

ಕುಷ್ಟಗಿ: ಮಹಾರಾಷ್ಟ್ರದ ನಾಸಿಕ್‌ನಲ್ಲಿ ಕಳೆದ ಮೂರು ತಿಂಗಳಿಂದ ಸಶಸ್ತ್ರ ಮೀಸಲು ಪಡೆಗಳ (ಅಗ್ನಿವೀರ) ತರಬೇತಿ ಪಡೆಯುತ್ತಿದ್ದ ತಾಲೂಕಿನ ಮಡಿಕೇರಿಯ ಶಿವಪ್ಪ ಹನಮಪ್ಪ ಮುದಗಲ್ (24) ರೈಲು ಡಿಕ್ಕಿಯಾಗಿ ಮೃತಪಟ್ಟಿದ್ದಾರೆ.
ತಾಯಿಯ ಅನಾರೋಗ್ಯದ ಹಿನ್ನೆಲೆಯಲ್ಲಿ ಐದು ದಿನಗಳ ರಜೆ ಪಡೆದು ಸ್ವಗ್ರಾಮಕ್ಕೆ ಮರಳುತ್ತಿದ್ದಾಗ ಮಹಾರಾಷ್ಟ್ರದ ಕಲ್ಯಾಣ್ ರೈಲ್ವೆ ನಿಲ್ದಾಣದಲ್ಲಿ ಹಳಿ ದಾಟುವಾಗ ಎದುರಿನಿಂದ ಬಂದ ರೈಲು ಡಿಕ್ಕಿಯಾಗಿ ದುರ್ಘಟನೆ ಸಂಭವಿಸಿದೆ. ಸೇನಾಧಿಕಾರಿಗಳು ಪಾರ್ಥಿವ ಶರೀರವನ್ನು ಶನಿವಾರ ಮೃತರ ಸ್ವಗ್ರಾಮ ಮಡಿಕೇರಿಗೆ ತಂದರು.
ಗ್ರಾಮಕ್ಕೆ ಪಾರ್ಥಿವ ಶರೀರ ಆಗಮಿಸುತ್ತಿದ್ದಂತೆ ಹೆತ್ತವರು ಹಾಗೂ ಗ್ರಾಮಸ್ಥರ ಆಕ್ರಂದನ ಮುಗಿಲು ಮುಟ್ಟಿತು. ಗ್ರಾಮದ ಜಮೀನಿನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲಾಯಿತು.
ಈ ಸಂದರ್ಭ ಗ್ರೇಡ್ 2 ತಹಸೀಲ್ದಾರ್ ರಜನಿಕಾಂತ್ ಕೆಂಗೇರಿ, ದಿಶಾ ಸಮಿತಿ ಸದಸ್ಯ ದೊಡ್ಡಬಸವನಗೌಡ ಬಯ್ಯಪುರ, ಮುಖಂಡ ಬಸವರಾಜ ಹಳ್ಳೂರು, ಪೊಲೀಸ್ ಸಿಬ್ಬಂದಿ, ಗ್ರಾಮದ ಮುಖಂಡ ಸಂಗನಗೌಡ ಬರಮಗೌಡ, ಮಾಜಿ ಸೈನಿಕರ ಸಂಘದ ತಾಲೂಕು ಅಧ್ಯಕ್ಷ ಹಂಪನಗೌಡ ಬಳೂಟಗಿ, ಹನುಮಂತಪ್ಪ ಹಿರೇಮನಿ, ಶಂಕರಪ್ಪ ಕವಳಿಕಾಯಿ, ವಿಜಯ್ ಭೀಮಪ್ಪ ವಡ್ಡರ್, ಶಿವಾಜಿ ಹಡಪದ್, ಕಳಕಪ್ಪ ನಾಯಕವಾಡಿ, ಬಸಯ್ಯ ಹಿರೇಮಠ, ಶರಣಯ್ಯ ಹಿರೇಮಠ ಹಾಗೂ ಸೇನಾಧಿಕಾರಿಗಳು ಪಾಲ್ಗೊಂಡು ಅಂತಿಮ ನಮನ ಸಲ್ಲಿಸಿದರು.