

ಸಿದ್ದಾಪುರ: ಜಾನಪದ ಕ್ಷೇತ್ರದಲ್ಲಿ ಹಗಲುವೇಷದ ಗಾರುಡಿಗ ಎಂದೇ ಹೆಸರಾಗಿರುವ ಸಿದ್ದಾಪುರ ಗ್ರಾಮದ ನಿವಾಸಿ ಮೀರಾಲಿ ಶಿವಲಿಂಗಪ್ಪ ಪ್ರಸಕ್ತ ವರ್ಷದ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಬಾಲ್ಯದಿಂದಲೇ ಅಂದರೆ ಸುಮಾರು 8ನೇ ವರ್ಷದವರಿದ್ದಾಗಲೇ ಬಣ್ಣದ ಬದುಕಿಗೆ ಕಾಲಿಟ್ಟರು. ಬಾಲ್ಯದಲ್ಲಿಯೇ ತಂದೆ ರಾಮಣ್ಣನವರನ್ನು ಕಳೆದುಕೊಂಡರು. ಬಳಿಕ ತಾಯಿ ಈರಮ್ಮ ಹಾಗೂ ಸೋದರಮಾವ ಯಡವಲೆ ಶಂಕ್ರಪ್ಪನವರ ಸಹಕಾರದೊಂದಿಗೆ ಹಗಲುವೇಷ ಕಲೆ ಮೈಗೂಡಿಸಿಕೊಂಡರು. ಇವರ ಮಾರ್ಗದರ್ಶನದಿಂದಲೇ ಅನೇಕ ನಾಟಕಗಳು, ಜಾನಪದ ಸಂಗೀತ, ಸುಗಮ ಸಂಗೀತ, ತತ್ವಪದ, ಜಾನಪದ ಗೀತೆ, ದಾಸರಪದ, ಭಕ್ತಿಗೀತೆ, ಭಾವಗೀತ ಹಾಗೂ ವಚನಗಾಯನದ ಮೂಲಕ ಸಂಗೀತ ಸರಸ್ವತಿಯನ್ನು ತಮ್ಮದಾಗಿಸಿಕೊಂಡರು. ಶಿವಲಿಂಗಪ್ಪನವರು ಒಬ್ಬ ಅದ್ವಿತೀಯ ಜಾನಪದ ಹಗಲುವೇಷ ಕಲಾವಿದರಾಗಿದ್ದು, ಅಲೆಮಾರಿ ಬುಡ್ಗ ಜಂಗಮ ಎಂಬ ಪರಿಶಿಷ್ಟ ಜಾತಿಗೆ ಸೇರಿದ್ದಾರೆ. ಸಂಗೀತ ಹಾಗೂ ಜಾನಪದ ಕಲೆಯಲ್ಲಿ ಪ್ರಾವಿಣ್ಯತೆ ಹೊಂದಿದ್ದಾರೆ. ಕನ್ನಡ ಸಾಹಿತ್ಯ ಸಮ್ಮೇಳನ, ಮೈಸೂರು ದಸರಾ ಉತ್ಸವ, ಗಡಿನಾಡು ಉತ್ಸವ, ಹಂಪಿ ಉತ್ಸವ, ಆನೆಗೊಂದಿ ಉತ್ಸವ, ಜಾನಪದ ಜಾತ್ರೆಗಳಲ್ಲಿ ಅನೇಕ ಕಾರ್ಯಕ್ರಮ ನೀಡಿದ್ದಾರೆ.
