

ಕುಷ್ಟಗಿ: ಉಚಿತ ಸೌಲಭ್ಯಗಳು ಆರ್ಥಿಕವಾಗಿ ಅತ್ಯಂತ ಹಿಂದುಳಿದವರಿಗೆ ಸಿಕ್ಕರೆ ಅದು ಸಾರ್ಥಕ. ಇಲ್ಲದಿದ್ದರೆ ಅದು ವ್ಯರ್ಥ ಎಂದು ಜಿಲ್ಲಾಧಿಕಾರಿ ಡಾ.ಸುರೇಶ ಇಟ್ನಾಳ ಅಭಿಪ್ರಾಯಪಟ್ಟರು.
ಡಾ.ಪುನೀತ್ ರಾಜಕುಮಾರ್ ಐದನೇ ಪುಣ್ಯ ಸ್ಮರಣೋತ್ಸವ ನಿಮಿತ್ತ ಪಟ್ಟಣದ ಮಲ್ಲಿಕಾರ್ಜುನ ಭವನದಲ್ಲಿ ಗುರುವಾರ ಇನ್ನರ್ ವ್ಹೀಲ್ ಕ್ಲಬ್ ಹಾಗೂ ಡಾ.ಸುಭಾಸ ಕಾಖಂಡಕಿ ಕಣ್ಣಿನ ಆಸ್ಪತ್ರೆಯ ಸಹಯೋಗದೊಂದಿಗೆ ಗುರುವಾರ ಏರ್ಪಡಿಸಿದ್ದ 30 ಜನ ಕಡು ಬಡವರಿಗೆ ಉಚಿತ ಕಣ್ಣಿನ ಶಸ್ತ್ರಚಿಕಿತ್ಸೆ ಶಿಬಿರ ಉದ್ಘಾಟಿಸಿ ಮಾತನಾಡಿದರು. ಡಾ.ಪುನೀತ್ ರಾಜಕುಮಾರ್ ಅವರು ನಟನೆ ಜತೆ ಸರಳತೆ, ಸಮಾಜ ಸೇವೆ ಮೂಲಕ ಮಾದರಿಯಾಗಿದ್ದಾರೆ. ಅವರ ನೆನಪಿನಲ್ಲಿ ಉಚಿತವಾಗಿ ಕಣ್ಣಿನ ಶಸ್ತ್ರಚಿಕಿತ್ಸೆ ಕೈಗೊಂಡಿರುವುದು ಶ್ಲಾಘನೀಯ. ಸರ್ಕಾರದೊಂದಿಗೆ ಇನ್ನರ್ ವ್ಹೀಲ್ ಕ್ಲಬ್‌ನಂತೆ ಇತರ ಸಂಘ-ಸಂಸ್ಥೆಗಳು ಸೇರಿ ಇಂತಹ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಮಾಡಿದಾಗ ಅಂಧತ್ವ ನಿವಾರಣೆ ಸಾಧ್ಯ ಎಂದರು.
ಡಾ.ಸುಶೀಲ್ ಕಾಖಂಡಕಿ ಮಾತನಾಡಿ, ನಿಜವಾದ ಬಡವರು ಇಂಥ ಸೌಲಭ್ಯಗಳನ್ನು ಸದುಪಯೋಗ ಪಡೆಯಬೇಕು. ಸ್ಥಿತಿವಂತರೂ ಪಡೆದರೆ ಮತ್ತೊಬ್ಬ ಅರ್ಹ ಬಡವನ ಚಿಕಿತ್ಸೆಗೆ ಹಿನ್ನಡೆಯಾಗುತ್ತದೆ. ಕಾರಣ ಸಂಘಟಕರು ಉಚಿತ ಚಿಕಿತ್ಸೆ ಪಡೆಯುವವರ ಹಿನ್ನೆಲೆ ಗಮನಿಸಬೇಕು ಎಂದರು.
ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷೆ ಗೌರಮ್ಮ ಕುಡತಿನಿ, ತಹಸೀಲ್ದಾರ್ ಅಶೋಕ ಶಿಗ್ಗಾವಿ, ಪುರಸಭೆ ಮುಖ್ಯಾಧಿಕಾರಿ ವೆಂಕಪ್ಪ ಬೀಳಗಿ, ಇನ್ನರ್ ವ್ಹೀಲ್ ಕ್ಲಬ್ ಕಾರ್ಯದರ್ಶಿ ಡಾ.ಪಾರ್ವತಿ ಪಲೋಟಿ, ವಂದನಾ ಗೂಗಿ, ಶ್ರೀದೇವಿ ಮಸ್ಕಿಮಠ, ಶಾರದಾ ಶೆಟ್ಟರ್, ಪ್ರಭಾ ಬಂಗಾರ ಶೆಟ್ಟರ್, ಮೇಘಾ ದೇಸಾಯಿ, ಸುಮಾ ಬ್ಯಾಳಿ, ಶಾರದಾ ಕಟ್ಡಿಮನಿ, ಗಿರಿಜಾ ಮಾಲಿಪಾಟೀಲ್ ಇತರರಿದ್ದರು. ಸುದೀಪ್ತಾ ಕಾಖಂಡಕಿ ಅಧ್ಯಕ್ಷತೆವಹಿಸಿದ್ದರು. ಶಸ್ತ್ರಚಿಕಿತ್ಸೆ ಮಾಡಿಸಿಕೊಂಡವರರಿಗೆ ಕನ್ನಡಕ ವಿತರಿಸಲಾಯಿತು.