

ಕೊಪ್ಪಳ: ತಾಲೂಕಿನ ಕಿನ್ನಾಳ, ಮುದ್ಲಾಪುರ ಭಾಗಗಳಲ್ಲಿ ಜಾನುವಾರುಗಳು ದನಗಳ ಮಲೇರಿಯಾ (ಟ್ರಿಪ್ನೊಜೋಮ್)ದಿಂದ ಸಾಯುತ್ತಿರುವುದು ಪ್ರಯೋಗಾಲಯ ವರದಿಯಿಂದ ದೃಢಪಟ್ಟಿದೆ.
ರಾಜ್ಯಾದ್ಯಂತ ಚರ್ಮಗಂಟು ರೋಗ ರಾಸುಗಳನ್ನು ಬಾಧಿಸುತ್ತಿದೆ. ಇದರ ನಡುವೆ ಜಿಲ್ಲೆಯಲ್ಲಿ ಬಿಡಾಡಿ ದನಗಳು ಏಕಾಏಕಿ ಸಾಯುತ್ತಿರುವುದು ದನಗಾಹಿಗಳನ್ನು ಆತಂಕಕ್ಕೆ ದೂಡಿದೆ. ಈವರೆಗೆ 15-20 ದನಗಳು ಸತ್ತಿದ್ದು ಮಾಲೀಕರನ್ನು ಚಿಂತೆಗೀಡು ಮಾಡಿದೆ. ರಾಸುಗಳು ಸಾಯುತ್ತಿರುವ ಹಿನ್ನೆಲೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಪಶು ಅಧಿಕಾರಿಗಳು ಸಾವಿಗೆ ಕಾರಣ ಪತ್ತೆ ಹಚ್ಚಿದ್ದಾರೆ. ಗ್ರಾಮೀಣ ಭಾಷೆಯಲ್ಲಿ ಕುರುಡು ನೊಣ ಎಂದು ಕರೆಯುವ ಕೀಟ, ಸೋಂಕು ಪೀಡಿತ ದನಕ್ಕೆ ಕಚ್ಚಿದ ನಂತರ ಆರೋಗ್ಯವಂತ ರಾಸುಗೆ ಕಚ್ಚುವ ಮೂಲಕ ಈ ರೋಗ ಹರಡುತ್ತದೆ. ಇದು ಸಾಂಕ್ರಾಮಿಕ ಕಾಯಿಲೆ ಅಲ್ಲ. ರೋಗಕ್ಕೆ ಚುಚ್ಚು ಮದ್ದು ಲಭ್ಯವಿದ್ದು, ಸತ್ತ ದನಗಳ ಹಿಂಡಿನಲ್ಲಿದ್ದ 350 ರಾಸುಗಳಿಗೆ ಇಂಜೆಕ್ಷನ್ ನೀಡಲಾಗಿದೆ. ರೋಗ ಪೀಡಿತ ದನಗಳು ಚೇತರಿಕೆ ಕಂಡಿದ್ದು, ಮಾಲೀಕರು ನಿಟ್ಟುಸಿರು ಬಿಡುವಂತಾಗಿದೆ.
ಸೋಂಕಿಗೆ ಒಳಗಾದ ದನದಲ್ಲಿ ಮೂರು ವಾರಗಳವರೆಗೆ ರೋಗ ಲಕ್ಷಣಗಳು ಕಂಡುಬರುತ್ತವೆ. ರಕ್ತ, ಮೆದುಳಿಗೆ ವೈರಾಣು ಹರಡುವುದರಿಂದ ರಾಸುಗಳ ಕಣ್ಣಲ್ಲಿ ನೀರು ಒಸರುವುದು, ಜ್ವರ, ಆಹಾರ ತ್ಯಜಿಸುವಿಕೆ, ನಿಂತಲ್ಲೇ ಸುತ್ತು ಹಾಕುವುದು ಕಂಡುಬರುತ್ತದೆ. ನಂತರ ಸಾವು ಸಂಭವಿಸುತ್ತದೆ ಎನ್ನುತ್ತಾರೆ ಪಶು ವೈದ್ಯರು.
ಕೊಪ್ಪಳ ತಾಲೂಕಿನ ಕಿನ್ನಾಳ, ಮುದ್ಲಾಪುರ ಭಾಗದಲ್ಲಿ ಸತ್ತ ದನಗಳ ಮರಣೋತ್ತರ ವರದಿ ಬಂದಿದ್ದು, ದನಗಳ ಮಲೇರಿಯಾ ಕಾಯಿಲೆಯಿಂದ ಮೃತಪಟ್ಟಿರುವುದು ದೃಢಪಟ್ಟಿದೆ. ರೊಗಕ್ಕೆ ಚುಚ್ಚು ಮದ್ದು ಲಭ್ಯವಿದ್ದು ಎಲ್ಲ ರಾಸುಗಳಿಗೆ ನೀಡಿದ್ದೇವೆ. ನೊಣದಿಂದ ರೋಗ ಹರಡುವ ಸಾಧ್ಯತೆ ಇದ್ದು, ಸ್ವಚ್ಛತೆ ಕಾಪಾಡಬೇಕು. ರೋಗ ಲಕ್ಷಣ ಕಂಡು ಬಂದ ತಕ್ಷಣ ಚಿಕಿತ್ಸೆ ಕೊಡಿಸಬೇಕು.| ಡಾ.ಎಚ್.ನಾಗರಾಜ, ಪಶುಪಾಲನಾ ಇಲಾಖೆ ಡಿಡಿ, ಕೊಪ್ಪಳ