ಶಿವಲಿಂಗಪ್ಪ ಸ್ವಂತ ತಂಡ ರಚಿಸಿಕೊಂಡು ಪುರಾಣ ಕಾವ್ಯಗಳಾದ ರಾಮಾಯಣ, ಮಹಾಭಾರತ ಹಾಗೂ ಸಾಮಾಜಿಕ ಕಥನಗಳ ಹಗಲುವೇಷ ರೂಪಕಗಳನ್ನು ಪ್ರದರ್ಶಿಸುವ ಮೂಲಕ ನಾಡಿನ ಸಾಂಸ್ಕೃತಿಕ ಚಾರಿತ್ರಿಕ ಹಿನ್ನೆಲೆಯನ್ನು ರಾಜ್ಯದ ಉದ್ದಗಲಕ್ಕೂ ಪಸರಿಸಿದರು. ರಾಜ್ಯದ ಎಲ್ಲ ಪ್ರಮುಖ ಸಾಂಸ್ಕೃತಿಕ ಉತ್ಸವಗಳಲ್ಲಿ ಅನೇಕ ಕಾರ್ಯಕ್ರಮ ನೀಡಿದ್ದಾರೆ. ಅಲ್ಲದೆ, ಪಕ್ಕದ ರಾಜ್ಯಗಳಾದ ಆಂಧ್ರ ಪ್ರದೇಶ, ತಮಿಳುನಾಡು, ಮಹಾರಾಷ್ಟ್ರ ಸೇರಿ ಇತರೆಡೆ ಸಹ ಕಲಾ ಪ್ರದರ್ಶನ ನೀಡಿ ಹಗಲುವೇಷ ಕಲೆಯ ಉತ್ಥಾನಕ್ಕಾಗಿ ಶ್ರಮಿಸುತ್ತಿದ್ದಾರೆ. ಶಿವಲಿಂಗಪ್ಪ ಅವರ ಕಲಾ ಸೇವೆ ಪರಿಗಣಿಸಿ ಕರ್ನಾಟಕ ಜಾನಪದ ಪರಿಷತ್ ಜಾನಪದ ಲೋಕ ಪ್ರಶಸ್ತಿ, ಜಾನಪದ ಅಕಾಡೆಮಿ ಪ್ರಶಸ್ತಿ ಸೇರಿ ಇತ ಸಂಘ ಸಂಸ್ಥೆಗಳು ಅನೇಕ ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ.
ಕೇವಲ ನಾಟಕ, ಸಂಗೀತ ಮಾತ್ರವಲ್ಲದೇ ಹಾರ್ಮೋನಿಯಂ, ತಬಲಾ, ದಮ್ಮಡಿ, ತಾಳ, ರಾಗಮಾಲೆಗಳನ್ನು ನುಡಿಸುವಲ್ಲೂ ಶಿವಲಿಂಗಪ್ಪ ಪರಿಣಿತರು. ಇವರು ಶೂರ್ಪಣಖಿಯ ಗರ್ವಭಂಗ, ಭೀಮಾಂಜನೇಯ ಯುದ್ಧ, ಮೋಹಿನಿ ಭಸ್ಮಾಸುರ, ಜಟಾಸುರನ ವಧೆ, ಸಿಂಧೂರ ಲಕ್ಷ್ಮಣ ಸೇರಿ ಹಲವಾರು ಸಾಮಾಜಿಕ ನಾಟಕಗಳನ್ನು ಪ್ರದರ್ಶಿಸಿ ಸಾರ್ವಜನಿಕರಿಂದ ಸೈ ಎನಿಸಿಕೊಂಡಿದ್ದಾರೆ.
ಶಿವಲಿಂಗಪ್ಪ ಅವರ ಪತ್ನಿ ಶಿವಮ್ಮ ಸಹ ಗಂಗಿಗೌರಿ ಗಾಯನಮೇಳ ಕಲಾವಿದರಾಗಿದ್ದಾರೆ. ಈ ದಂಪತಿಗೆ ಲಿಂಗರಾಜು, ರಾಮಯ್ಯ, ನಾರಾಯಣಪ್ಪ, ಮಂಜುನಾಥ ಎನ್ನುವ ನಾಲ್ವರು ಪುತ್ರರಿದ್ದು, ಇವರು ಸಹ ಕಲಾವಿದರಾಗಿ ತಂದೆಗೆ ಸಾಥ್ ನೀಡುತ್ತಿದ್ದಾರೆ. ಇಡೀ ಕುಟುಂಬವೇ ಕಲೆಯನ್ನು ಪ್ರೀತಿಸಿ ಗೌರವಿಸುತ್ತಿದೆ. ಈ ಹಿಂದೆ ಅಖಿಲ ಕರ್ನಾಟಕ ಅಲೆಮಾರಿ ಬುಡ್ಗ ಜಂಗಮ ಪರಿಶಿಷ್ಟ ಜಾತಿ ಕೊಪ್ಪಳ ಜಿಲ್ಲಾ ಅಧ್ಯಕ್ಷರಾಗಿಯೂ ಸಹ ಸೇವೆ ಸಲ್ಲಿಸಿದ್ದಾರೆ.