

ಕೊಪ್ಪಳ: ಫಾರ್ಮಸಿ ಕ್ಷೇತ್ರವನ್ನು ಕೇವಲ ವ್ಯಾಪಾರವಾಗಿ ನೋಡದೆ, ಸಮಾಜಕ್ಕೆ ಸಲ್ಲಿಸುವ ಉತ್ತಮ ಸೇವೆಯಾಗಿ ಸ್ವೀಕರಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಹೇಳಿದರು.
ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಶುಕ್ರವಾರ ವಿಶ್ವ ಫಾರ್ಮಾಸಿಸ್ಟ್ ದಿನಾಚರಣೆ ಹಾಗೂ ಜಿಲ್ಲಾಮಟ್ಟದ ಉತ್ತಮ ಫಾರ್ಮಾಸಿಸ್ಟ್ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಆರೋಗ್ಯ ಕ್ಷೇತ್ರದಲ್ಲಿ ವೈದ್ಯರು ಮತ್ತು ಫಾರ್ಮಾಸಿಸ್ಟ್‌ಗಳ ಪಾತ್ರ ಪ್ರಮುಖವಾಗಿದೆ. ಆಧುನಿಕ ಯುಗದಲ್ಲಿ ಸಾಂಪ್ರದಾಯಿಕ ಪದ್ಧತಿಗಳಿಗೆ ಸೀಮಿತವಾಗದೆ ಗುಣಮಟ್ಟದ ಶಿಕ್ಷಣ ಹಾಗೂ ತರಬೇತಿ ಪಡೆಯುವುದು ಅಗತ್ಯ. ಸಾರ್ವಜನಿಕರ ಆರೋಗ್ಯಕ್ಕೆ ಯಾವುದೇ ತೊಂದರೆ ಆಗದಂತೆ ಕಾನೂನಿನ ಚೌಕಟ್ಟಿನಲ್ಲಿ ಕಡ್ಡಾಯವಾಗಿ ವೈದ್ಯರ ಚೀಟಿ, ಸಲಹೆಯ ಮೇರೆಗೆ ಮಾತ್ರ ಔಷಧಗಳನ್ನು ವಿತರಿಸಬೇಕು ಎಂದು ತಿಳಿಸಿದರು.
ಸಹಾಯಕ ಔಷಧ ನಿಯಂತ್ರಕ ವೆಂಕಟೇಶ ರಾಠೋಡ್ ಮಾತನಾಡಿ, ಕಠಿಣ ಕೋವಿಡ್ ಸಮಯದಲ್ಲಿ ಫಾರ್ಮಾಸಿಸ್ಟ್‌ಗಳು ಜೀವದ ಹಂಗು ತೊರೆದು ನಿರಂತರವಾಗಿ ಔಷಧ ಅಂಗಡಿಗಳನ್ನು ತೆರೆದು ಸೇವೆ ಸಲ್ಲಿಸಿದ್ದು ಸ್ಮರಣೀಯ ಎಂದರು.
ಸಿಪಿಐ ಸುರೇಶ ಡಿ. ಮಾತನಾಡಿ, ಸಾರ್ವಜನಿಕರು ಪ್ರತಿಯೊಂದು ವ್ಯಾಪಾರದಲ್ಲೂ ಚೌಕಾಸಿ ಮಾಡುತ್ತಾರೆ. ಆದರೆ, ಆರೋಗ್ಯದ ವಿಷಯ ಬಂದಾಗ ಆಸ್ಪತ್ರೆ ಮತ್ತು ಮೆಡಿಕಲ್ ಸ್ಟೋರ್‌ಗಳ ಮೇಲೆ ಅಪಾರ ನಂಬಿಕೆ ಇಟ್ಟು ಔಷಧ ಪಡೆಯುತ್ತಾರೆ. ಆ ವಿಶ್ವಾಸವನ್ನು ಉಳಿಸಿಕೊಳ್ಳುವುದು ಮುಖ್ಯ. ಅಲ್ಲದೆ, ಯುವಜನತೆ ಮಾದಕ ವಸ್ತುಗಳ ವ್ಯಸನಕ್ಕೆ ದಾಸರಾಗುವುದನ್ನು ತಡೆಯಲು, ಸ್ವಸ್ಥ ಸಮಾಜ ನಿರ್ಮಾಣಕ್ಕೆ ವೈದ್ಯರ ಸಲಹೆ ಹೊರತುಪಡಿಸಿ ಯಾವುದೇ ನಿಯಂತ್ರಿತ ಔಷಧಗಳನ್ನು ನೀಡಬಾರದು ಎಂದು ಮನವಿ ಮಾಡಿದರು. ಅತ್ಯುತ್ತಮ ಫಾರ್ಮಾಸಿಸ್ಟ್‌ಗಳಿಗೆ ಜಿಲ್ಲಾಮಟ್ಟದ ’ಉತ್ತಮ ಫಾರ್ಮಾಸಿಸ್ಟ್’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಇದಕ್ಕೂ ಮುನ್ನ ನಗರದ ಗಡಿಯಾರ ಕಂಬದಿಂದ ಅಶೋಕ ಸರ್ಕಲ್‌ವರಗೆ ಫಾರ್ಮಸಿ ಕಾಲೇಜು ವಿದ್ಯಾರ್ಥಿಗಳಿಂದ ಜಾಗೃತಿ ಜಾಥಾ ನಡೆಯಿತು. ಹಿರಿಯ ಸಿವಿಲ್ ನ್ಯಾಯಾಧೀಶ ಮಹಾಂತೇಶ ದರಗದ, ಎಸಿ ಮೆಹಬೂಬ್ ಜಿಲಾನ್, ಡಿಎಚ್‌ಒ ಡಾ.ಈಶ್ವರ ಸವಡಿ, ಜಿಲ್ಲಾ ಔಷಧ ವ್ಯಾಪಾರಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕೊಟ್ರಪ್ಪ ವಿ., ಗಂಗಾವತಿ ತಾಲೂಕು ಅಧ್ಯಕ್ಷ ಅಶೋಕಸ್ವಾಮಿ ಹೇರೂರು, ಜಿಲ್ಲಾ ಫಾರ್ಮಸಿ ಕಾಲೇಜುಗಳ ಪ್ರತಿನಿಧಿ ಶ್ರವಣ ನರಗುಂದ ಇತರರಿದ್ದರು.