ಮದ್ಯಮುಕ್ತ ಗ್ರಾಮ ಹೋರಾಟ ನಿರಂತರವಾಗಿರಲಿ

ಹೋರಾಟಗಾರ್ತಿ ವಿದ್ಯಾ ಪಾಟೀಲ್ ಸಲಹೆ, ಕಂದಕೂರು ಗ್ರಾಮದಲ್ಲಿ ಜಾಗೃತಿ ಕಾರ್ಯಕ್ರಮ
ಕಂದಕೂರ ಗ್ರಾಮದಲ್ಲಿ ಏರ್ಪಡಿಸಿದ್ದ ಮದ್ಯ ವ್ಯಸನಮುಕ್ತ ಕಾರ್ಯಕ್ರಮದಲ್ಲಿ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಶರಣಪ್ಪ ಸದಲಾಪುರ, ಕಾನೂನು ಹಿರಿಯ ಅಧಿಕಾರಿ ಬಿ.ಎಸ್ ಪಾಟೀಲ್, ಸಿಪಿಐ ವಿಶ್ವನಾಥ ಹಿರೇಗೌಡರು ಇತರರಿದ್ದರು.
ಕಂದಕೂರ ಗ್ರಾಮದಲ್ಲಿ ಏರ್ಪಡಿಸಿದ್ದ ಮದ್ಯ ವ್ಯಸನಮುಕ್ತ ಕಾರ್ಯಕ್ರಮದಲ್ಲಿ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಶರಣಪ್ಪ ಸದಲಾಪುರ, ಕಾನೂನು ಹಿರಿಯ ಅಧಿಕಾರಿ ಬಿ.ಎಸ್ ಪಾಟೀಲ್, ಸಿಪಿಐ ವಿಶ್ವನಾಥ ಹಿರೇಗೌಡರು ಇತರರಿದ್ದರು.
Published on: 

ಕುಷ್ಟಗಿ: ಇಡೀ ಕುಟುಂಬವನ್ನು ಉಪವಾಸ ಹಾಕುವ ಮದ್ಯವ್ಯಸನದಂತಹ ದುಶ್ಚಟದಿಂದ ಮುಕ್ತರಾಗಬೇಕು ಎಂದು ರಾಯಚೂರಿನ ಹೋರಾಟಗಾರ್ತಿ ವಿದ್ಯಾ ಪಾಟೀಲ್ ಹೇಳಿದರು.

ಸ್ವಸ್ಥ ಸಮಾಜ ನಿರ್ಮಿಸುವ ಸಂಕಲ್ಪದೊಂದಿಗೆ ಪಟ್ಟಣದಿಂದ ಕಂದಕೂರು ಗ್ರಾಮದವರೆಗೆ ಭಾನುವಾರ ‘ಗಾಂಧಿ ಬೆಳಕು ಜಾಗೃತಿ ನಡಿಗೆ ಜಾಗೃತಿ’ ಕಾರ್ಯಕ್ರಮದ ಪಾದಯಾತ್ರೆ ನಂತರ ಏರ್ಪಡಿಸಿದ್ದ ಬೃಹತ್ ಸಭೆಯಲ್ಲಿ ಮಾತನಾಡಿದರು. ಸುಮಾರು 26 ಜಿಲ್ಲೆಗಳಲ್ಲಿ ಮದ್ಯಮುಕ್ತ ರಾಜ್ಯಕ್ಕಾಗಿ ಅಹೋರಾತ್ರಿ ಹೋರಾಟ, ಪಾದಯಾತ್ರೆ ಹಾಗೂ ಕೂಡಲಸಂಗಮದಲ್ಲಿ ಜಲಸತ್ಯಾಗ್ರಹ ನಡೆಸಲಾಗಿದೆ. ಅಲ್ಲದೆ ಒಂದು ಲಕ್ಷ ಸಹಿ ಸಂಗ್ರಹಿಸಲಾಗುತ್ತಿದೆ. ಕುಡಿತದಿಂದ ಕುಟುಂಬಗಳು ಬೀದಿಗೆ ಬೀಳುತ್ತಿದ್ದು, ಅಪಘಾತ, ಅತ್ಯಾಚಾರ, ಕೊಲೆ ಸೇರಿದಂತೆ ಹಲವು ಅನಾಹುತಗಳಿಗೆ ಕಾರಣವಾಗುತ್ತಿದೆ. ಕಂದಕೂರಿನ ಜಾಗೃತಿ ಕಾರ್ಯಕ್ರಮ ಒಂದು ದಿನಕ್ಕೆ ಸೀಮಿತವಾಗದೆ ನಿರಂತರವಾಗಿಬೇಕು ಎಂದರು.

ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಶರಣಪ್ಪ ಸದಲಾಪುರ ಮಾತನಾಡಿ, ಕೊಪ್ಪಳ ಜಿಲ್ಲೆಯಲ್ಲಿ ಗ್ರಾಮಗಳು ಮದ್ಯಮುಕ್ತವಾಗುವತ್ತ ಹೆಜ್ಜೆ ಇಡುತ್ತಿರುವುದು ಸಂತಸದ ಸಂಗತಿ. ಮದ್ಯ ಹಾಗೂ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಮಕ್ಕಳಿಗೆ ಶಾಲಾ ಹಂತದಲ್ಲೇ ಅರಿವು ಮೂಡಿಸಬೇಕು. ಪಠ್ಯಕ್ರಮದಲ್ಲಿ ನೈತಿಕ ಶಿಕ್ಷಣದೊಂದಿಗೆ ವ್ಯಸನಗಳ ಅಪಾಯದ ಕುರಿತು ವಿಷಯ ಅಳವಡಿಸಬೇಕು. ಗ್ರಾಮೀಣ ಪ್ರದೇಶಗಳಲ್ಲಿ ನಡೆಯುತ್ತಿರುವ ಅಕ್ರಮ ಸಾರಾಯಿ ಹಾಗೂ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಈ ಕುರಿತು ಎಲ್ಲ ಜಿಲ್ಲಾಧಿಕಾರಿಗಳು ಹಾಗೂ ಎಸ್ಪಿಗಳಿಗೆ ಪತ್ರ ಬರೆದು ಕ್ರಮಕ್ಕೆ ಮನವಿ ಮಾಡಿರುವುದಾಗಿ ತಿಳಿಸಿದರು

ಸಿಪಿಐ ವಿಶ್ವನಾಥ ಹಿರೇಗೌಡರ್ ಮಾತನಾಡಿ, ಮದ್ಯವ್ಯಸನ ಕೇವಲ ವ್ಯಕ್ತಿಯ ಸಮಸ್ಯೆಯಾಗಿರದೆ ಕುಟುಂಬ ಹಾಗೂ ಸಮಾಜವನ್ನು ಬಾಧಿಸುತ್ತಿರುವ ಸಾಮಾಜಿಕ ಪಿಡುಗಾಗಿದೆ. ಕುಡಿತದಿಂದ ಕುಟುಂಬಗಳ ನೆಮ್ಮದಿ ಹಾಳಾಗಿ ಆರ್ಥಿಕ ಸಂಕಷ್ಟದ ಜತೆಗೆ ಹಲವು ಅನಾಹುತಗಳಿಗೆ ಕಾರಣವಾಗುತ್ತಿದೆ.ಯುವಕರು ಹಾಗೂ ಹಿರಿಯರು ಒಗ್ಗಟ್ಟಾಗಿ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಿ ಕಂದಕೂರನ್ನು ಮದ್ಯಮುಕ್ತಗೊಳಿಸುವ ಸಂಕಲ್ಪವನ್ನು ಕಾರ್ಯರೂಪಕ್ಕೆ ತರಬೇಕು ಎಂದರು.

ಗ್ರಾಮದ ಮುಖಂಡ ಕಂದಕೂರಪ್ಪ ವಾಲ್ಮೀಕಿ ಮಾತನಾಡಿ, ನನ್ನ ಹೆಸರಿನಲ್ಲಿ ಬಂದಿದ್ದ ಎಂಎಸ್‌ಐಎಲ್ ಮದ್ಯ ಮಳಿಗೆಯನ್ನು ವಾಪಸ್ ಮಾಡಿರುವುದಾಗಿ ತಿಳಿಸಿದರು. ಹಿರಿಯ ಕಾನೂನು ವಿಭಾಗೀಯ ಅಧಿಕಾರಿ ಬಿ.ಎಸ್. ಪಾಟೀಲ್ ಮಾತನಾಡಿದರು.

ಪ್ರಮುಖ ಶರಣಪ್ಪ ಬಿಜಕಲ್, ಗಾಂಧಿ ಬಳಗದ ಶರಣಪ್ಪ ಬಾಚಲಾಪುರ, ಸಾವಿತ್ರಿ ಮುಜುಮದಾರ, ಪಿಎಸ್‌ಐ ಹನುಮಂತಪ್ಪ ತಳವಾರ, ಚಂದ್ರಹಾಸ ಬಾವಿಕಟ್ಟಿ, ಪ್ರಾಣೇಶ್ ಪೂಜಾರ, ಬಸವರಾಜ ಕಾಮನೂರು, ವೆಂಕಟೇಶ ಕಂದಕೂರು, ಡಾ.ಸಿದ್ದಲಿಂಗಪ್ಪ ಕೊಟ್ನೇಕಲ್, ಆನಂದ ತೀರ್ಥ ಕೊಪ್ಪಳ, ಪಿಡಿಒ ಗಿರಿಮಲ್ಲಪ್ಪ, ವಿರುಪಮ್ಮ, ನಜೀರ್‌ಸಾಬ್ ಮೂಲಿಮನಿ, ಆರ್.ಕೆ. ದೇಸಾಯಿ, ಶಿವರಾಯಪ್ಪ ನಿರಲೂಟಿ, ರಾಘು ಹನುಮನಹಳ್ಳಿ, ಮಂಜುನಾಥ ಡೊಳ್ಳಿನ್ ಇತರರಿದ್ದರು.

ಶಂಕರ ಬಿನ್ನಾಳ ಕಲಾ ತಂಡ ಸಂಗೀತದ ಮೂಲಕ ಜಾಗೃತಿ ಮೂಡಿಸಿತು. ಡಾ. ಜೀವನಸಾಬ್ ಬಿನ್ನಾಳ ಜಾನಪದ ಸಂಗೀತ ನಡೆಸಿಕೊಟ್ಟರು. ಕುಡಿತದಿಂದಾಗುವ ಪರಿಣಾಮದ ಕುರಿತು ಕಿರುನಾಟಕ ಪ್ರದರ್ಶಿಸಲಾಯಿತು.

ಕಂದಕೂರ ಗ್ರಾಮದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಹಿಳೆಯರು.
ಕಂದಕೂರ ಗ್ರಾಮದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಹಿಳೆಯರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net