

ಕೊಪ್ಪಳ: ಬೆಳಕಿನ ಹಬ್ಬ ದೀಪಾವಳಿ ಆಚರಣೆಗೆ ನಗರ ಸೇರಿದಂತೆ ಜಿಲ್ಲಾದ್ಯಂತ ಭರದ ಸಿದ್ಧತೆ ನಡೆದಿದೆ. ಹಬ್ಬಕ್ಕೆ ಹೊಸ ಬಟ್ಟೆ, ಪೂಜೆಗೆ ಹೂ ಹಣ್ಣು, ಪಟಾಕಿ ಸೇರಿದಂತೆ ಇತರ ವಸ್ತುಗಳ ಖರೀದಿ ಜೋರಾಗಿದೆ.
ಬೆಲೆ ಏರಿಕೆ ನಡುವೆಯೂ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲು ಜನ ಕಾತರರಾಗಿದ್ದಾರೆ. ಸಂಪ್ರದಾಯಕ್ಕೆ ಚ್ಯುತಿ ಬಾರದಂತೆ ತಲೆಮಾರುಗಳಿಂದಲೂ ಮನೆ, ಅಂಗಡಿಗಳಲ್ಲಿ ನಡೆಸುವ ಲಕ್ಷ್ಮೀ ಪೂಜೆ ಮಾಡಲು ಬಿರುಸಿನ ಸಿದ್ಧತೆಗಳಲ್ಲಿ ತಲ್ಲೀನರಾಗಿದ್ದಾರೆ. ಮನೆ-ಅಂಗಡಿಗಳಿಗೆ ತಳಿರು ತೋರಣ, ರಂಗೋಲಿ, ಬಾಳೆದಿಂಡು ಹಾಗೂ ಹೂವುಗಳಿಂದ ಅಲಂಕಾರ, ಬಣ್ಣ-ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕರಿಸಲು ತಯಾರಿ ನಡೆಸಿದ್ದಾರೆ. ಮಾರುಕಟ್ಟೆಯಲ್ಲಿ ಪೂಜಾ ಸಾಮಗ್ರಿ, ಹೂ-ಹಣ್ಣು, ಬಾಳೆ-ಕಬ್ಬು, ಚೆಂಡು ಹೂ, ಸೇವಂತಿಗೆ, ಕಾಕಡ ಹೂ ಖರೀದಿಗೆ ಜನ ಮುಗಿಬಿದ್ದು ಖರೀದಿಸುತ್ತಿದ್ದಾರೆ. ಬೆಲೆ ಎಷ್ಟೆಯಾದರೂ ಹಬ್ಬದ ತಯಾರಿ ಏನು ಕಡಿಮೆಯಾಗಿಲ್ಲ. ವರ್ಷಕ್ಕೊಮ್ಮೆ ಬರುವ ದೊಡ್ಡ ಹಬ್ಬವನ್ನು ಸಡಗರದಿಂದ ಆಚರಿಸಲೇಬೇಕು ಎಂದು ಖರೀದಿಸಲಾಗುತ್ತಿರುವುದಾಗಿ ಗ್ರಾಹಕರೊಬ್ಬರು ತಿಳಿಸಿದರು.
ದೀಪಾವಳಿ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಜನಜಂಗುಳಿ ಹೆಚ್ಚಿದೆ. ಜವಾಹರ್ ರಸ್ತೆ, ಮಾರ್ಕೆಟ್ ರಸ್ತೆ, ಬಸ್ ನಿಲ್ದಾಣ ಮುಂಭಾಗದ ಕನಕದಾಸ ವೃತ್ತ ಸೇರಿದಂತೆ ವಿವಿಧೆಡೆ ಬಟ್ಟೆ ಖರೀದಿ, ಹೂವಿನ ವ್ಯಾಪಾರ, ಹಣ್ಣು ತರಕಾರಿ ಹಾಗೂ ಕುಂಬಳಕಾಯಿ, ಮಣ್ಣಿನ ಹಣತೆ ವ್ಯಾಪಾರ, ಪಟಾಕಿ ಅಂಗಡಿಗಳಲ್ಲಿ ಗ್ರಾಹಕರು ಮುಗಿಬಿದ್ದು ಕೊಂಡುಕೊಳ್ಳುವ ದೃಶ್ಯ ಸಾಮಾನ್ಯವಾಗಿತ್ತು. ಒಟ್ಟಾರೆ ಕತ್ತಲನ್ನು ಸರಿಸಿ ಬೆಳಕು ನೀಡುವ ದೀಪಾವಳಿಯನ್ನು ಸ್ವಾಗತಿಸಲು ಸಾರ್ವಜನಿಕರು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಮಾರುಕಟ್ಟೆಗಳಲ್ಲಿ ಹಬ್ಬದ ಕಳೆ ರಂಗೇರಿದೆ.
ಪ್ರತಿ ವರ್ಷದಂತೆ ಈ ಬಾರಿಯೂ ಬೆಳಕಿನ ಹಬ್ಬ ದೀಪಾವಳಿಯನ್ನು ಪರಿಸರ ಸ್ನೇಹಿ ಹಸಿರು ಪಟಾಕಿ ಬಳಕೆಯೊಂದಿಗೆ ಆಚರಿಸಿ ಮಾಲಿನ್ಯ ನಿಯಂತ್ರಣಕ್ಕೆ ಮುಂದಾಗಬೇಕು ಎಂದು ಜಿಲ್ಲಾ ಪರಿಸರ ಅಧಿಕಾರಿ ಡಾ.ಅನಿಲ್‌ಕುಮಾರ ಡಿ. ತಳಗೇರಿ ತಿಳಿಸಿದ್ದಾರೆ. ಪಟಾಕಿಯ ಪ್ಯಾಕೆಟ್ ಮೇಲೆ ಹಸಿರು ಪಟಾಕಿಯ ಚಿಹ್ನೆ, ಕ್ಯೂಆರ್ ಕೋಡ್ ಇರುವ ಪಟಾಕಿಗಳನ್ನೇ ಉಪಯೋಗಿಸಬೇಕು. ಸುಪ್ರೀಂಕೋರ್ಟ್ ಆದೇಶದಂತೆ ಹಸಿರು ಪಟಾಕಿಗಳ ಹೊರತುಪಡಿಸಿ ಉಳಿದವುಗಳನ್ನು ಬಳಕೆ ಮಾಡಬಾರದು. ರಾತ್ರಿ 8 ರಿಂದ 10 ಗಂಟೆವರೆಗೆ ಮಾತ್ರ ಪಟಾಕಿ ಸಿಡಿಸಲು ಅವಕಾಶವಿದೆ. ಪ್ರಾಣಿ, ಪಕ್ಷಿಗಳು, ಮಕ್ಕಳು ಮತ್ತು ವೃದ್ಧರಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸಬೇಕು. ಆಸ್ಪತ್ರೆ, ಶಿಕ್ಷಣ ಸಂಸ್ಥೆ ಸುತ್ತಮುತ್ತ ಹಾಗೂ ನಿಷೇಧಿತ ಪ್ರದೇಶಗಳಲ್ಲಿ ಯಾವುದೇ ರೀತಿಯ ಸಿಡಿಮದ್ದುಗಳನ್ನು ಸ್ಫೋಟಿಸುವಂತಿಲ್ಲ ಎಂದು ತಿಳಿಸಿದ್ದಾರೆ.