡಾಗ ಟಿಟಿಡಿ ಹೇಳಿದ ಸ್ಥಳವನ್ನು ಹನುಮ ಜನ್ಮಸ್ಥಳ ಅಂತ ಹೇಗೆ ಒಪ್ಪಿಕೊಳ್ಳುವುದು ಎಂದೂ ಅವರು ಪ್ರಶ್ನಿಸಿದ್ದಾರೆ.