ಹಾಬಲಕಟ್ಟಿಯಲ್ಲಿ ಸುಂಗಧ ಪಸರಿಸಿದ ಅತ್ತಾರ್

ಗೀಗೀ-ಲಾವಣಿ ಪದ ಕಟ್ಟುವ ದಾವಲಸಾಬ್‌ಗೆ ರಾಜ್ಯೊತ್ಸವಪುರಸ್ಕಾರ
 ದಾವಲಸಾಬ್ ಅತ್ತಾರ
ದಾವಲಸಾಬ್ ಅತ್ತಾರ
Published on: 

ಕುಷ್ಟಗಿ/ಹನುಮಸಾಗರ: ಸಮೀಪದ ಹಾಬಲಕಟ್ಟಿ ಗ್ರಾಮದ ಜಾನಪದ ಕಲಾವಿದ ದಾವಲಸಾಬ್ ಅತ್ತಾರ್ ಅವರಿಗೆ ರಾಜ್ಯೊತ್ಸವ ಪ್ರಶಸ್ತಿ ಲಭಿಸಿದ್ದು, ಸಂಭ್ರಮ ಮನೆ ಮಾಡಿದೆ.

ಮೂರ್ನಾಲ್ಕು ತಲೆಮಾರಿನಿಂದ ಜಾನಪದ ಕಲೆ ಮೈಗೂಡಿಸಿಕೊಂಡು ಬರಲಾಗಿದ್ದು, 75 ವರ್ಷದ ದಾವಲಸಾಬ್ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದ್ದು ಬಡ ಕಲಾವಿದನಿಗೆ ಸಿಕ್ಕ ಗೌರವವಾಗಿದೆ. ಅತ್ತಾರ ಅವರ ಅಜ್ಜ, ಅಪ್ಪ ಮತ್ತು ಮಗ ಸಹ ಜನಪದ ಹಾಡುಗಾರರಾಗಿದ್ದು, ಗೀಗೀ, ರಿವಾತಿ ಪದ, ಲಾವಣಿ, ಭಜನಾ ಪದ ಹಾಡುತ್ತಾ ರಾಜ್ಯದ ವಿವಿಧೆಡೆ ಕಾರ್ಯಕ್ರಮಗಳನ್ನು ನೀಡಿದ್ದಾರೆ.

ಅಗರಬತ್ತಿ ಹಾಗೂ ಬಳೆ ವ್ಯಾಪಾರಿಯಾದ ದಾವಲಸಾಬ್ ವೃತ್ತಿಯೊಂದಿಗೆ ಜಾನಪದ ಸಾಹಿತ್ಯದ ಮೂಲಕ ಜನಮಾನಸದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.ನೀತಿ, ತತ್ವಗಳನ್ನು ಬಿತ್ತರಿಸುವ ಹಾಡುಗಳನ್ನು ಅಧಿಕವಾಗಿ ಹಾಡಿದ್ದು, ಐತಿಹಾಸಿಕ, ದೇಶದ ಸ್ವಾತಂತ್ರ್ಯ ಚಳವಳಿ ಕುರಿತು ಗಾಂಧೀಜಿ, ನೆಹರು, ಸುಭಾಶ್ಚಂದ್ರ ಬೋಸ್ ಅವರ ಕುರಿತು ಗೀಗೀ ಪದ ಹಾಡಿದ್ದಾರೆ.

ಮೆಹಬೂಬಸಾಬ್-ಮಹಿಬೂಬಿ ದಂಪತಿ ಮಗನಾಗಿ ಜನಿಸಿದ ದಾವಲಸಾಬ್ ಹಿಂದೂ-ಮುಸ್ಲಿಂ ಭಾವೈಕ್ಯದ ಮನೆತನದ ಕಲಾವಿದ.

ಭಜನೆ, ಗೀಗೀಪದ, ಲಾವಣಿ ಹಾಡುಗಳಲ್ಲಿ ಆಸಕ್ತಿ ಹೊಂದಿ ಪ್ರೇಕ್ಷಕರ ಗಮನ ಸೆಳೆದಿದ್ದಾರೆೆ. ಉತ್ತರ ಕರ್ನಾಟಕ ಶೈಲಿಯ ಭಜನಾ ಪದಗಳು, ತತ್ವಪದಗಳು, ಶಿವಶರಣರ ಗೀತೆಗಳು ಮತ್ತು ಜಾನಪದ ಶೈಲಿಯ ಸವಾಲ್-ಜವಾಬ್ ಭಜನಾ ಪದ, ಸಂಗೀತ ಲೋಕದಲ್ಲಿ ಜಂಕಾರ್ ಮ್ಯೂಸಿಕ್ ಸೇರಿದಂತೆ ಪ್ರಮುಖ ಆಡಿಯೋ ಸಂಸ್ಥೆಗಳ ಮೂಲಕ ಇವರ ಶಿವಶರಣೆ ಭಜನಾ ಪದಗಳು ಧ್ವನಿಸುರುಳಿಗಳು ಬಿಡುಗಡೆಯಾಗಿವೆ. ಇವರ ಭಜನಾ ಪದಗಳು ಹೆಚ್ಚಾಗಿ ಸಮಾಜ ಸುಧಾರಣೆ, ಮಾನವೀಯ ಮೌಲ್ಯಗಳು, ಗುರು-ಶಿಷ್ಯರ ಸಂಬಂಧ ಮತ್ತು ಆಧ್ಯಾತ್ಮಿಕ ಚಿಂತನೆಗಳನ್ನು ಸರಳ ಕನ್ನಡದಲ್ಲಿ ಪ್ರಸ್ತುತಪಡಿಸುತ್ತವೆ.

ಹದಿನಾರನೇ ವಯಸ್ಸಿನಲ್ಲಿ ಗೀಗೀ ಪದ ಹಾಡುವುದನ್ನು ಮೈಗೂಡಿಸಿಕೊಂಡು ಬಂದಿದ್ದಾರೆ. ಇಟಗಿ ಭೀಮಾಂಬಿಕಾ ದೇವಿ, ಕುಂಬಳಾವತಿ ದ್ಯಾಮಾಂಬಿಕಾ ದೇವಿ, ದೊಣ್ಣೆ ಗುಡ್ಡದ ದುರ್ಗಾದೇವಿ, ಬೊಮ್ಮಸಾಗರ ದುರ್ಗಾದೇವಿ, ಕಾಲಕಾಲೇಶ್ವರ, ರೈತರ ಕುರಿತು ಭಜನಾ ಕ್ಯಾಸೆಟ್‌ಗಳನ್ನು ನಿರ್ಮಾಣ ಮಾಡಿದ್ದಾರೆ. ಇವರ ಜಾನಪದ ಕಲೆಗೆ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ, ಜಾನಪದ ಲೋಕ ಪ್ರಶಸ್ತಿ, ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಸೇರಿ ಸುಮಾರು 70ಕ್ಕೂ ಹೆಚ್ಚು ಪ್ರಶಸ್ತಿಗಳು ಅರಸಿ ಬಂದಿವೆ.