

ಕುಷ್ಟಗಿ: ಬಿಇಒ ಕಚೇರಿಯಲ್ಲಿ 70 ಲಕ್ಷ ರೂ. ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿ ಕ್ಷೇತ್ರ ಶಿಕ್ಷಣಾಧಿಕಾರಿ ದೂರು ನೀಡಿದ ಹಿನ್ನೆಲೆಯಲ್ಲಿ ಮಂಗಳವಾರ ರಾತ್ರಿವರೆಗೆ ವಿಶೇಷ ಪೊಲೀಸ್ ತನಿಖಾ ತಂಡವು ದಾಖಲೆಗಳ ಪರಿಶೀಲನೆ ಮಾಡಿತು.
ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳ ವಿಶೇಷ ತನಿಖಾ ತಂಡ ಕಚೇರಿಗೆ ಭೇಟಿ ನೀಡಿ ಸುಮಾರು ನಾಲ್ಕೈದು ಗಂಟೆಗಳ ಕಾಲ ದಾಖಲೆಗಳನ್ನು ಪರಿಶೀಲಿಸಿದ್ದಲ್ಲದೆ ಮಹತ್ವದ ಕಡತಗಳು ಹಾಗೂ ಕಂಪ್ಯೂಟರ್ಗೆ ಸಂಬಂಧಿಸಿದ ಸಾಮಗ್ರಿಗಳನ್ನು ತೆಗೆದುಕೊಂಡು ಹೋಗಿದೆ ಎನ್ನಲಾಗಿದೆ.
ನಿವೃತ್ತ ನೌಕರರ ಗಳಿಕೆ ರಜೆ ನಗದೀಕರಣ, ಅತಿಥಿ ಶಿಕ್ಷಕರ ಗೌರವಧನ ಹಾಗೂ ಸಾಮಾನ್ಯ ಭವಿಷ್ಯನಿಧಿ (ಜಿಪಿಎಫ್) ಹಣವನ್ನು ಅರ್ಹ ಫಲಾನುಭವಿಗಳ ಬದಲಿಗೆ ಬೇರೆಯವರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗಿದೆ. ಇದು ಮಹಾಲೇಖಪಾಲರ (ಎಜಿ) ತಂಡದ ಲೆಕ್ಕಪರಿಶೋಧನೆ ವೇಳೆ ಹಣಕಾಸಿನ ವ್ಯವಹಾರಗಳಲ್ಲಿ ಅಕ್ರಮ ನಡೆದಿರುವುದು ಬಯಲಾಗಿತ್ತು. ಈ ಆರೋಪದ ಮೇರೆಗೆ ಬಿಇಒ ಕಚೇರಿಯ ದ್ವಿತೀಯ ದರ್ಜೆ ಸಹಾಯಕ ಕನಕಗೌಡ ಅವರನ್ನು ಅಮಾನತುಗೊಳಿಸಿ ಡಿಡಿಪಿಐ ಆದೇಶಿಸಿದ್ದರು. ಕನಕಗೌಡ ವಿರುದ್ಧ ಕುಷ್ಟಗಿ ಠಾಣೆಯಲ್ಲಿ ಬಿಇಒ ದೂರು ನೀಡಿದ್ದರು.
ಪ್ರಕರಣದ ತನಿಖೆಗೆ ಸಂಬಂಧಿಸಿ ರಚಿಸಲಾಗಿದ್ದ ವಿಶೇಷ ತಂಡವು ಮಂಗಳವಾರ ಭೇಟಿ ಪರಿಶೀಲಿಸಿ ಪ್ರಮುಖ ದಾಖಲೆಗಳನ್ನು ತೆಗೆದುಕೊಂಡು ಹೋಗಿದೆ. ಹೀಗಾಗಿ ಆರೋಪಗಳ ಸತ್ಯಾಸತ್ಯತೆ ಪೊಲೀಸ್ ತನಿಖೆಯ ನಂತರವಷ್ಟೇ ತಿಳಿಯಲಿದೆ. ಈ ನಡುವೆ ಕೆಲವು ಮಹತ್ವದ ದಾಖಲೆಗಳು ನಾಪತ್ತೆಯಾಗಿವೆ ಎಂಬ ಆರೋಪಗಳೂ ಕೇಳಿಬಂದಿವೆ.