

ಕುಷ್ಟಗಿ: ತಾಯಿ ಮತ್ತು ಮಕ್ಕಳ ಆಸ್ಪತ್ರೆ (ಎಂಸಿಎಚ್)ಅವ್ಯವಸ್ಥೆ ಕುರಿತು ಅ.12ರಂದು ವಿಜಯವಾಣಿ ವರದಿ ಪ್ರಕಟಿಸಿದ ಹಿನ್ನೆಲೆಯಲ್ಲಿ ಗುರುವಾರ ಜಿಲ್ಲಾಧಿಕಾರಿ ಡಾ.ಸುರೇಶ ಇಟ್ನಾಳ ಭೇಟಿ ನೀಡಿ ಪರಿಶೀಲಿಸಿದರು.
ಸ್ವತಃ ರೋಗಿಗಳ ಆರೋಗ್ಯ ವಿಚಾರಿಸಿದ ಡಿಸಿ ಅವರು, ಹೆರಿಗೆ ಮಾಡಿಸಲು ಹಣ ಕೇಳುತ್ತಾರೆಯೇ ಎಂದು ಪ್ರಶ್ನಿಸಿದರು. ಇದಕ್ಕೆ ರೋಗಿಗಳು, ಸಂಬಂಧಿಕರು, ಯಾವುದೇ ರೀತಿಯ ಹಣದ ಬೇಡಿಕೆ ಇಲ್ಲ ಎಂದು ತಿಳಿಸಿದರು. ಇದು ಲಂಚದ ಆರೋಪ ನಿರಾಧಾರವಾಗಿದ್ದು, ದೂರುಗಳ ಮರುಪರಿಶೀಲನೆ ಅಗತ್ಯವಿದ್ದರೆ ಮಾಡಲಾಗುತ್ತದೆ ಎಂದು ಡಿಸಿ ತಿಳಿಸಿದರು. ಅಲ್ಲದೆ ಆಸ್ಪತ್ರೆ ಕಾರ್ಯಚಟುವಟಿಕೆ, ವೈದ್ಯಕೀಯ ಸೇವೆ ಹಾಗೂ ಮೂಲಸೌಕರ್ಯಗಳ ಕುರಿತು ಪರಿಶೀಲನೆ ನಡೆಸಿ, ರೋಗಿಗಳಿಗೆ ಸಮರ್ಪಕ ಚಿಕಿತ್ಸೆ ಮತ್ತು ಅಗತ್ಯ ಸೌಲಭ್ಯ ಒದಗಿಸಬೇಕೆಂದು ವೈದ್ಯರಿಗೆ ಸೂಚನೆ ನೀಡಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿ, ಆಸ್ಪತ್ರೆಯಲ್ಲಿ ರೋಗಿಗಳಿಗೆ ನೀಡುತ್ತಿರುವ ಚಿಕಿತ್ಸೆಯ ಗುಣಮಟ್ಟ ಹಾಗೂ ಸೌಲಭ್ಯಗಳ ಕುರಿತು ಮಾಹಿತಿ ಪಡೆಯಲಾಗಿದೆ. ಆಸ್ಪತ್ರೆಯಲ್ಲಿರುವ ಕೊರತೆಗಳ ಪಟ್ಟಿ ಕೇಳಲಾಗಿದ್ದು, ಅಧಿಕಾರಿಗಳು ನೀಡುವುದಾಗಿ ತಿಳಿಸಿದ್ದಾರೆ. ಮೂಲಸೌಕರ್ಯ ಸುಧಾರಿಸಲು ಆದ್ಯತೆ ನೀಡಲಾಗುತ್ತದೆ ಎಂದರು. ಅಲ್ಲದೆ ಆಸ್ಪತ್ರೆಯಲ್ಲಿ ಆರೋಗ್ಯ ಸೇವೆ ನೀಡಲು ಹಣ ಕೇಳುತಿದ್ದರೆ ಲೋಕಾಯುಕ್ತರಿಗೆ ದೂರು ಸಲ್ಲಿಸಬೇಕು. ಲೋಕಾಯುಕ್ತರಿಗೆ ದೂರು ನೀಡುವ ದೂರವಾಣಿ ಸಂಖ್ಯೆ ಆಸ್ಪತ್ರೆಯ ಸೂಚನಾ ಫಲಕದಲ್ಲಿ ಪ್ರದರ್ಶಿಸಲಾಗಿದೆ. ಈ ಮೂಲಕ ದೂರು ಸಲ್ಲಿಸಿದರೆ ಸೂಕ್ತ ಕ್ರಮ ಕೈಗೊಳ್ಳಲು ಸಾಧ್ಯವಾಗಲಿದೆ ಎಂದರು.
ರೈತರಿಗೆ ಪರಿಹಾರ ಜಮೆ ಮಾಡಲು ಬೇಕಾದ ಎಲ್ಲ ದಾಖಲೆಗಳನ್ನು ಈಗಾಗಲೇ ಸಿದ್ಧಪಡಿಸಲಾಗಿದೆ. ಮುಂದಿನ ಪ್ರಕ್ರಿಯೆಯಂತೆ ರೈತರ ಖಾತೆಗಳಿಗೆ ಪರಿಹಾರದ ಹಣ ಜಮೆಯಾಗಲಿದೆ ಎಂದು ಡಿಸಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು
ಡಿಎಚ್ಒ ಡಾ.ಈಶ್ವರ ಸವಡಿ, ತಹಸೀಲ್ದಾರ್ ಅಶೋಕ ಶಿಗ್ಗಾವಿ, ತಾಲೂಕು ಆರೋಗ್ಯ ಅಧಿಕಾರಿ ಆನಂದ ಗೋಟೂರು, ಪುರಸಭೆ ಮುಖ್ಯಾಧಿಕಾರಿ ವೆಂಕಪ್ಪ ಬೀಳಗಿ ಇತರರಿದ್ದರು. ಅ.12ರಂದು ವಿಜಯವಾಣಿ ‘ಎಂಸಿಎಚ್ ಅವ್ಯವಸ್ಥೆ ಆಗರ’ ಶೀರ್ಷಿಕೆಯಡಿ ವರದಿ ಪ್ರಕಟಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಸುಸಜ್ಜಿತ ಕಟ್ಟಡ ನಿರ್ಮಾಣವಾಗಿದ್ದು, ಇನ್ನಷ್ಟು ಸುಧಾರಣೆಗಳನ್ನು ಕೈಗೊಳ್ಳಲಾಗುವುದು. ಆಕ್ಸಿಜನ್ ವ್ಯವಸ್ಥೆ, ಶಸ್ತ್ರಚಿಕಿತ್ಸಾ ಕೊಠಡಿ ಸೇರಿದಂತೆ ಹಲವು ವೈದ್ಯಕೀಯ ಸೌಲಭ್ಯಗಳು ಲಭ್ಯವಿವೆ. ಖಾಸಗಿ ಆಸ್ಪತ್ರೆಗೂ ಕಡಿಮೆಯಿಲ್ಲದ ರೀತಿಯಲ್ಲಿ ಅಗತ್ಯ ವೈದ್ಯಕೀಯ ಸೇವೆ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಡಿ ಗ್ರೂಪ್ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆ ವಿಳಂಬವಾಗಿದೆ. ಆದಷ್ಟು ಬೇಗ ನೇಮಕಾತಿ ನಡೆಯಲಿದೆ ಎಂದು ಡಿಸಿ ಡಾ.ಸುರೇಶ ಇಟ್ನಾಳ ತಿಳಿಸಿದರು.