ಭೈರಪ್ಪ ಸಾಹಿತ್ಯದಲ್ಲಿದೆ ಜೀವನ ಮೌಲ್ಯ

ಕೊಪ್ಪಳದಲ್ಲಿ ಪ್ರಥಮ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮ
ಕೊಪ್ಪಳದಲ್ಲಿ ಏರ್ಪಡಿಸಿದ್ದ ಡಾ. ಎಸ್.ಎಲ್ ಬೈರಪ್ಪ ಅವರ ಪ್ರಥಮ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಹಾಸ್ಯ ಭಾಷಣಕಾರ ಗಂಗಾವತಿ ಬಿ.ಪ್ರಾಣೇಶ ಮಾತನಾಡಿದರು.
ಕೊಪ್ಪಳದಲ್ಲಿ ಏರ್ಪಡಿಸಿದ್ದ ಡಾ. ಎಸ್.ಎಲ್ ಬೈರಪ್ಪ ಅವರ ಪ್ರಥಮ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಹಾಸ್ಯ ಭಾಷಣಕಾರ ಗಂಗಾವತಿ ಬಿ.ಪ್ರಾಣೇಶ ಮಾತನಾಡಿದರು.
Published on: 

ಕೊಪ್ಪಳ: ಡಾ. ಎಸ್.ಎಲ್. ಭೈರಪ್ಪ ಅವರು ಕನ್ನಡ ಸಾಹಿತ್ಯ ಲೋಕದ ಅತ್ಯಂತ ವಿಶೇಷ ಹಾಗೂ ಮೇರು ಸಾಹಿತಿ. ಅವರ ಪ್ರತಿಯೊಂದು ಕಾದಂಬರಿ ಅತ್ಯಂತ ಗಂಭೀರವಾಗಿದ್ದು, ಜೀವನ ಮೌಲ್ಯಗಳನ್ನು ಒಳಗೊಂಡಿವೆ ಎಂದು ಹಾಸ್ಯ ಭಾಷಣಕಾರ ಗಂಗಾವತಿ ಬಿ.ಪ್ರಾಣೇಶ ಅಭಿಪ್ರಾಯಪಟ್ಟರು.

ನಗರದ ಶ್ರೀ ಸೌಭಾಗ್ಯಲಕ್ಷ್ಮೀ ವಿವಿಧೋದ್ದೇಶ ಸಹಕಾರಿ ಬ್ಯಾಂಕ್ ಸಭಾಂಗಣದಲ್ಲಿ ಶನಿವಾರ ಡಾ.ಎಸ್.ಎಲ್. ಭೈರಪ್ಪ ಪ್ರತಿಷ್ಠಾನ ಬೆಂಗಳೂರು ಹಾಗೂ ಗಿಣಿಗೇರಿಯ ಶ್ರೀ ಆನೆಗೊಂದಿ ಮಹಾಸಂಸ್ಥಾನ ಸರಸ್ವತಿ ಪೀಠ ಶ್ರೀಮಠದಿಂದ ಆಯೋಜಿಸಿದ್ದ ಭೈರಪ್ಪನವರ ಪ್ರಥಮ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಭೈರಪ್ಪ ಹಾಗೂ ಬೀಚಿ ಅವರ ಸಾಹಿತ್ಯವನ್ನು ಆಳವಾಗಿ ಅಧ್ಯಯನ ಮಾಡಿದ್ದೇನೆ. ಇಬ್ಬರ ಬರಹ ಶೈಲಿಗಳಿಗೂ ಬಹಳ ವ್ಯತ್ಯಾಸವಿದೆ. ಭೈರಪ್ಪನವರ ಸಾಹಿತ್ಯ ಅತ್ಯಂತ ಗಾಂಭೀರ್ಯದಿಂದ ಕೂಡಿದೆ. ಅವರು ಸಾಹಿತ್ಯ ಲೋಕದ ಅಗ್ರಗಣ್ಯ ನಾಯಕ ಎಂದು ತಿಳಿಸಿದರು.

ಸಾನ್ನಿಧ್ಯವಹಿಸಿದ್ದ ಸರಸ್ವತಿ ಪೀಠದ ಅಭಿನವ ಶ್ರೀಕಂಠ ಸ್ವಾಮೀಜಿ ಮಾತನಾಡಿ, ಸಮುದ್ರದ ಆಳಕ್ಕೆ ಇಳಿದಂತೆಲ್ಲ ಅತ್ಯಮೂಲ್ಯ ಮುತ್ತು-ರತ್ನಗಳು ಸಿಗುವಂತೆ, ಭೈರಪ್ಪ ಅವರ ಕಾದಂಬರಿಗಳನ್ನು ಆಳವಾಗಿ ಓದಿದಾಗ ಮಾತ್ರ ಅದರ ಸಾಹಿತ್ಯಿಕ ಸತ್ವ ತಿಳಿಯುತ್ತದೆ ಎಂದರು.

ಬೆಂಗಳೂರಿನ ಪ್ರತಿಷ್ಠಾನದ ಪ್ರಮುಖ ಅರುಣ್ ಮಾತನಾಡಿ, ಭೈರಪ್ಪನವರು ಬದುಕಿದ್ದಾಗಲೆಯೇ ಈ ಪ್ರತಿಷ್ಠಾನ ಆರಂಭಿಸಲಾಗಿದೆ. ಅವರ ಶ್ರೀಮಂತ ಸಾಹಿತ್ಯ ಕೃಷಿಯನ್ನು ಇಂದಿನ ಜೆನ್‌ಜೀ ಪೀಳಿಗೆಗೆ ತಲುಪಿಸುವುದೇ ಪ್ರತಿಷ್ಠಾನದ ಮುಖ್ಯ ಗುರಿಯಾಗಿದೆ ಎಂದರು.

ಭೈರಪ್ಪ ಕೃತಿಗಳಲ್ಲಿನ ಮೌಲ್ಯಗಳು ವಿಷಯ ಕುರಿತು ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ಬಾಳಪ್ಪ ತಳವಾರ-ಪ್ರಥಮ ಹಾಗೂ ವಂಶಿ ಕೃಷ್ಣಗೌಳಿ ದ್ವಿತೀಯ ಸ್ಥಾನ ಪಡೆದುಕೊಂಡರು. ಪ್ರಮುಖರಾದ ಶಂಕರಗೌಡ ಪೊಲೀಸ್ ಪಾಟೀಲ್, ಸೋಮಲಿಂಗಪ್ಪ ಬೆಣ್ಣಿ, ಬೊಮ್ಮಣ್ಣ ಅಕ್ಕಸಾಲಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net