

ಪಲ್ಸ್ ಪೋಲಿಯೋ ಕಾರ್ಯಕ್ರಮ
ಕೊಪ್ಪಳ: ಪೋಲಿಯೋ ಒಂದು ಮಾರಕ ರೋಗ. ಹೀಗಾಗಿ ಪ್ರತಿಯೊಬ್ಬರೂ ತಪ್ಪದೇ 5 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಹಾಕಿಸಿ ಎಂದು ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಹೇಳಿದರು.
ಜಿಲ್ಲಾಡಳಿತದಿಂದ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮ ಅಂಗವಾಗಿ ನಗರದ ಗವಿಮಠ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಲಸಿಕಾ ಕಾರ್ಯಕ್ರಮದಲ್ಲಿ ಮಗುವಿಗೆ ಲಸಿಕೆ ಹಾಕಿ ಮಾತನಾಡಿದರು.
ನಮ್ಮಲ್ಲಿ ಪೋಲಿಯೋ ನಿರ್ಮೂಲನೆಯಾಗಿದೆ. ಪಾಕಿಸ್ತಾನ ಮತ್ತು ಅಪಘಾನಿಸ್ತಾನಗಳಲ್ಲಿ ಪೋಲಿಯೊ ಪ್ರಕರಣಗಳು ಕಾಣಿಸಿಕೊಳ್ಳುತ್ತಿವೆ. ಮುಂಜಾಗ್ರತೆಯಾಗಿ ದೇಶಾದ್ಯಂತ ಪೋಲಿಯೋ ಲಸಿಕೆ ಅಭಿಯಾನ ನಡೆಸಲಾಗುತ್ತಿದೆ. ಕೊಪ್ಪಳದಲ್ಲೂ ಲಸಿಕಾ ಕಾರ್ಯಕ್ರಮ ಹಮ್ಮಿಕೊಂಡಿರುವುದು ಉತ್ತಮ ಕೆಲಸ. ಸಾರ್ವಜನಿಕರು ತಮ್ಮ ಮಕ್ಕಳಿಗೆ ಸಮೀಪದ ಅಂಗನವಾಡಿ ಕೇಂದ್ರ, ಶಾಲೆ, ಉಪಕೇಂದ್ರ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಲಸಿಕೆ ಹಾಕುವ ಬೂತ್‌ಗಳಲ್ಲಿ ಲಸಿಕೆ ಹಾಕಿಸಿ. ಜಾತ್ರೆ ಬಂದವರೂ ಇಲ್ಲಿಯೇ ಇರುವ ಬೂತ್‌ನಲ್ಲಿ ಲಸಿಕೆ ಹಾಕಿಸಿ ಎಂದರು.
ಎಡಿಸಿ ಎಂ.ಪಿ ಮಾರುತಿ ಮಾತನಾಡಿ, ಪೋಲಿಯೋ ಒಂದು ಸಂಕ್ರಾಮಿಕ ರೋಗ. ಜಿಲ್ಲೆಯಲ್ಲಿ 1,79,089 ಮಕ್ಕಳಿಗೆ ಲಸಿಕೆ ಹಾಕುವ ಗುರಿ ಇದೆ. ಮೊದಲ ದಿನ ಬೂತ್‌ನಲ್ಲಿ ಲಸಿಕೆ ನೀಡಲಾಗುವುದು. ಬಳಿಕ ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಿ ಮಕ್ಕಳಿಗೆ ಲಸಿಕೆ ನೀಡುತ್ತಾರೆ ಎಂದರು. ಡಿಎಚ್‌ಒ ಡಾ.ಅಲಕನಂದಾ ಮಳಗಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಅಕ್ಕಮಹಾದೇವಿ, ತಾಲೂಕಾ ಆರೋಗ್ಯಾಧಿಕಾರಿ ಡಾ.ರಾಮಾಂಜೇನೆಯ ಸೇರಿ ಇತರರಿದ್ದರು.